Advertisement
ಸುಮಾರು 260 ಕೋಟಿ ರೂ. ವೆಚ್ಚದಲ್ಲಿ ಬಿಡದಿಯಲ್ಲಿ ಕಸದಿಂದ ವಿದ್ಯುತ್ ಉತ್ಪಾದನೆ (ವೇಸ್ಟ್ ಟು ಎನರ್ಜಿ) ಮಾಡುವ ಯೋಜನೆಗೆ 2020ರ ಅಕ್ಟೋಬರ್‌ನಲ್ಲಿ ಚಾಲನೆ ನೀಡಿದ್ದು, ವರ್ಷಾಂತ್ಯಕ್ಕೆ ಇದನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಕೆಪಿಸಿಎಲ್ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶೇ. 50ರಷ್ಟು ಅಂದರೆ ತಲಾ 130 ಕೋಟಿ ವೆಚ್ಚ ಭರಿಸುವ ಮೂಲಕ ಯೋಜನೆ ಅನುಷ್ಠಾನಗೊಳಿಸಬೇಕಿದೆ. ಇದನ್ನು ಯೋಜನೆಗಳ ಪ್ರಗತಿಗೆ ಅನುಗುಣವಾಗಿ ಎರಡೂ ಸಂಸ್ಥೆಗಳು ಹಂತ-ಹಂತವಾಗಿ ಹಣ ನೀಡಬೇಕಾಗುತ್ತದೆ. ಆರಂಭದಲ್ಲಿ ತಲಾ 10 ಕೋಟಿ ವಿನಿಯೋಗಿಸಿದ್ದು, ಇದಕ್ಕೆ ಪ್ರತಿಯಾಗಿ “ಯುಟಿಲೈಸೇಷನ್ ಪ್ರಮಾಣಪತ್ರ’ ಕೂಡ ದೊರೆತಿದೆ.
Related Articles
Advertisement
ಎರಡೂ ಸರ್ಕಾರಿ ಸಂಸ್ಥೆಗಳೇ ಆಗಿದ್ದರಿಂದ ಹಣ ಬಿಡುಗಡೆ ವಿಳಂಬದಿಂದ ಯೋಜನೆಗೆ ಯಾವುದೇ ಸಮಸ್ಯೆ ಆಗದು ಎಂಬ ಉದಾಸೀನ ಕೂಡ ಇದಕ್ಕೆ ಕಾರಣ ಎನ್ನಲಾಗಿದೆ. ಅಲ್ಲದೆ, ಯೋಜನೆಗಳಿಗೆ ಜೇಷ್ಠತೆ ಆಧಾರದಲ್ಲಿ ಹಣ ನೀಡಲಾಗುತ್ತಿದೆ. ಉದ್ದೇಶಿತ ವೇಸ್ಟ್ ಟು ಎನರ್ಜಿ ಯೋಜನೆಗೆ ಹಣ ಬಿಡುಗಡೆಯಾಗದಿರಲು ಇದು ಕೂಡ ಕಾರಣ ಇರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸುತ್ತಾರೆ.
“ಈಗಾಗಲೇ ತನ್ನ ಪಾಲಿನ ಹಣ ಬಿಡುಗಡೆ ಮಾಡುವಂತೆ ಪಾಲಿಕೆಗೆ ಮೂರು ಬಾರಿ ಪತ್ರ ಬರೆಯಲಾಗಿದೆ. ಖುದ್ದು ಮುಖ್ಯ ಆಯುಕ್ತರು ಹಾಗೂ ವಿಶೇಷ ಆಯುಕ್ತರಿಗೂ ಮನವಿ ಮಾಡಿದ್ದೇವೆ. ಈ ಮಧ್ಯೆ ಯೋಜನೆಗೆ ಯಾವುದೇ ತೊಂದರೆ ಯಾಗಿಲ್ಲ. ನಿಗದಿತ ಗುರಿಯಲ್ಲಿ ಪೂರ್ಣಗೊಳಿಸಲಾಗುವುದು’ ಎಂದು ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್ ಸ್ಪಷ್ಟಪಡಿಸಿದರು.
“ಕೆಪಿಸಿಎಲ್‌ನಿಂದ ಪಾಲಿಕೆಗೆ ಹಣ ಬಿಡುಗಡೆ ಮಾಡುವಂತೆ ಪತ್ರ ಬರೆಯಲಾಗಿದೆ. ಎಷ್ಟು ಕೇಳಿದ್ದಾರೆ ಎಂಬುದು ನಿಖರವಾಗಿ ತಕ್ಷಣಕ್ಕೆ ಗೊತ್ತಿಲ್ಲ. ಈ ಬಗ್ಗೆ ಪರಿಶೀಲಿಸಿ ಆದ್ಯತೆ ಮೇರೆಗೆ ಹಣ ಬಿಡುಗಡೆ ಮಾಡಲಾಗುವುದು. ಇದರಿಂದ ಯೋಜನೆಗೆ ಯಾವುದೇ ಅಡತಡೆಯಾಗದು’ ಎಂದು ಬಿಬಿಎಂಪಿ ವಿಶೇಷ ಆಯುಕ್ತೆ (ಹಣಕಾಸು) ತುಳಸಿ ಮದ್ದಿನೇನಿ ತಿಳಿಸಿದರು.
ಯೋಜನೆ ಜಾರಿಯಾದರೆ 35 ಸಾವಿರ ಮನೆಗೆ ವಿದ್ಯುತ್! “ಆತ್ಮನಿರ್ಭರ ಭಾರತ’ ಯೋಜನೆ ಅಡಿ ನಿರ್ಮಾಣ ಗೊಳ್ಳಲಿರುವ ಈ ವಿದ್ಯುತ್ ಸ್ಥಾವರದಿಂದ ಒಂದು ವಿಧಾನಸಭಾ ಕ್ಷೇತ್ರದ ಮನೆಗಳಿಗೆ ಬೇಕಾಗುವಷ್ಟು ವಿದ್ಯುತ್ ಬೇಡಿಕೆಯನ್ನು ಪೂರೈಸಬಹುದು. 600 ಟನ್ ಕಸದಿಂದ ಸುಮಾರು 11.5 ಮೆ.ವಾ. ವಿದ್ಯುತ್ ಉತ್ಪಾದನೆ ಆಗುತ್ತದೆ. ಇದರಿಂದ 35 ಸಾವಿರ ಮನೆಗಳಿಗೆ ವಿದ್ಯುತ್ ಪೂರೈಸಬಹುದಾಗಿದ್ದು, ಇದು ಒಂದು ವಿಧಾನಸಭಾ ಕ್ಷೇತ್ರದಲ್ಲಿ ಬರುವ ಮನೆಗಳಿಗೆ ಸಮ ಎಂದು ಅಂದಾಜಿಸಲಾಗಿದೆ.
ವಾರ್ಷಿಕ 14 ಕೋಟಿ ಪಾಲಿಕೆಗೆ ಉಳಿತಾಯ
ನಗರದಲ್ಲಿ ನಿತ್ಯ 4,000ರಿಂದ 4,500 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಇದರಲ್ಲಿ ಶೇ. 60ರಷ್ಟು ಹಸಿ ಮತ್ತು ಶೇ. 40ರಷ್ಟು ಒಣತ್ಯಾಜ್ಯ ಬರುತ್ತದೆ. ವಿದ್ಯುತ್ ಸ್ಥಾವರಕ್ಕೆ 600 ಟನ್ ಪೂರೈಸುವುದರಿಂದ ಇದರ ವಿಲೇವಾರಿ ವೆಚ್ಚ ವಾರ್ಷಿಕ 14 ಕೋಟಿ ರೂ. ಪಾಲಿಕೆಗೆ ಉಳಿತಾಯ ಆಗಲಿದೆ.
–ವಿಜಯಕುಮಾರ್ ಚಂದರಗಿ