Advertisement

ಐಪಿಎಲ್‌ ರದ್ದಾದರೆ ಬಿಸಿಸಿಐಗೆ ಅಪಾರ ನಷ್ಟ: ಗಂಗೂಲಿ

08:31 AM May 17, 2020 | Sriram |

ಹೊಸದಿಲ್ಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನ 13ನೇ ಆವೃತ್ತಿಯ ಟಿ20 ಕ್ರಿಕೆಟ್‌ ಟೂರ್ನಿ ರದ್ದಾದರೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಸಹಸ್ರಾರು ಕೋಟಿ ರೂ. ನಷ್ಟವಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಕಳವಳ ವ್ಯಕ್ತಪಡಿಸಿದ್ದಾರೆ.

Advertisement

13ನೇ ಆವೃತ್ತಿಗೆ ಮಾರ್ಚ್‌ 29ರಂದು ಚಾಲನೆ ನೀಡಬೇಕಿತ್ತು. ಆದರೆ ಕೋವಿಡ್‌ 19 ಕಾರಣ ದೇಶದಲ್ಲಿ ಲಾಕ್‌ಡೌನ್‌ ನಿರ್ಬಂಧ ವಿಧಿಸಲಾಯಿತು. ಈ ಕಾರಣದಿಂದ ಬಿಸಿಸಿಐ ಐಪಿಎಲ್‌ ಲೀಗ್‌ ಅನ್ನು ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹಾಕಿತ್ತು. ಇದೀಗ ಐಪಿಎಲ್‌ ನಡೆಯದೇ ಇದ್ದರೆ ಆಗುವ ನಷ್ಟದ ಬಗ್ಗೆ ಬೆಳಕು ಚೆಲ್ಲಿರುವ ಬಿಸಿಸಿಐ ಅಧ್ಯಕ್ಷ ಗಂಗೂಲಿ ಈ ವರ್ಷ ಐಪಿಎಲ್‌ ರದ್ದಾದರೆ ಬರೋಬ್ಬರಿ 4 ಸಾವಿರ ಕೋಟಿ ರೂ.ಗಳ ನಷ್ಟ ಸಂಭವಿಸಲಿದೆ ಎಂದು ಹೇಳಿದ್ದಾರೆ.

ಹಣಕಾಸಿನ ಸ್ಥಿತಿಯನ್ನು ಗಮನಿಸುತ್ತಿದ್ದೇವೆ. ನಮ್ಮಲ್ಲಿ ಎಷ್ಟು ಹಣವಿದೆ ಎಂದು ತಿಳಿದು ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಐಪಿಎಲ್‌ ಟೂರ್ನಿಯನ್ನು ಈ ಬಾರಿ ಆಯೋಜಿಸದೆ ಇದ್ದರೆ ಅದರಿಂದ 4,000 ಕೋಟಿ ರೂ.ಗಳ ಭಾರಿ ನಷ್ಟ ಸಂಭವಿಸಲಿದೆ. ಒಂದು ವೇಳೆ ಐಪಿಎಲ್‌ ನಡೆದರೆ ನಾವು ಆಟಗಾರರ ವೇತನಕ್ಕೆ ಕತ್ತರಿ ಹಾಕದೆ ಎಲ್ಲವನ್ನು ನಿಭಾಯಿಸಲಿದ್ದೇವೆ ಎಂದು ಗಂಗೂಲಿ ಹೇಳಿದ್ದಾರೆ.

ಆಕರ್ಷಣೆಯ ಹೊರತಾಗಿ ಆರೋಗ್ಯ ಮುಖ್ಯ
ಇನ್ನು ಮುಚ್ಚಿದ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಲ್ಲದೆ ಐಪಿಎಲ್‌ ನಡೆಸುವ ಬಗ್ಗೆಯೂ ಆಲೋಚನೆ ಮಾಡಲಾಗಿದೆ. ಕ್ರೀಡೆಯಲ್ಲಿ ಪ್ರೇಕ್ಷಕರು ಇಲ್ಲದಿದ್ದರೆ ಟೂರ್ನಿಯ ಆಕರ್ಷಣೆ ಕ್ಷೀಣಿಸಲಿದೆ. ಇದರ ಅನುಭವ ನನಗಿದೆ. 1999ರಲ್ಲಿ ಪಾಕಿಸ್ಥಾನ ವಿರುದ್ಧದ ಏಷ್ಯನ್‌ ಟೆಸ್ಟ್‌ ಚಾಂಪಿಯನ್‌ಶಿಪ್‌ ಪಂದ್ಯದಲ್ಲಿ ಪ್ರೇಕ್ಷಕರ ದಾಂಧಲೆಯಿಂದಾಗಿ ಪಂದ್ಯದ ಅಂತಿಮ ದಿನವನ್ನು ಮುಚ್ಚಿದ ಕ್ರೀಡಾಂಗಣದಲ್ಲಿ ಆಡಿದ್ದೆವು. ಅಲ್ಲಿ ಖಂಡಿತಾ ಉತ್ಸಾಹದ ಕೊರತೆ ಕಂಡುಬಂದಿತ್ತು ಎಂದು ಗಂಗೂಲಿ ವಿವರಿಸಿದ್ದಾರೆ.

ಒಂದೊಮ್ಮೆ ಸಾಮಾಜಿಕ ಅಂತರದ ದೃಷ್ಟಿಯಿಂದ ಸೀಮಿತ ಪ್ರೇಕ್ಷಕರ ಎದುರು ಐಪಿಎಲ್‌ ಆಡಿದರೂ ಪಂದ್ಯ ವೀಕ್ಷಿಸಲು ಬರುವ ಜನರು ಸುರಕ್ಷಿತವಾಗಿ ಮನೆ ತಲುಪಿದ್ದಾರೆಯೇ ಎಂಬುದರ ಬಗ್ಗೆ ಎಚ್ಚರ ವಹಿಸಬೇಕಾಗುತ್ತದೆ. ಇದನ್ನು ನಿರ್ವಹಿಸುವುದು ಬಹಳ ಕಷ್ಟ. ಉಳಿದಂತೆ ಎಲ್ಲ ವಿದೇಶಿ ಆಟಗಾರರು ಕೂಡ ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುವ ಬಗ್ಗೆಯೂ ಖಚಿತತೆಯೂ ಇಲ್ಲ. ಒಟ್ಟಾರೆಯಾಗಿ ಸುರಕ್ಷಿತ ವಾತಾವರಣ ನಿರ್ಮಾಣವಾಗುವವರೆಗೆ ಯಾವುದೇ ಕ್ರೀಡಾ ಚಟುವಟಿಕೆ ನಡೆಸಲು ಸಾಧ್ಯವಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.

Advertisement

ಐದು ಪಂದ್ಯಗಳ ಸರಣಿ ಕಷ್ಟ: ಗಂಗೂಲಿ
ಈ ಹಿಂದೆ ನಿರ್ಧರಿಸಿದಂತೆ ನಾಲ್ಕು ಪಂದ್ಯಗಳ ಸರಣಿ ಬದಲು ಐದು ಪಂದ್ಯಗಳ ಟೆಸ್ಟ್‌ ಸರಣಿ ನಡೆಸುವಂತೆ ಕ್ರಿಕೆಟ್‌ ಆಸ್ಟ್ರೇಲಿಯದ ಪ್ರಸ್ತಾವವನ್ನು ಒಪ್ಪಿಕೊಳ್ಳುವುದು ಕಷ್ಟವೆಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಐದು ಪಂದ್ಯಗಳ ಸರಣಿಯಲ್ಲಿ ಭಾರತ ಪಾಲ್ಗೊಳ್ಳಲು ಸಾಧ್ಯವಿಲ್ಲ. ಈ ಪ್ರವಾಸದ ವೇಳೆ ನಿಗದಿತ ಓವರ್‌ಗಳ ಪಂದ್ಯಗಳಿವೆ ಮಾತ್ರವಲ್ಲದೆ 14 ದಿನಗಳ ಕ್ವಾರಂಟೈನ್‌ ಮಾರ್ಗಸೂಚಿಯನ್ನು ಆಟಗಾರರು ಪಾಲಿಸಬೇಕಾಗಿದೆ. ಇದರಿಂದ ಪ್ರವಾಸದ ಅವಧಿ ಹೆಚ್ಚಾಗುತ್ತಿದೆ ಎಂದು ಗಂಗೂಲಿ ವಿವರಿಸಿದ್ದಾರೆ. ಈ ಹಿಂದೆ ಕ್ರಿಕೆಟ್‌ ಆಸ್ಟ್ರೇಲಿಯದ ಸಿಇಒ ಕೆವಿನ್‌ ರಾಬರ್ಟ್ಸ್ ಅವರು ಭಾರತ ವಿರುದ್ಧ ಐದು ಪಂದ್ಯಗಳ ಟೆಸ್ಟ್‌ ಸರಣಿ ನಡೆಸುವ ಇರಾದೆ ವ್ಯಕ್ತಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next