Advertisement

ಬಿ.ಸಿ.ರೋಡ್‌: ರಸ್ತೆಗಿಳಿದ ಒಂದು ಖಾಸಗಿ ಬಸ್‌

08:31 PM Jul 01, 2021 | Team Udayavani |

ಬಂಟ್ವಾಳ: ದ.ಕ. ಜಿಲ್ಲೆಯ ಕೆಲವೆಡೆ ಗುರುವಾರದಿಂದ ಖಾಸಗಿ ಬಸ್‌ ಓಡಾಟ ನಡೆಸಿದ್ದು, ಬಿ.ಸಿ.ರೋಡ್‌ನ‌ಲ್ಲಿ ಕೇವಲ ಒಂದು ಖಾಸಗಿ ಬಸ್‌ ಓಡಾಟ ನಡೆಸಿದೆ. ಬಿ.ಸಿ.ರೋಡ್‌-ಪೊಳಲಿ- ಕೈಕಂಬ-ಮಂಗಳೂರು ರೂಟ್‌ನಲ್ಲಿ ಸಂಚರಿಸುವ ಏಕೈಕ ಬಸ್‌ ರಸ್ತೆಗಿಳಿದಿತ್ತು.

Advertisement

ಬಂಟ್ವಾಳದ ಬಹುತೇಕ ಗ್ರಾಮೀಣ ಭಾಗಗಳಿಗೆ ಖಾಸಗಿ ಬಸ್‌ಗಳೇ ಸಂಚಾರ ನಡೆಸುತ್ತಿದ್ದು, ಶೇ. 50 ಪ್ರಯಾಣಿಕರಿಗಷ್ಟೇ ಸಂಚರಿಸಲು ಅವಕಾಶ ಸೇರಿದಂತೆ ಹಲವು ಕಾರಣಗಳಿಂದ ಬಸ್‌ ಮಾಲಕರು ಬಸ್‌ ಓಡಿಸಲು ಮುಂದೆ ಬಂದಿರಲಿಲ್ಲ. ಜತೆಗೆ ಮಧ್ಯಾಹ್ನದವರೆಗೆ ಮಾತ್ರ ಲಾಕ್‌ಡೌನ್‌ ಸಡಿಲಿಕೆ ಇರುವುದರಿಂದಲೂ ಹೆಚ್ಚಿನ ಬಸ್‌ಗಳು ರಸ್ತೆಗಿಳಿಯಲಿಲ್ಲ.

ಜಿಲ್ಲೆಯಲ್ಲಿ ಜು. 5ರ ಬಳಿಕ ಬಹುತೇಕ ಲಾಕ್‌ಡೌನ್‌ ತೆರವುಗೊಳ್ಳುವ ಸಾಧ್ಯತೆ ಇರುವುದರಿಂದ ಆ ಬಳಿಕವೇ ಹೆಚ್ಚಿನ ಬಸ್‌ಗಳು ಓಡಾಟ ನಡೆಸುವ ಸಾಧ್ಯತೆ ಇದೆ. ತಾಲೂಕು ಕೇಂದ್ರ ಬಿ.ಸಿ.ರೋಡ್‌ನಿಂದ ಸಿದ್ದಕಟ್ಟೆ-ಮೂಡುಬಿದಿರೆ, ಸಜೀಪ- ಮುಡಿಪು, ಪೊಳಲಿ-ಕೈಕಂಬ, ಸರಪಾಡಿ, ವಾಮದಪದವು, ಮಂಚಿ- ಸಾಲೆತ್ತೂರು, ಬೆಂಜನ ಪದವು-ನೀರುಮಾರ್ಗ ಮೊದ ಲಾದ ರೂಟ್‌ಗಳಲ್ಲಿ ಖಾಸಗಿ ಬಸ್‌ಗಳು ಓಡುತ್ತವೆ.

20ಕ್ಕೂ ಅಧಿಕ ಕೆಎಸ್‌ಆರ್‌ಟಿಸಿ ಬಸ್‌ ಗಳ ಸಂಚಾರ :

ಎಂದಿನಂತೆ ಮಧ್ಯಾಹ್ನದವರೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಿದ್ದು, ಬಿ.ಸಿ.ರೋಡ್‌ ಘಟಕದಿಂದ 20ಕ್ಕೂ ಅಧಿಕ ಬಸ್‌ಗಳು ಓಡಾಟ ನಡೆಸಿದ್ದವು. ಪುತ್ತೂರು, ವಿಟ್ಲ, ಸ್ಟೇಟ್‌ಬ್ಯಾಂಕ್‌ ರೂಟ್‌ಗಳಲ್ಲಿ ಸಂಚಾರ ನಡೆಸಿವೆ.

Advertisement

ಉಳಿದಂತೆ ಮಂಗಳೂರು, ಧರ್ಮಸ್ಥಳ, ಪುತ್ತೂರು ಘಟಕಗಳ ಬಸ್‌ಗಳು ಬಿ.ಸಿ.ರೋಡ್‌ನ‌ ಮೂಲಕ ಸಂಚಾರ ನಡೆಸಿವೆ. ಸದ್ಯದ ಪರಿಸ್ಥಿತಿಯಲ್ಲಿ ಗ್ರಾಮೀಣ ಭಾಗಕ್ಕೆ ಯಾವುದೇ ಬಸ್‌ಗಳು ಸಂಚಾರ ನಡೆಸದೇ ಇರುವುದರಿಂದ ಅಲ್ಲಿನ ಜನತೆ ಆಟೋ ರಿಕ್ಷಾ, ಟೆಂಪೋ, ಮ್ಯಾಕ್ಸಿಕ್ಯಾಬ್‌ ಆಶ್ರಯಿಸಿದ್ದಾರೆ.

ಬೆಳ್ತಂಗಡಿಯಲ್ಲೂ ಒಂದೇ  ಬಸ್‌ ಸಂಚಾರ:

ಬೆಳ್ತಂಗಡಿ ತಾಲೂಕಿನಲ್ಲಿ ಗುರುವಾರ ಖಾಸಗಿ ಬಸ್‌ ಸಂಚಾರ ನಡೆಸಿದ್ದು,  ಉಪ್ಪಿನಂಗಡಿ-ಬೆಳ್ತಂಗಡಿ ನಡುವೆ ಬಸ್‌ ಸಂಚಾರ ನಡೆಸಿದೆ. ಇತರೆ ಯಾವುದೇ ಭಾಗಗಳಿಗೆ ಖಾಸಗಿ ಬಸ್‌ ಸಂಚಾರ ನಡೆಸಿಲ್ಲ. ಕೆಎಸ್‌ಆರ್‌ಟಿಸಿ ಬಸ್‌ಗಳು ಪುತ್ತೂರು, ಮಂಗಳೂರು ಸಹಿತ ಪ್ರಮುಖ ಭಾಗಗಳಿಗೆ ಸಂಚಾರ ನಡೆಸಿದೆ.

102  ಕೆಎಸ್‌ಆರ್‌ಟಿಸಿ ಬಸ್‌ ಓಡಾಟ:

ಪುತ್ತೂರು: ಲಾಕ್‌ಡೌನ್‌ ಸಡಿಲಿಕೆ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಓಡಾಟ ನಡೆಸುತ್ತಿದ್ದು, ಜು.1 ಪುತ್ತೂರು ವಿಭಾಗದ ಐದು ಘಟಕಗಳಲ್ಲಿ 102 ಬಸ್‌ಗಳು ಓಡಾಟ ನಡೆಸಿವೆ. ಬುಧವಾರವು ಬಸ್‌ ಓಡಾಟ ಇದೇ ಸಂಖ್ಯೆಯಲ್ಲಿತ್ತು ಎಂದು ವಿಭಾಗೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದ.ಕ.ಜಿಲ್ಲೆಯಾದ್ಯಂತ ಗುರುವಾರದಿಂದ ಖಾಸಗಿ ಬಸ್‌ ಓಡಾಟ ಪ್ರಾರಂಭಿಸಲಾಗಿದ್ದರೂ ಪುತ್ತೂರಿನಲ್ಲಿ ಓಡಾಟ ಕಂಡು ಬರಲಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next