Advertisement

ಬಿಬಿಎಂಪಿ ಅಧಿಕಾರಿಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ!

08:18 AM Jul 15, 2020 | Suhan S |

ಬೆಂಗಳೂರು: ಸೋಂಕಿತರಿಗೆ ಸೌಲಭ್ಯ ಒದಗಿಸುವ ಸ್ವತಃ ಬಿಬಿಎಂಪಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಇರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

Advertisement

ಜೆ.ಪಿ. ನಗರದ ಸಹ ಕಂದಾಯ ಅಧಿಕಾರಿಯೊಬ್ಬರು ಕಳೆದ ಒಂದು ವಾರದಿಂದ ಕೋವಿಡ್ ಸೋಂಕಿನ ಲಕ್ಷಣಗಳಿಂದ ಬಳಲುತ್ತಿದ್ದು, ಹಲವು ಆಸ್ಪತ್ರೆಗಳನ್ನು ಸುತ್ತಿದರೂ, ಚಿಕಿತ್ಸೆ ಸಿಗಲಿಲ್ಲ. ಹಲವು ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿವೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ನಗರದಲ್ಲಿ ಇನ್ನು ಎಷ್ಟರ ಮಟ್ಟಿಗೆ ಸೋಂಕು ತಡೆಯಲು ಸಿದ್ಧವಾಗಿದೆ ಎನ್ನುವ ಅನುಮಾನ ಮೂಡಿದೆ.

ವಿಡಿಯೋದಲ್ಲಿ ಏನಿದೆ: “ಕಳೆದ ಒಂದು ವಾರದಿಂದ ಚಳಿಜ್ವರ, ಉಸಿರಾಟದ ಸಮಸ್ಯೆಯಾಗುತ್ತಿತ್ತು. ಹಲವು ಖಾಸಗಿ ಆಸ್ಪತ್ರೆಗಳನ್ನು ಸುತ್ತಿದರೂ ಯಾವ ಆಸ್ಪತ್ರೆ ಸಿಬ್ಬಂದಿಯೂ ಸಹಕಾರ ನೀಡಲಿಲ್ಲ. ಕೋವಿಡ್‌-19 ಪರೀಕ್ಷೆಯನ್ನು ಮಾಡಿಸಿಕೊಂಡು ಬರುವಂತೆ ಹೇಳಿ ಕಳುಹಿಸಿ ಹಿಂಸಿದರು. ಸದ್ಯ ಬ್ಯಾಟರಾಯನಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿ’ ಬಿಬಿಎಂಪಿಯ ಸಹ ಕಂದಾಯ ಮಹಿಳಾ ಅಧಿಕಾರಿ ಮಾತನಾಡಿರುವ ವಿಡಿಯೋ ವೈರಲ್‌ ಆಗಿದೆ. ಇನ್ನು ಯಲಹಂಕ ವಲಯದ ಸಹ ಕಂದಾಯ ಅಧಿಕಾರಿ ಹಾಗೂ ಪರಿವೀಕ್ಷಕರು ಆಗಿದ್ದ 55 ವರ್ಷದ ನಟರಾಜ್‌ ಅವರು ಕೊರೊನಾದಿಂದ ಮೃತಪಟ್ಟಿದ್ದಾರೆ. ಒಂದೇ ದಿನ ಬಿಬಿಎಂಪಿಯ ಸಿಬ್ಬಂದಿಗೆ ಚಿಕಿತ್ಸೆ ಸಿಗದೆ ಇರುವುದು, ಸಾವನ್ನಪ್ಪಿರುವ ಘಟನೆಗಳು ನಡೆದಿರುವುದು ಉಳಿದ ಸಿಬ್ಬಂದಿಯ ಆತ್ಮಸ್ತೈರ್ಯ ಕುಗ್ಗಿಸಿದೆ.

ಶಿವನಗರ ವಾರ್ಡ್‌ನಲ್ಲಿ ಗ್ಯಾಂಗಮನ್‌ ಆಗಿದ್ದ ನರಸಿಂಹ ಎಂಬುವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇವರು ಸೋಂಕಿನ ಲಕ್ಷಣಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆದರೆ, ಈ ಬಗ್ಗೆ ಪರೀûಾ ವರದಿ ಇನ್ನು ಬಂದಿಲ್ಲ ಎಂದು ವಾರ್ಡ್‌ ಸದಸ್ಯೆ ಮಂಜುಳಾ ವಿಜಯಕುಮಾರ್‌ ತಿಳಿಸಿದ್ದಾರೆ.

ಕೋವಿಡ್ ಸೋಂಕಿಗೆ ಬೀಳುತ್ತಿಲ್ಲ ಕಡಿವಾಣ :  ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕಡಿವಾಣ ಬೀಳುತ್ತಿಲ್ಲ. ಮಂಗಳವಾರ ಒಂದೇ ದಿನ ಅತಿ ಹೆಚ್ಚು 56 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಲ್ಲಿ 35 ಜನ ಪುರುಷರು, 21 ಜನ ಮಹಿಳೆಯರಿದ್ದಾರೆ. 4 ಮಂದಿ ಸೋಂಕಿತರು ಮನೆಯಲ್ಲಿಯೇ ಮೃತ  ಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಏರಿಕೆ ಮಧ್ಯೆಯೇ ಗುಣಮುಖರಾಗುತ್ತಿರುವವರ ಏರಿಕೆಯಾಗುತ್ತಿದ್ದು, ಮಂಗಳವಾರ 664 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕಳೆದ ಒಂದು ವಾರದಲ್ಲಿ 3,183 ಮಂದಿ ಗುಣಮುಖರಾಗಿದ್ದಾರೆ.

Advertisement

ವಾರದಲ್ಲಿ 224 ಸಾವು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಒಂದೇ ವಾರದಲ್ಲಿ 224 ಜನ ಸೋಂಕಿಗೆ ಮೃತಪಟ್ಟಿದ್ದಾರೆ. ಈ ಮೂಲಕ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 377ಕ್ಕೆ ಏರಿಕೆಯಾಗಿದೆ. 317 ಮಂದಿ ನಗರದ ವಿವಿಧ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

20 ಸಾವಿರ ಗಡಿ ದಾಟಿದ ಸೋಂಕು : ಹೊಸದಾಗಿ 1,267 ಮಂದಿಗೆ ಸೋಂಕು ದೃಢಪಡುವ ಮೂಲಕ ನಗರದಲ್ಲಿ ಸೋಂಕಿತರ ಸಂಖ್ಯೆ 20,969ಕ್ಕೆ ಏರಿಕೆಯಾಗಿದೆ. ಇದರಲ್ಲಿ 4,992 ಮಂದಿ ಗುಣಮುಖರಾಗಿದ್ದು, 15,599 ಸಕ್ರಿಯ ಪ್ರಕರಣಗಳು ಇವೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next