Advertisement

ಕೆರೆಗಳ ವರದಿ ಪರಿಗಣಿಸದ ಪಾಲಿಕೆ

01:01 AM Feb 24, 2020 | Lakshmi GovindaRaj |

ಬೆಂಗಳೂರು: ಹುಳಿಮಾವು ಕೆರೆ ದುರಂತ ಸಂಭವಿಸಿ ಇಂದಿಗೆ (ಫೆ.24)ನಾಲ್ಕು ತಿಂಗಳಾಗಲಿದೆ. ಆದರೆ, ಇದಕ್ಕೆ “ಪರೋಕ್ಷವಾಗಿ ಕಾರಣರಾದ ಪಾಲಿಕೆಯ ಕೆರೆ ವಿಭಾಗದ ಅಧಿಕಾರಿಗಳ’ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ.

Advertisement

ಈ ಮಧ್ಯೆ ಸರ್ಕಾರವು ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕರಾದ ಡಾ.ಬಿ.ಆರ್‌.ಶ್ರೀನಿವಾಸ ಮೂರ್ತಿ ಅವರ ನೇತೃತ್ವದಲ್ಲಿ ತ್ರಿಸದಸ್ಯ ತಾಂತ್ರಿಕ ಸಮಿತಿ ರಚನೆ ಮಾಡಿತ್ತು. ಸಮಿತಿಯು ದೊಡ್ಡಬಿದರಕಲ್ಲು ಕೆರೆ, ಹೊಸಕೆರೆಹಳ್ಳಿ ಕೆರೆ, ಹುಳಿಮಾವು ಕೆರೆ ಹಾಗೂ ನಗರದ ಆಯ್ದ 15 ಕೆರೆಗಳ ಬಗ್ಗೆ ಸರ್ಕಾರಕ್ಕೆ ಹಾಗೂ ಪಾಲಿಕೆಗೆ ವರದಿ ಸಲ್ಲಿಸಿ ಒಂದು ತಿಂಗಳಾಗಿದೆ.

ಸಮಿತಿ ನೀಡಿದ ವರದಿಯ ಆಧಾರದ ಮೇಲೆ ಪಾಲಿಕೆಯ ಅಧಿಕಾರಿಗಳು ಇಲ್ಲಿಯವರೆಗೆ ಒಂದು ನಿರ್ದಿಷ್ಟ ಯೋಜನೆ ಅಥವಾ ಬದಲಾವಣೆ ತಂದಿಲ್ಲ. ಪಾಲಿಕೆ ತನ್ನ ವ್ಯಾಪ್ತಿಯಲ್ಲಿರುವ ಕೆರೆ, ಕಟ್ಟಡ ಸೇರಿದಂತೆ ಎಲ್ಲಿಯಾದರೂ ದುರಂತ ಸಂಭವಿಸಿದರೆ ಸುಧಾರಣಾ ಕ್ರಮ ತೆಗೆದುಕೊಳ್ಳುವ ಮಾತನಾಡುತ್ತದೆ. ಇದಕ್ಕೆ ಸಂಬಂಧಿಸಿದಂತೆ ಸಮಿತಿಗಳು ರಚನೆಯಾಗುತ್ತವೆ. ಇವು ದುರಂತದ ನೆನಪು ಮಾಸುವವರೆಗೆ ಮಾತ್ರ. ಕೆರೆ ದುರಂತ ಹಾಗೂ ಸಮಿತಿ ರಚನೆ ವಿಚಾರದಲ್ಲೂ ಪಾಲಿಕೆ ಇದೇ ರೀತಿ ನಡೆದುಕೊಂಡಿದೆ.

ಹುಳಿಮಾವು ಕೆರೆ ಪ್ರಕರಣದ ತನಿಖೆಯಲ್ಲಿ ಅಧಿಕಾರಿ ಗಳ ನಿರ್ಲಕ್ಷ್ಯ ಧೋರಣೆಯಿಂದಲೇ ಅವಘಡ ನಡೆದಿದೆ. ಕೆರೆಯ ಏರಿಯನ್ನು ಒಡೆಯುವ ವೇಳೆ ಎಂಜಿನಿಯರ್‌ ಅಥವಾ ತಜ್ಞರು ಆ ಸ್ಥಳದಲ್ಲಿ ಹಾಜರಿದ್ದಿದ್ದರೆ ಅವಘಡ ತಪ್ಪಿಸಬಹುದಿತ್ತು ಎಂದು ತನಿಖೆ ನಡೆಸಿದ ಪೊಲೀಸ್‌ ಇಲಾಖೆಯ ಅಧಿಕಾರಿಗಳು ತಿಳಿಸಿದ್ದರು. ಇದಕ್ಕೆ ಬಿಬಿಎಂಪಿಯ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಅವರೂ ಸಮ್ಮತಿ ಸೂಚಿಸಿದ್ದರು. ಆದರೆ, ಆಂತರಿಕ ತನಿಖೆಯಾದ ಬಗ್ಗೆ ಯಾವುದೇ ವರದಿಯಾಗಿಲ್ಲ.

ಪದೇ ಪದೆ ಕೆರೆಗಳಿಂದ ಅನಾಹುತ ಸಂಭವಿಸುತ್ತಲೇ ಇದ್ದರೂ, ಇದನ್ನು ತಡೆಯುವ ನಿಟ್ಟಿನಲ್ಲಿ ಬಿಬಿಎಂಪಿ ಮುಂಜಾಗ್ರತಾ ಕ್ರಮವನ್ನೂ ತೆಗೆದುಕೊಂಡಿಲ್ಲ. ಉಳಿದ ಕೆರೆಗಳ ಬಗ್ಗೆ ಅಧ್ಯಯನ ಮಾಡುವುದು ಅಥವಾ ಭವಿಷ್ಯದಲ್ಲಿ ಈ ರೀತಿ ಅವಘಡ ಸಂಭವಿಸಿದರೆ, ಅದನ್ನು ತಡೆಯುವುದು ಹೇಗೆ ಎನ್ನುವ ಬಗ್ಗೆಯೂ ಚರ್ಚೆ ನಡೆದಿಲ್ಲ.

Advertisement

ಮೂರು ಕೆರೆಗಳ ಬಗ್ಗೆ ಸಮಿತಿ ಉಲ್ಲೇಖ: ದೊಡ್ಡಬಿದರಕಲ್ಲು, ಹೊಸಕೆರೆಹಳ್ಳಿ ಹಾಗೂ ಹುಳಿಮಾವು ಕೆರೆಗಳ ಭಾಗದಲ್ಲಿ ಸೃಷ್ಟಿಯಾದ ದುರಂತಗಳಿಗೆ ಪಾಲಿಕೆಯ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿದೆ. ದೊಡ್ಡಬಿದರಕಲ್ಲು ಮತ್ತು ಹೊಸಕೆರೆಹಳ್ಳಿಯ ಏರಿಯ ಭಾಗದಲ್ಲಿ ಪೈಪ್‌ಗ್ಳನ್ನು ಅಳವಡಿಸಲು ಮುಂದಾಗಿದ್ದು, ಇದು ಈ ಭಾಗದಲ್ಲಿ ಮಣ್ಣು ಸಡಿಲಗೊಂಡು ಅನಾಹುತ ಸಂಭವಿಸಿದೆ.

ಇನ್ನು ಹುಳಿಮಾವು ಕೆರೆ ಭಾಗದಲ್ಲಿ ನೀರು ಹರಿದು ಹೋಗಲು ಸ್ಥಳಾವಕಾಶ ನೀಡಿಲ್ಲ. ಸರಾಗವಾಗಿ ನೀರು ಹರಿದು ಹೋಗಬೇಕಾಗಿದ್ದ ಪ್ರದೇಶದಲ್ಲಿ ಒತ್ತುವರಿಯಾಗಿದೆ. ಇದನ್ನು ತೆರವು ಮಾಡುವಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ತಾಂತ್ರಿಕ ಸಮಿತಿಯ ಸದಸ್ಯರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಪಾಲಿಕೆ ವ್ಯಾಪ್ತಿಯ 15 ಕೆರೆಗಳ ಅಧ್ಯಯನ: ಕಾಲಮಿತಿಯಲ್ಲಿ ಪಾಲಿಕೆಯ ವ್ಯಾಪ್ತಿಯ ಎಲ್ಲ ಕೆರೆಗಳ ಬಗ್ಗೆ ಸರ್ವೇ ಮಾಡಲು ಸಾಧ್ಯವಿಲ್ಲದ ಕಾರಣ ಆಯ್ದ 15 ಕೆರೆಗಳ ಬಗ್ಗೆ ತಾಂತ್ರಿಕ ಸಮಿತಿ ಪರಿಶೀಲಿಸಿ, ಜ.20ಕ್ಕೆ ಸರ್ಕಾರಕ್ಕೆ ವರದಿ ನೀಡಿದೆ. ಬೈರಸಂದ್ರ ಕೆರೆ, ರಾಚೇನಹಳ್ಳಿ ಕೆರೆ,ಸಿಂಗಸಂದ್ರ ಕೆರೆ, ದೊಡ್ಡಬೊಮ್ಮಸಂದ್ರ ಕೆರೆ, ದೊರೆಸ್ವಾಮಿ ಕೆರೆ, ಸತ್ಯಮ್ಮನಕುಂಟೆ ಕೆರೆ, ಗೊಡಪ್ಪನಪಾಳ್ಯ ಕೆರೆ, ಭಟ್ಟರಹಳ್ಳಿ ಕೆರೆ, ಕಲ್ಕೆರೆ, ಬೆನ್ನಿಗಾನಹಳ್ಳಿ ಹೊರಮಾವು ಜಯಂತಿ ಕೆರೆ, ಹೊರಮಾವು ಕೆರೆ, ಆಗರ ಕೆರೆಗಳನ್ನು ಪರಿಶೀಲಿಸಲಾಗಿದೆ.

ದುರಂತಕ್ಕೆ ಕಾರಣಗಳು
-ದೊಡ್ಡಬಿದರ ಕಲ್ಲು ಹಾಗೂ ಹೊಸಕೆರೆಹಳ್ಳಿ ಕೆರೆ ದುರಂತಕ್ಕೆ ಈ ಕೆರೆ ಭಾಗದಲ್ಲಿ ಅಳವಡಿಸಲಾಗಿದ್ದ ಅವೈಜ್ಞಾನಿಕ ಪೈಪ್‌ಗ್ಳ ಅಳವಡಿಕೆ.

-ಹುಳಿಮಾವು ಕೆರೆಯ ಮೇಲ್ಭಾಗದಲ್ಲಿ ಗುಟ್ಟಿಗೆರೆ ಕೆರೆಯನ್ನು ಅಭಿವೃದ್ಧಿ ಮಾಡಲು ಈ ಕೆರೆಯಲ್ಲಿದ್ದ ನೀರನ್ನು ಹುಳಿಮಾವು ಕೆರೆಗೆ ಏಕಾಏಕಿ ನೀರು ಹರಿಸಲಾಗಿದ್ದು, ಹುಳಿಮಾವು ಕೆರೆ ಭಾಗದಲ್ಲಿ ನೀರು ಸರಾಗವಾಗಿ ಹರಿದುಹೋಗಲು ಸ್ಥಳಾವಕಾಶ ಇಲ್ಲದ ಹಿನ್ನೆಲೆಯಲ್ಲಿ ಒಂದೇ ಕಡೆ ಹರಿದು ಸಮಸ್ಯೆಯಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ತಾಂತ್ರಿಕ ಸಮಿತಿ ನೀಡಿರುವ ನಿರ್ದಿಷ್ಟ ಸೂಚನೆಗಳು
-ಕೆರೆಗಳ ದಂಡೆ ಹಾಗೂ ಏರಿ ಮೇಲೆ ಒತ್ತಡ ಹಾಕಬಾರದು.

-ಕೆರೆಯ ಮೇಲ್ದಂಡೆಯಲ್ಲಿ ಸಸಿಗಳನ್ನು ನೆಡಬಾರದು. ಇದರಿಂದ ಕೆರೆ ಏರಿ ಹಾಗೂ ಕೋಡಿ ಒಡೆಯುವುದಕ್ಕೆ ಅವಕಾಶ ನೀಡಿದಂತಾಗುತ್ತದೆ.

-ರಾಜಕಾಲುವೆ ಸ್ವಚ್ಛವಾಗಿರಬೇಕು ಹಾಗೂ ರಾಜಕಾಲುವೆ ಒತ್ತುವರಿಗೆ ಕಡಿವಾಣ ಅಗತ್ಯ

-ಬಿಬಿಎಂಪಿ, ಜಲ ಮಂಡಳಿ, ಬಿಡಿಎ, ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳ ನಡುವೆ ಸಮನ್ವಯತೆ ಇರಬೇಕು. ಒಂದು ಇಲಾಖೆಯ ಕೆಲಸ ಯೋಜನೆ ಇನ್ನೊಬ್ಬರಿಗೆ ಗೊತ್ತಾಗುತ್ತಿಲ್ಲ.

-ಉದ್ದೇಶಪೂರ್ವಕವಾಗಿ ಬೇಡದ ಕಾಮಗಾರಿಗಳ ಪ್ರಾರಂಭಮಾಡುವುದಕ್ಕೆ ಕಡಿವಾಣ ಹಾಕಬೇಕು.

ಬಿಬಿಎಂಪಿ ಈ ಬಗ್ಗೆ ಆಂತರಿಕ ತನಿಖೆ ನಡೆಸುತ್ತಿದೆ. ಅಂತರಿಕ ತನಿಖಾ ವರದಿಯನ್ನು ಅಧಿಕಾರಿಗಳು ಇನ್ನು ಸಲ್ಲಿಸಿಲ್ಲ. ಈ ಬಗ್ಗೆ ಸೋಮವಾರ ಪರಿಶೀಲನೆ ನಡೆಸುತ್ತೇನೆ. ಸಮಿತಿ ಕೇವಲ ಮಧ್ಯಂತರ ವರದಿಯನ್ನಷ್ಟೇ ನೀಡಿದೆ. ಪೂರ್ಣ ವರದಿ ನೀಡಿಲ್ಲ. ವರದಿ ಆಧಾರದ ಮೇಲೆ ಹಲವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ.
-ಬಿ.ಎಚ್‌. ಅನಿಲ್‌ಕುಮಾರ್‌, ಆಯುಕ್ತರು ಬಿಬಿಎಂಪಿ

Advertisement

Udayavani is now on Telegram. Click here to join our channel and stay updated with the latest news.

Next