Advertisement

ಬಿ.ಸಿ.ರೋಡ್‌ನ‌ಲ್ಲಿ ಹೆದ್ದಾರಿಯೇ ಬಸ್‌ ನಿಲ್ದಾಣ! ‌

09:25 PM Apr 01, 2021 | Team Udayavani |

ಬಂಟ್ವಾಳ: ಸದಾ ವಾಹನಗಳಿಂದ ತುಂಬಿ ರುವ ಪೇಟೆ ಬಿ.ಸಿ.ರೋಡ್‌ ಸಮಸ್ಯೆಗಳಿಂದಲೂ ಮುಕ್ತವಾಗಿಲ್ಲ. ಹಲವು ವರ್ಷಗಳಿಂದ ಹೆದ್ದಾರಿಯೇ ಇಲ್ಲಿನ ಬಸ್‌ ನಿಲ್ದಾಣವಾಗಿದ್ದು, ಸಾಲು ಗಟ್ಟಿ ಬಸ್‌ಗಳು ನಿಂತರೆ ಹೆದ್ದಾರಿಯೇ ಬಂದ್‌ ಆಗುವ ಸ್ಥಿತಿ. ನಿತ್ಯವೂ ಇದೇ ರೀತಿ ಬಸ್‌ಗಳ ನಿಲುಗಡೆಯಿಂದ ಟ್ರಾಫಿಕ್‌ ಜಾಮ್‌ನ ತೊಂದರೆ ತಪ್ಪುವುದಿಲ್ಲ.

Advertisement

ಮಂಗಳೂರು ಭಾಗದಿಂದ ಪುತ್ತೂರು,  ಧರ್ಮಸ್ಥಳ, ವಿಟ್ಲ ಮೊದಲಾದ ಭಾಗಗಳಿಗೆ ತೆರಳುವ ಬಸ್‌ಗಳ ಜತೆಗೆ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ದಾವಣಗೆರೆ ಮೊದಲಾದ ಪ್ರದೇಶಗಳಿಗೆ ತೆರಳುವ ಬಸ್‌ಗಳು ಕೂಡ ಇಲ್ಲೇ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು ಮತ್ತು ಇಳಿಸುವುದು. ಬಳಿಕ ಇತರ ಬಸ್‌ಗಳ ಜತೆಗೆ ಸ್ಪರ್ಧೆಗಾಗಿ ಕೊಂಚ ಹೊತ್ತು ಹೆದ್ದಾರಿಯಲ್ಲೇ ಬಸ್‌ ನಿಲ್ಲಿಸಿ ಪ್ರಯಾಣಿಕರಿಗಾಗಿ ಕಾಯುತ್ತಾರೆ. ಹೀಗೆ ಒಂದರ ಹಿಂದೆ ಒಂದರಂತೆ ಐದಾರು ಬಸ್‌ಗಳು  ನಿಂತರೆ ಸಾಕು ಇಡೀ ಹೆದ್ದಾರಿಯೇ ಬಂದ್‌ ಆಗುತ್ತದೆ. ಕೆಲವೊಂದು ಸಂದರ್ಭದಲ್ಲಿ ಸುಮಾರು 10 ಬಸ್‌ಗಳು ಕೂಡ ನಿಲ್ಲುತ್ತವೆ.

ಅಲ್ಲೇ ಪಕ್ಕದಲ್ಲಿ ರಿಕ್ಷಾ ನಿಲ್ದಾಣವಿದ್ದು, ಅವುಗಳು ಕೂಡ ನಿಲ್ದಾಣದಿಂದ ಹೊರ ಬರಬೇಕಾದರೆ ಬಸ್‌ ಹೋಗುವವರೆಗೆ ಕಾಯಬೇಕಾದ ಸ್ಥಿತಿ ಇದೆ. ಈ ನಿಲ್ದಾಣಕ್ಕೆ ಕೆಎಸ್‌ಆರ್‌ಟಿಸಿ ಹಾಗೂ ಕಾಂಟ್ರಾಕ್ಟ್ ಕ್ಯಾರೇಜ್‌ ಖಾಸಗಿ ಬಸ್‌ಗಳು ಆಗಮಿಸುತ್ತಿದ್ದು, ಕೆಎಸ್‌ಆರ್‌ಟಿಸಿಗಿಂತಲೂ ಕೊಂಚ ಹೆಚ್ಚು ಹೊತ್ತು ಖಾಸಗಿ ಬಸ್‌ಗಳನ್ನು ನಿಲ್ಲಿಸಲಾಗುತ್ತದೆ.

ಸಂಜೆ ಹೆಚ್ಚಿನ ತೊಂದರೆ :

ಸಂಜೆ ಹೊತ್ತಿನಲ್ಲಿ ಮಂಗಳೂರು ಭಾಗದಿಂದ ಹೆಚ್ಚಿನ ವಾಹನಗಳು ಬಿ.ಸಿ.ರೋಡ್‌ನ‌ತ್ತ ಆಗಮಿ ಸುವುದರಿಂದ ಹೆಚ್ಚಿನ ಸಂಚಾರದೊತ್ತಡ ಇರುತ್ತದೆ. ಇದೇ ವೇಳೆ ಈ ರೀತಿ ಬಸ್‌ಗಳು ಸಾಲುಗಟ್ಟಿ ನಿಂತಿದ್ದರೆ, ಟ್ರಾಫಿಕ್‌ ಜಾಮ್‌ ಕೂಡ ಉಂಟಾಗುತ್ತದೆ. ಜತೆಗೆ ಸಂಜೆಯ ಹೊತ್ತು ಪ್ರಯಾಣಿಕರ ಒತ್ತಡವೂ ಹೆಚ್ಚಿರುವುದರಿಂದ ಬಸ್‌ಗಳು ಕೊಂಚ ಹೆಚ್ಚು ಹೊತ್ತೇ ನಿಲ್ಲುತ್ತವೆ. ಬಸ್‌ಗಳು ಮಂಗಳೂರು ಭಾಗದಿಂದ ಬಂದ ಪ್ರಯಾಣಿಕರನ್ನು ಇಳಿಸಿ, ತಮ್ಮ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋದರೆ ಹೆಚ್ಚಿನ ಸಮಸ್ಯೆಯಿಲ್ಲ. ಆದರೆ ಪ್ರಯಾಣಿಕರಿಗಾಗಿ ಬಸ್‌ಗಳು ನಿಂತು ಕಾಯುವುದರಿಂದ ಹೆಚ್ಚಿನ ತೊಂದರೆ ಎದುರಾಗುತ್ತಿದೆ. ಒಮ್ಮೆ ನಿಲ್ಲುವಾಗ ಒಂದೇ ಭಾಗಕ್ಕೆ ತೆರಳುವ 2-3 ಬಸ್‌ಗಳು ಇರುವುದರಿಂದ ಸಾಲುಗಟ್ಟಿ ಹೋದರೆ ಪ್ರಯಾಣಿಕರು ಸಿಗುವುದಿಲ್ಲ ಎಂದು ಪ್ರತಿ ಬಸ್‌ನವರು ಬಿ.ಸಿ.ರೋಡ್‌ನ‌ಲ್ಲಿ ಕೊಂಚ ಹೊತ್ತು ನಿಂತೇ ಹೋಗುತ್ತಾರೆ.

Advertisement

ಯಾರ ತಪ್ಪೆಂದು ಹೇಳುವಂತಿಲ್ಲ! :

ಬಸ್‌ಗಳು ಹೆದ್ದಾರಿಯಲ್ಲಿ ನಿಲ್ಲುವುದ್ದನ್ನು ಬಸ್ಸಿನವರದ್ದೇ ತಪ್ಪು ಎಂದು ಹೇಳುವಂತಿಲ್ಲ. ಅವರಿಗೆ ಸಮರ್ಪಕ ನಿಲುಗಡೆ ಇಲ್ಲದ ಕಾರಣ ಈ ರೀತಿಯ ತೊಂದರೆ ಇದೆ. ನಿಲ್ದಾಣ ಇದ್ದರೂ ಅಲ್ಲಿಗೆ ಹೋಗುವಂತಿಲ್ಲ. ಹೀಗಾಗಿ ಬಸ್ಸಿನವರ ಮೇಲೆ ಆರೋಪ ಹೊರಿಸುವುದು ಸರಿಯಲ್ಲ. ಬಸ್ಸಿನ ವರು ಕೂಡ ತಮ್ಮಿಂದಾಗಿ ಇತರ ವಾಹನಗಳಿಗೆ ತೊಂದರೆ ಯಾಗಬಾರದು ಎಂದು ಪ್ರಯಾಣಿಕರು ಬಸ್ಸನ್ನೇರಿದ ತತ್‌ಕ್ಷಣ ಹೊರಟರೆ ಸಮಸ್ಯೆ ಪರಿಹಾರವಾಗುತ್ತದೆ.

ಇನ್ನೊಂದು ಬದಿ ಸರ್ವೀಸ್‌ ರಸ್ತೆ ನಿಲ್ದಾಣ :

ಪುತ್ತೂರು, ಧರ್ಮಸ್ಥಳ ಮೊದಲಾದ ಭಾಗಗಳಿಂದ ಆಗಮಿಸುವ ಬಸ್‌ಗಳು ಮಂಗಳೂರಿಗೆ ತೆರಳುವ ವೇಳೆ ಸರ್ವೀಸ್‌ ರಸ್ತೆಯಲ್ಲೇ  ನಿಲ್ಲಿಸಬೇಕಾದ ಸ್ಥಿತಿ ಇದೆ. ಆದರೆ ಇಲ್ಲಿ ಹೆದ್ದಾರಿಯಲ್ಲಿ ಬರುವ ವಾಹನಗಳು ಫ್ಲೈಓವರ್‌ ಮೂಲಕ ಸಾಗುವುದರಿಂದ ಹೆಚ್ಚಿನ ತೊಂದರೆ ಉಂಟಾಗಿಲ್ಲ.

ಬಸ್‌ಗಳಿಗೆ ಸೂಕ್ತ ನಿಲ್ದಾಣಗಳು ಇಲ್ಲದ ಕಾರಣ ಈ ರೀತಿಯ ತೊಂದರೆ ಎದುರಾಗುತ್ತದೆ. ಹೀಗಾಗಿ ನಾವು ಸಿಬಂದಿ ಮೂಲಕ ಬಸ್‌ಗಳು ಹೆಚ್ಚು ಹೊತ್ತು ನಿಲ್ಲದಂತೆ ಸೂಚನೆ ನೀಡುತ್ತೇವೆ. ಹೆಚ್ಚಿನ ಬಸ್‌ಗಳು ಬರುವುದರಿಂದ ಸಮಸ್ಯೆಯಾಗುತ್ತದೆ. ಬಿ.ಸಿ.ರೋಡ್‌ನ‌ಲ್ಲಿ ಸಾಕಷ್ಟು ಕಡೆ ಪಾರ್ಕಿಂಗ್‌ ಸಮಸ್ಯೆ ಕೂಡ ಇದೆ. -ರಾಜೇಶ್‌ ಕೆ.ವಿ., ಪಿಎಸ್‌ಐ, ಸಂಚಾರಿ ಪೊಲೀಸ್‌ ಠಾಣೆ ಬಂಟ್ವಾಳ

 

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next