Advertisement

ಪಾಲಿಕೆ ಶಾಲಾ ಮಕ್ಕಳಿಗೆ ಸಿಕ್ಕಿಲ್ಲ ಪಠ್ಯ, ಸಮವಸ್ತ್ರ

06:51 AM Jul 10, 2019 | Team Udayavani |

ಬೆಂಗಳೂರು: ಹಿಂದಿನ ವರ್ಷದ ಬಿಲ್‌ ಮೊತ್ತ ಬಿಡುಗಡೆ ಹಾಗೂ ಪ್ರಸಕ್ತ ಸಾಲಿನ ಕಾರ್ಯಾದೇಶ ತಡವಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಶಾಲೆಗಳು ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಬ್ಯಾಗ್‌ ತಲುಪಿಲ್ಲ.

Advertisement

ಬಿಬಿಎಂಪಿ ವ್ಯಾಪ್ತಿಯಲ್ಲಿ 91 ಅಂಗನವಾಡಿಗಳು, 15 ಪ್ರಾಥಮಿಕ ಶಾಲೆಗಳು, 32 ಪ್ರೌಢಶಾಲೆಗಳು, 15 ಪದವಿ ಪೂರ್ವ ಕಾಲೇಜುಗಳು ಮತ್ತು ನಾಲ್ಕು ಪದವಿ ಕಾಲೇಜುಗಳಿದ್ದು, ಪ್ರಸಕ್ತ ಸಾಲಿಗೆ ಒಟ್ಟು 15,807 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇವರೆಲ್ಲರಿಗೂ ಬಿಬಿಎಂಪಿ ವತಿಯಿಂದಲೇ ಉಚಿತ ಪಠ್ಯ ಪುಸ್ತಕ, ನೋಟ್‌ ಬುಕ್‌, ಸಮವಸ್ತ್ರ, ಶೂ, ಸಾಕ್ಸ್‌, ಸ್ವೆಟರ್‌ ವಿತರಿಸಲಾಗುತ್ತದೆ.

ಇದಕ್ಕಾಗಿ ಪ್ರಸಕ್ತ ಸಾಲಿನ ಬಿಬಿಎಂಪಿ ಆಯವ್ಯಯದಲ್ಲಿ ಒಂದು ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ, ಈ ಬಾರಿ ಶಾಲೆಗಳು ಆರಂಭವಾಗಿ ಒಂದೂವರೆ ತಿಂಗಳಾದರೂ ಈ ಪರಿಕರಗಳು ಲಭ್ಯವಾಗಿಲ್ಲ. ಅದರಲ್ಲೂ ಅತೀ ಮುಖ್ಯವಾದ ಪಠ್ಯಪುಸ್ತಕ ಕೂಡಾ ಲಭ್ಯವಾಗದೇ ಶಾಲೆಗಳಲ್ಲಿ ಬೋಧನೆಗೆ ಸಾಕಷ್ಟು ಅಡಚಣೆ ಉಂಟಾಗುತ್ತಿದೆ.

ಬಿಬಿಎಂಪಿ ಶಾಲಾ ಮಕ್ಕಳಿಗೆ ಪರಿಕರ ವಿತರಿಸಲು ಟೆಂಡರ್‌ ಪಡೆದಿದ್ದ ವಿವಿಧ ಕಂಪನಿಗಳು ಕಳೆದ ವರ್ಷದ ಪೂರೈಕೆಯ ಬಿಲ್‌ ರಸೀದಿ ಸಲ್ಲಿಕೆ ಹಾಗೂ ಅನುಮೋದನೆ ತಡವಾದ ಕಾರಣ. ಹಣ ಬಿಡುಗಡೆಯೂ ವಿಳಂಬವಾಗಿತ್ತು. ಜತೆಗೆ, ಲೋಕಸಭೆ ಚುನಾವಣೆ ನೀತಿಸಂಹಿತೆ ಹಿನ್ನೆಲೆ ಪ್ರಸಕ್ತ (2019-20) ಸಾಲಿನ ಶಾಲಾ ಮಕ್ಕಳ ಪರಿಕರಗಳಿಗಾಗಿ ಬಿಬಿಎಂಪಿಯಿಂದ ಕಾರ್ಯಾದೇಶ ಹೊರಡಿಸುವುದು ತಡವಾಗಿದೆ.

ಹೀಗಾಗಿ, ಗುತ್ತಿಗೆ ಪಡೆದ ಕಂಪನಿಗಳು ಶಾಲೆಗಳಿಗೆ ಇಂದಿಗೂ ಪರಿಕರಗಳನ್ನು ಒದಗಿಸಲು ಸಾಧ್ಯವಾಗಿಲ್ಲ. ಇನ್ನು ಒಂದೆರೆಡು ತಿಂಗಳು ತಡವಾಗಲಿದೆ ಎಂದು ಮೂಲಗಳು ತಿಳಿಸಿವೆ.

Advertisement

ಸಮಸ್ಯೆ ತಪ್ಪಿಲ್ಲ: ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ನೀಡುವ ಉಚಿತ ಪರಿಕರಗಳ ಸಮಸ್ಯೆಯಾಗುತ್ತಿದೆ ಎಂಬ ಕಾರಣಕ್ಕೆ 2017-18 ನೇ ಸಾಲಿನಲ್ಲಿ ಮುಂದಿನ ಮೂರು ವರ್ಷಗಳಿಗೆ ಒಟ್ಟಾಗಿ ಟೆಂಡರ್‌ ಕರೆಯಲಾಗಿತ್ತು. 2017ರಲ್ಲಿ ಟೆಂಡರ್‌ ಪ್ರಕ್ರಿಯೆ ನಡೆದಿದ್ದರಿಂದ ಹಾಗೂ 2018ರಲ್ಲಿ ಸೂಕ್ತ ಸಮಯಕ್ಕೆ ಕಾರ್ಯಾದೇಶವಾಗಲಿಲ್ಲ. ಹೀಗಾಗಿ, ವಿದ್ಯಾರ್ಥಿಗಳಿಗೆ ತಡವಾಗಿವೆ ಪರಿಕರಗಳು ಲಭ್ಯವಾಗಿದ್ದವು. ಈ ಬಾರಿಯೂ ಅದೇ ಸಮಸ್ಯೆ ಮುಂದುವರಿದಿದೆ.

ಈ ಕುರಿತು ಬಿಬಿಎಂಪಿ ಅಧಿಕಾರಿಗಳನ್ನು ಕೇಳಿದರೆ ಮುಂದಿನ ವಾರ ವಿತರಿಸುತ್ತೇವೆ ಎಂದು ಸಬೂಬು ಹೇಳುತ್ತಾರೆ. ಹಿಂದಿನ ವರ್ಷಗಳಲ್ಲೂ ಶಾಲೆ ಪ್ರಾರಂಭವಾಗಿ ಎರಡು ತಿಂಗಳ ಬಳಿಕ ಸಮವಸ್ತ್ರ, ಬ್ಯಾಗ್‌ ನೀಡಲಾಗಿತ್ತು. ಈ ಬಾರಿಯೂ ಇದೇ ರೀತಿ ವಿಳಂಬವಾಗುತ್ತಿದೆ. ನಾವು ವಿದ್ಯಾರ್ಥಿಗಳಿಗೆ ನಾಳೆ, ನಾಡಿದ್ದು ಎಂದು ಹೇಳುತ್ತಿದ್ದೇವೆ ಎಂದು ಹೆಸರು ಹೇಳಲಿಚ್ಛಿಸದ ಬಿಬಿಎಂಪಿ ಶಾಲೆಯ ಶಿಕ್ಷಕರೊಬ್ಬರು ಬೇಸರ ವ್ಯಕ್ತಪಡಿಸಿದರು.

“ಫೆಬ್ರವರಿ ತಿಂಗಳಲ್ಲಿಯೇ ಕಮಿಟಿಗೆ ಕಾರ್ಯಾದೇಶ ಅನುಮೋದನೆಗೆ ನೀಡಿದ್ದೆವು. ಆದರೆ, ಆ ವೇಳೆ ಚುನಾವಣಾ ನೀತಿ ಸಂಹಿತೆ ಬಂದು ಅನುಮೋದನೆ ತಡವಾಯ್ತು. ಇನ್ನು ಗುತ್ತಿಗೆ ಪಡೆದ ಕಂಪನಿಗಳಿಗೆ ಕಾರ್ಯಾದೇಶ ಕೊಟ್ಟ ನಂತರ 45 ದಿನಗಳ ಕಾಲಾವಕಾಶ ಬೇಕಾಗುತ್ತದೆ’ ಎಂದು ಬಿಬಿಎಂಪಿ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದರು.

ಬಿಲ್‌ ಹಾಗೂ ಕಾರ್ಯಾದೇಶ ತಡವಾದ ಹಿನ್ನೆಲೆ ಪರಿಕರ ವಿತರಣೆಗೆ ಗುತ್ತಿಗೆ ಪಡೆದಿದ್ದವರು ಬೇಸರಗೊಂಡಿದ್ದರು. ಅದೆಲ್ಲವನ್ನು ಸರಿಪಡಿಸಿ ಇದೇ ತಿಂಗಳ ಕೊನೆಯ ವಾರದೊಳಗೆ ವಿದ್ಯಾರ್ಥಿಗಳಿಗೆ ಎಲ್ಲಾ ಪರಿಕರ ತಲುಪಿಸಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಅನುದಾನ ಶೀಘ್ರ ಬಿಡುಗಡೆಯಾಗಬೇಕು ಎಂದು ಸಮಿತಿಗೆ ತಿಳಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷ ಸಮಸ್ಯೆಯಾಗಬಾರದೆಂದು ಈಗಲೇ ಟೆಂಡರ್‌ ಪ್ರಕ್ರಿಯೆ ನಡೆಸಲಾಗುತ್ತಿದೆ.
-ಗಂಗಾಬಿಕೆ, ಮೇಯರ್‌

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next