ನವದೆಹಲಿ: ದೇಶೀಯ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ನೀಡಿದ ಹೊರತಾಗಿಯೂ, ವೆಸ್ಟ್ ಇಂಡೀಸ್ ಸರಣಿಗೆ ಸರ್ಫರಾಜ್ ಖಾನ್ ಅವರನ್ನು ಕಡೆಗಣಿಸಿದ ಬಗ್ಗೆ ಬಿಸಿಸಿಐ ಸ್ಪಷ್ಟನೆ ನೀಡಿದ್ದು, ಫಿಟ್ ನೆಸ್ ಸಮಸ್ಯೆ ಮತ್ತು ಮೈದಾನದ ಹೊರಗಿನ ವರ್ತನೆಯ ಕಾರಣದಿಂದಲೇ ಆಯ್ಕೆ ಮಾಡಿಲ್ಲ ಎಂದಿದೆ.
ಮುಂಬೈನ ಬ್ಯಾಟರ್ ಆಗಿರುವ ಸರ್ಫರಾಜ್ ಖಾನ್, ಕಳೆದ ಮೂರು ರಣಜಿ ಋತುಗಳಲ್ಲಿ 2566 ರನ್ ಗಳಿಸಿದ್ದಾರೆ. ಅಂದರೆ, 2019-20ರಲ್ಲಿ 928, 2021-22ರಲ್ಲಿ 982 ರನ್ ಮತ್ತು 2022-23ರಲ್ಲಿ 656 ರನ್ ಗಳಿಸಿದ್ದಾರೆ. 25 ವರ್ಷದ ಈ ಆಟಗಾರ, ಸದ್ಯ 79.65 ಆವರೇಜ್ ಹೊಂದಿದ್ದಾರೆ. ಆದರೆ, ಕೇವಲ 42 ಆವರೇಜ್ ಹೊಂದಿರುವ ರುತುರಾಜ್ ಗಾಯಕ್‌ವಾಡ್ ಅವರ ಆಯ್ಕೆ ಮಾಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಈ ಸಂಬಂಧ ಬಿಸಿಸಿಐನ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ. ಸರ್ಫರಾಜ್ ಖಾನ್ ಅವರನ್ನು ಆಯ್ಕೆಗೆ ಪರಿಗಣಿಸದೇ ಇರಲು ಕೇವಲ ಆಟವೊಂದೇ ಕಾರಣವಲ್ಲ. ಬೇರೆ ಬೇರೆ ವಿಚಾರಗಳಿಂದಾಗಿ ಅವರನ್ನು ಪರಿಗಣಿಸಿಲ್ಲ ಎಂದಿದ್ದಾರೆ. ಅಲ್ಲದೆ, ಅವರ ಫಿಟ್ ನೆಸ್ ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಇಲ್ಲ ಎಂದೂ ಹೇಳಿದ್ದಾರೆ. ಅವರು ಇನ್ನಷ್ಟು ವರ್ಕ್‌ಔಟ್ ಮಾಡಬೇಕಾಗಿದೆ. ಅಲ್ಲದೆ, ತೂಕ ಇಳಿಸಿಕೊಳ್ಳಬೇಕಾಗಿದೆ. ಕೇವಲ ಬ್ಯಾಟಿಂಗ್ ಚೆನ್ನಾಗಿ ಮಾಡುತ್ತಾರೆ ಎಂಬುದೇ ಆಯ್ಕೆಗೆ ಮಾನದಂಡವಾಗ ಬೇಕಾಗಿಲ್ಲ ಎಂದೂ ಹೆಸರೇಳಲು ಇಚ್ಚಿಸದ ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ:‘ಇನ್ನೇನಿದ್ದರೂ ಕೋರ್ಟ್ ನಲ್ಲಿ ನಮ್ಮ ಹೋರಾಟ…’; ಪ್ರತಿಭಟನೆ ಹಿಂತೆಗೆದುಕೊಂಡ ಕುಸ್ತಿಪಟುಗಳು
ಜತೆಗೆ, ಮೈದಾನದ ಹೊರಗಿನ ಅವರ ವರ್ತನೆ ಬಗ್ಗೆಯೂ ಆಕ್ಷೇಪಗಳಿದ್ದು ಈ ಬಗ್ಗೆ ಅವರ ಕೋಚ್ ಗಮನ ಹರಿಸಬೇಕಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.