ಬೆಂಗಳೂರು: ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಇ- ತ್ಯಾಜ್ಯವನ್ನು ಸರ್ಮಪಕವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾ ನಗರಪಾಲಿಕೆಯ ಎಂಟು ವಲಯಗಳಲ್ಲಿ ಇ- ತ್ಯಾಜ್ಯ ಸಂಗ್ರಹಿಸುವ ಅಭಿಯಾನಕ್ಕೆ ಸೋಮವಾರ ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಚಾಲನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇ-ತ್ಯಾಜ್ಯಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಬಿಬಿಎಂಪಿ ಮತ್ತು ಬಿ-ರೆಸ್ಪಾನ್ಸಿಬಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ಇ- ತ್ಯಾಜ್ಯ ಸಂಗ್ರಹಣೆ ಮಾಡಲಾಗುತ್ತಿದೆ. ಸಾರ್ವಜನಿಕರಲ್ಲಿ ಇ-ತ್ಯಾಜ್ಯ ವಿಲೇವಾರಿಯ ಬಗ್ಗೆ ಗೊಂದಲಗಳಿದ್ದವು. ಹೀಗಾಗಿ, ಬಿಬಿಎಂಪಿ ಮತ್ತು ಸ್ವಯಂ ಸೇವಾ ಸಂಸ್ಥೆ ಸಹಯೋಗದಲ್ಲಿ ನಿರುಪಯುಕ್ತ ಇ- ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮುಂದಾಗಿದ್ದೇವೆ’ಎಂದು ಹೇಳಿದರು.
“ಹಸಿ ಮತ್ತು ಒಣ ತ್ಯಾಜ್ಯದೊಂದಿಗೆ ಇ-ತ್ಯಾಜ್ಯವೂ ಸೇರುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಜುಲೈ.15 ರಿಂದ ಆ.15ರವರೆಗೆ ಒಂದು ತಿಂಗಳ ಇ-ತ್ಯಾಜ್ಯ ಸಂಗ್ರಹಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ರಾರಂಭದಲ್ಲಿ ಪಾಲಿಕೆಯ ಕೇಂದ್ರ ಮತ್ತು ಎಲ್ಲ ಎಂಟು ವಲಯಗಳ ಕಚೇರಿ ಆವರಣದಲ್ಲಿ ಇ-ತ್ಯಾಜ್ಯ ಬಿನ್‌ಗಳನ್ನು ಅಳವಡಿಸಲಾಗಿದೆ. ಇಲ್ಲಿ ನಿರುಪಯುಕ್ತ ಎಲೆಕ್ಟ್ರಾನಿಕ್ ಉಪಕರಣಗಳನ್ನು ಹಾಕಬಹುದು. ಬಳಿಕ ಹಂತ ಹಂತವಾಗಿ ಎಲ್ಲ 198 ವಾರ್ಡ್‌ಗಳಲ್ಲೂ ಇ-ತ್ಯಾಜ್ಯ ಸಂಗ್ರಹ ಬಿನ್‌ಗಳನ್ನು ಅಳವಡಿಸವ ಬಗ್ಗೆ ಚಿಂತಿಸಲಾಗುವುದು’ ಎಂದರು.
“ಎಲೆಕ್ಟ್ರಾನಿಕ್ ವಸ್ತುಗಳು ಹೆಚ್ಚು ಮಾರಾಟವಾಗುವ ಕೆ.ಆರ್.ಮಾರುಕಟ್ಟೆ, ಜಯನಗರ ಕಾಂಪ್ಲೆಕ್ಸ್, ಅವೆನ್ಯೂ ರಸ್ತೆ ಹಾಗೂ ಮಾಲ್‌ಗಳು ಸೇರಿದಂತೆ ವಿವಿಧೆಡೆ ಇ-ತ್ಯಾಜ್ಯ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗುವುದು. ಎಲೆಕ್ಟ್ರಾನಿಕ್ ಉಪಕರಣ ತಯಾರಿಕಾ ಕಂಪನಿಗಳೇ ಇ-ತ್ಯಾಜ್ಯ ಸಂಗ್ರಹಿಸಬೇಕು ಎನ್ನುವ ನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದರ ಬಗ್ಗೆಯೂ ಚರ್ಚಿಸಿ, ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.
“ಇ-ತ್ಯಾಜ್ಯ ಸಂಗ್ರಹಣಾ ಅಭಿಯಾನದಲ್ಲಿ ಪಾಲಿಕೆ ಅಧಿಕಾರು ಹಾಗೂ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ. ಅವರ ಜೊತೆಗೆ ಸಾರ್ವಜನಿಕರು ಕೈ ಜೋಡಿಸಿದಲ್ಲಿ ಕಾರ್ಯಕ್ರಮ ಯಶಸ್ವಿಯಾಗಲಿದೆ. ಹೀಗಾಗಿ, ಎಲ್ಲ ಸಾರ್ವಜನಿಕರು ಕೈಜೋಡಿಸಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ನಿಮ್ಮ ಮನೆಗಳಲ್ಲಿ ದೊಡ್ಡಗಾತ್ರದ ನಿರುಪಯುಕ್ತ ಎಲೆಕ್ಟ್ರಿಕ್ ಉಪಕರಣ ದೂರವಾಣಿ ಸಂಖ್ಯೆ 7349737586ಗೆ ಸಂರ್ಪಕಿಸಬಹುದು’ಎಂದು ಮಾಹಿತಿ ನೀಡಿದರು.
ಬಿ-ರೆಸ್ಪಾನ್ಸಿಬಲ್ ಸ್ವಯಂ ಸೇವಾ ಸಂಸ್ಥೆಯ ಸದಸ್ಯರು ಇ-ತ್ಯಾಜ್ಯ ವಿಲೇವಾರಿಯ ಕುರಿತು ಜಾಗೃತಿ ಮೂಡಿಸಲು ಬೀದಿ ನಾಟಕ ಪ್ರದರ್ಶನ ಮಾಡಿದರು. ಉಪಮೇಯರ್ ಭದ್ರೇಗೌಡ, ಆಡಳಿತ ಪಕ್ಷದನಾಯಕ ಅಬ್ದುಲ್ ವಾಜೀದ್, ಆಡಳಿತ ಮತ್ತು ಘನತ್ಯಾಜ್ಯ ವಿಭಾಗ ವಿಶೇಷ ಆಯುಕ್ತ ಡಿ.ರಂದೀಪ್ ಸೇರಿದಂತೆ ಮತ್ತಿತರರು ಹಾಜರಿದ್ದರು.