Advertisement

ಜೀರೋ ವೇಸ್ಟ್‌ ಯೋಜನೆಯಲ್ಲಿ ಪಾಲಿಕೆ ಫೇಲ್‌

12:59 AM Sep 15, 2019 | Team Udayavani |

ಬೆಂಗಳೂರು: ಸಾರ್ವಜನಿಕರಿಗೆ ಮಾದರಿಯಾಗುವ ಉದ್ದೇಶದಿಂದ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಜೀರೋ ವೇಸ್ಟ್‌ ಯೋಜನೆಯಡಿ ಸ್ಥಾಪಿಸಲಾಗಿದ್ದ ಸಂಸ್ಕರಣಾ ಘಟಕಗಳ ನಿರ್ವಹಣೆಯಲ್ಲಿ ಬಿಬಿಎಂಪಿ ವಿಫ‌ಲವಾಗಿದೆ.

Advertisement

ಉದ್ಘಾಟನೆ ಮಾಡಿ ಒಂದು ತಿಂಗಳಾದರೂ ಘಟಕ ಬಳಕೆಯಾಗಿಲ್ಲ. ಯೋಜನೆಯಡಿ ಹಸಿ ತ್ಯಾಜ್ಯ ಸಂಸ್ಕರಿಸಲು 1 ಲಕ್ಷ ರೂ. ವೆಚ್ಚದಲ್ಲಿ 70 ಕೆ.ಜಿ ಸಾರ್ಮಥ್ಯದ ಎರಡು ಕಾಂಪೋಸ್ಟರ್‌ ಸ್ಥಾಪಿಸಲಾಗಿದೆ. ಆದರೆ, ಕೇಂದ್ರ ಕಚೇರಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಕಾಂಪೋಸ್ಟರ್‌ಗಳಲ್ಲಿ ಸುರಿಯದೆ, ಆಟೋಗಳ ಮೂಲಕ ಹೊರಕ್ಕೆ ಸಾಗಿಸಲಾಗುತ್ತಿದೆ.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿನ ಕೌನ್ಸಿಲ್‌ ಕಟ್ಟಡ, ಕೇಂದ್ರ ಕಚೇರಿ ಸೇರಿ ಪ್ರಮುಖ ನಾಲ್ಕು ಕಟ್ಟಡಗಳು, ಉದ್ಯಾನ, ಕ್ಯಾಂಟೀನ್‌, ದೇವಸ್ಥಾನ ಹಾಗೂ ರಸ್ತೆಗಳಿಂದ ದಿನಕ್ಕೆ 50 ಕೆ.ಜಿ ಹಸಿ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಇದನ್ನು ಸಂಸ್ಕರಿಸಿ ಗೊಬ್ಬರ ಮಾಡುವ ಉದ್ದೇಶದಿಂದ ಕಾಂಪೋಸ್ಟರಗಳನ್ನು ಅಳವಡಿಸಲಾಗಿದೆ. ಆದರೆ, ಉದ್ಘಾಟನೆಯ ದಿನ ಹಸಿ ತ್ಯಾಜ್ಯ ಸುರಿದಿದ್ದು ಬಿಟ್ಟರೆ ಮತ್ತೆ ಅವುಗಳನ್ನು ಬಳಸೇ ಇಲ್ಲ.

“ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಜೀರೋ ವೇಸ್ಟ್‌ ಕ್ಯಾಂಪಸ್‌ ಅಳವಡಿಸಿ ಎಲ್ಲರಿಗೂ ಮಾದರಿಯಾಗಿದ್ದು, ಎಲ್ಲಾ ಕಚೇರಿಗಳಲ್ಲೂ ಜೀರೋ ವೇಸ್ಟ್‌ ಕ್ಯಾಂಪಸ್‌ ಆಗಿಸಲು ಸೂಚನೆ ನೀಡಲಾಗುವುದು’ ಎಂದು ಮೇಯರ್‌ ಹೇಳಿದ್ದರು. ಆದರೆ, ಈ ಯೋಜನೆಯಲ್ಲಿ ಯಶಸ್ವಿಯಾಗಿ ಇತರರಿಗೆ ಮಾದರಿ ಆಗಬೇಕಿದ್ದ ಬಿಬಿಎಂಪಿಯೇ ತ್ಯಾಜ್ಯ ನಿರ್ವಹಣೆಯಲ್ಲಿ ವಿಫ‌ಲವಾಗಿದೆ.

ಅಧಿಕಾರಿ, ಸಿಬ್ಬಂದಿಯ ಅಸಹಕಾರ: ಎಲ್ಲರಿಗೂ ಮಾದರಿಯಾಗಬೇಕಾಗಿರುವ ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿಯೇ ತ್ಯಾಜ್ಯ ವಿಂಗಡಣೆ ಮತ್ತು ನಿರ್ವಹಣೆಗೆ ಸಹಕಾರ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಕೇಂದ್ರ ಕಚೇರಿಯಲ್ಲಿ 134 ವಿಭಾಗೀಯ ಕಚೇರಿಗಳಿದ್ದು, ಎಲ್ಲ ಕಚೇರಿ ಸಿಬ್ಬಂದಿಗೂ ತ್ಯಾಜ್ಯ ನಿರ್ವಹಣೆ ಹಾಗೂ ವಿಂಗಡಣೆ ತರಬೇತಿ ನೀಡಲಾಗಿದೆ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಆದರೆ, ಬಹುತೇಕ ಕಚೇರಿಗಳಲ್ಲಿ ಸರ್ಮಪಕವಾಗಿ ತ್ಯಾಜ್ಯ ವಿಂಗಡಣೆ ಆಗುತ್ತಿಲ್ಲ ಎಂದು ಬಿಬಿಎಂಪಿ ಸಹಾಯಕ ಸಿಬ್ಬಂದಿ ತಿಳಿಸಿದ್ದಾರೆ. ಹೀಗಾಗಿ, ಹಿರಿಯ ಅಧಿಕಾರಿಯೊಬ್ಬರು ತ್ಯಾಜ್ಯವನ್ನು ಕಾಂಪೋಸ್ಟರ್‌ಗೆ ಹಾಕಬೇಡಿ ಎಂದು ಸೂಚನೆ ನೀಡಿದ್ದಾರೆ ಎಂದು ಪೌರಕಾರ್ಮಿಕರೊಬ್ಬರು ಹೇಳಿದರು.

ಒಣ ಕಸವೂ ಸಂಗ್ರಹವಾಗುತ್ತಿಲ್ಲ: ಕಚೇರಿ ಆವರಣದಲ್ಲಿ ಒಣ ಕಸವನ್ನು ಸಂಗ್ರಹಿಸಲು ಕಾಂಪೋಸ್ಟರ್‌ ಪಕ್ಕದಲ್ಲೇ ಪೇಪರ್‌, ಬಟ್ಟೆ ಹಾಗೂ ಪ್ಲಾಸ್ಟಿಕ್‌ ತ್ಯಾಜ್ಯಕ್ಕೆ ಪ್ರತ್ಯೇಕ ಮೆಷ್‌ಗಳನ್ನು ಅಳವಡಿಸಲಾಗಿತ್ತು. ಈ ಮೆಷ್‌ಗಳಲ್ಲಿ ಬೀಳುವ ತ್ಯಾಜ್ಯವನ್ನು ಚಿಂದಿ ಆಯುವವರು ವಾರಕ್ಕೊಮ್ಮೆ ಸಂಗ್ರಹಿಸಿ, ಸಂಸ್ಕರಣಾ ಘಟಕಗಳಿಗೆ ಸಾಗಿಸಬೇಕಿತ್ತು. ಆದರೆ, ಒಣ ತ್ಯಾಜ್ಯವನ್ನು ಸಂಗ್ರಹಿಸುವಲ್ಲಿಯೂ ಬಿಬಿಎಂಪಿ ಅಧಿಕಾರಿಗಳು ವಿಫ‌ಲರಾಗಿದ್ದಾರೆ.

ಎಲ್ಲ ಕಚೇರಿಗಳಲ್ಲೂ ಹಸಿ ಮತ್ತು ಒಣ ಹಸ ಸಂಗ್ರಹಕ್ಕೆ ಪ್ರತ್ಯೇಕ ಡಬ್ಬಿ ನೀಡಲಾಗಿದ್ದು, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಪಾಲಿಕೆ ಸಿಬ್ಬಂದಿಗಳಿಂದ ತ್ಯಾಜ್ಯ ವಿಂಗಡಣೆಯಲ್ಲಿ ಯಾವುದೇ ಲೋಪವಾಗುತ್ತಿಲ್ಲ.
-ರಂದೀಪ್‌, ವಿಶೇಷ ಆಯುಕ್ತ (ಘನತ್ಯಾಜ್ಯ)

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next