Advertisement

ಪಾಲಿಕೆ ಆಡಳಿತ ವರದಿ ಮಂಡನೆ 18ರಂದು

01:05 AM Sep 14, 2019 | Team Udayavani |

ಬೆಂಗಳೂರು: ನಾಲ್ಕು ವರ್ಷಗಳ ಬಳಿಕ ಇದೇ ಸೆ.18ರಂದು ಆಡಳಿತ ವರದಿ ಮಂಡನೆ ಮಾಡಲು ಉಪಮೇಯರ್‌ ಭದ್ರೇಗೌಡ ನಿರ್ಧರಿಸಿದ್ದಾರೆ. ಒಟ್ಟು 33 ಇಲಾಖೆಗಳನ್ನು ಒಳಗೊಂಡಿರುವ ಬಿಬಿಎಂಪಿ ವಾರ್ಷಿಕ ಆಡಳಿತ ವರದಿಯನ್ನು ಮಂಡಿಸಲಿದ್ದು, ವರದಿಯಲ್ಲಿ ಪಾಲಿಕೆಯ ಸಿಬ್ಬಂದಿ ಕಾರ್ಯವೈಖರಿ, ಇಲಾಖಾವಾರು ಸಿಬ್ಬಂದಿ ವಿವರ, ಸಂಬಳ, ಆಡಳಿತಾತ್ಮಕ ವೆಚ್ಚ, ಹೊಸ ಯೋಜನೆಗಳ ವಿವರ ಮತ್ತು ಹೆಚ್ಚುವರಿ ಖರ್ಚಿನ ಮಾಹಿತಿ ಮಂಡಿಸಲಾಗುತ್ತದೆ. ಬಳಿಕ ಈ ವರದಿ ಆಧರಿಸಿ ಸಭೆಯಲ್ಲಿ ಚರ್ಚೆ ನಡೆಯಲಿದೆ.

Advertisement

ಪ್ರತಿ ವರ್ಷ ವಿಶೇಷ ಕೌನ್ಸಿಲ್‌ ಸಭೆ ಮೂಲಕ ವಾರ್ಷಿಕ ಆಡಳಿತ ವರದಿ ಮಂಡಿಸುವುದು ಉಪಮೇಯರ್‌ ಕರ್ತವ್ಯವಾಗಿದ್ದು, ಈ ಹಿಂದಿನ ಎಂಟು ಉಪಮಹಾಪೌರರು ವರದಿ ಮಂಡಿಸಿಲ್ಲ. ವಿಶೇಶ ಕೌನ್ಸಿಲ್‌ ಸಭೆಗೆ ದಿನಾಂಕ ನಿಗದಿಪಡಿಸುವಂತೆ ಕೋರಿ ಉಪಮೇಯರ್‌ ಭದ್ರೇಗೌಡ, ಮೇಯರ್‌ಗೆ ಪತ್ರ ಬರೆದಿದ್ದು, ಸೆ.18ರಂದು ಸಭೆ ನಡೆಸಲು ಮೇಯರ್‌ ಸೂಚಿಸಿದ್ದಾರೆ. ಇನ್ನು ಸಭೆಯಲ್ಲಿ ಮಂಡಿಸಲು ಅಗತ್ಯವಿರುವ ಮಾಹಿತಿ ಕಲೆಹಾಕಲು ಅಧಿಕಾರಿಗಳಿಗೆ ಉಪಮೇಯರ್‌ ಸೂಚಸಿದ್ದು, ಮೂರು ವರ್ಷಗಳ ವರದಿ ಬಿಡುಗಡೆ ಮಾಡುವುದಾಗಿ ಹಿರಿಯ ಅಧಿಕಾರಿ ತಿಳಿಸಿದರು.

ವರದಿ ಮಂಡಿಸಲು ವಿರೋಧ: ಆಡಳಿತ ವರದಿ ಮಂಡನೆ ತಪ್ಪಿಸಲು ಕೆಲವರು ಭಾರೀ ಪ್ರಯತ್ನ ನಡೆಸಿದ್ದರು. ಆದರೆ, ಭದ್ರೇಗೌಡ ಅವರು ಬಿಬಿಎಂಪಿ ಕೌನ್ಸಿಲ್‌ ಕಾರ್ಯದರ್ಶಿ ಪಲ್ಲವಿ ಅವರಿಂದ ಕಾನೂನು ಅಭಿಪ್ರಾಯ ಪಡೆದಿದ್ದಾರೆ. ಮೇಯರ್‌ ಅವಧಿ ಪೂರ್ಣಗೊಳ್ಳುವ ಕೊನೆ ತಿಂಗಳಿನಲ್ಲಿ ಆಡಳಿತ ವರದಿ ಮಂಡಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಪಾಲಿಕೆ ಕಾನೂನು ಕೋಶದ ಮುಖ್ಯಸ್ಥ ದೇಶಪಾಂಡೆ ಅಭಿಪ್ರಾಯ ನೀಡಿದ್ದಾರೆ. ಇದೇ ವೇಳೆ ಹೊಸ ಮೇಯರ್‌ ಆಯ್ಕೆಗೆ ಚುನಾವಣೆ ಘೋಷಣೆಯಾದರೂ ಹಾಲಿ ಉಪಮೇಯರ್‌ ಆಡಳಿತ ವರದಿ ಮಂಡನೆ ಮಾಡಬಹುದು ಎಂದು ದೇಶಪಾಂಡೆ ತಿಳಿಸಿದ್ದಾರೆ.

ನಿವೃತ್ತಿ ಪಡೆಯದ ದೇಶಪಾಂಡೆ!: ಅವಧಿ ಪೂರ್ಣಗೊಂಡರೂ ಕಾನೂನು ಕೋಶದ ಮುಖ್ಯಸ್ಥರಾಗಿ ದೇಶಪಾಂಡೆ ಮುಂದುವರಿಯುತಿದ್ದು, ಕೆಲವರ ಒತ್ತಡಕ್ಕೆ ಮಣಿದು ಕಾನೂನು ಸಲಹೆ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಕಳೆದ ತಿಂಗಳು ಸೇವಾ ಅವಧಿ ಪೂರ್ಣಗೊಳಿಸಿದ ದೇಶಪಾಂಡೆ, ಈಗಲೂ ಪಾಲಿಕೆ ಕಾನೂನು ವಿಭಾದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತಿದ್ದಾರೆ.

ವರದಿ ಮಂಡಿಸಿರುವುದು ಒಂದೇ ಬಾರಿ: ಬಿಬಿಎಂಪಿಯ ಇತಿಹಾಸದಲ್ಲಿ ಈವರೆಗೆ ಕೇವಲ ಒಂದು ಬಾರಿ ಮಾತ್ರ ಆಡಳಿತ ವರದಿ ಮಂಡಿಸಲಾಗಿದೆ. 2015-16ನೇ ಸಾಲಿನಲ್ಲಿ ಅಂದಿನ ಉಪಮೇಯರ್‌ ಹೇಮಲತಾ ಗೋಪಾಲಯ್ಯ ಬಿಬಿಎಂಪಿಯ ಮೊದಲ ಆಡಳಿತ ವರದಿ ಸಲ್ಲಿಸಿದ ಖ್ಯಾತಿ ಹೊಂದಿದ್ದಾರೆ. ಇದನ್ನು ಬಿಟ್ಟರೆ ಈವರೆಗೆ ಯಾರೂ ಕೂಡ ಆಡಳಿತ ವರದಿ ಸಲ್ಲಿಸಿಲ್ಲ.

Advertisement

ಎಲ್ಲಾ ಬ್ಯಾಂಕ್‌ಗಳಲ್ಲಿ ವಾರ್ಷಿಕ ವರದಿ ಬಿಡುಗಡೆ ಮಾಡುವಂತೆ ಬಿಬಿಎಂಪಿಯಲ್ಲೂ ಆಡಳಿತ ವರದಿ ಮಂಡಿಸಬೇಕು. ಅದು ಉಪಮೇಯರ್‌ ಜವಾಬ್ದಾರಿ. ನಂತರ ವರದಿ ಆಧರಿಸಿ ಕೌನ್ಸಿಲ್‌ ಸಭೆಯಲ್ಲಿ ಚರ್ಚಿಸಬೇಕು. ಯಾರೇ ವಿರೋಧ ವ್ಯಕ್ತಪಡಿಸಿದರೂ ಸೆ.18ರಂದು ಆಡಳಿತ ವರದಿ ಪ್ರಸ್ತುತಪಡಿಸುತ್ತೇನೆ.
-ಭದ್ರೇಗೌಡ, ಉಪಮೇಯರ್‌

ಉಪಮೇಯರ್‌ ಆಡಳಿತ ವರದಿ ಮಂಡಿಸುವುದು ಅವರ ಹಕ್ಕು. ಇದರಲ್ಲಿ ಯಾರೂ ಹಸ್ತಕ್ಷೇಪ ಮಾಡುವಂತಿಲ್ಲ. ಪ್ರತಿ ವರ್ಷ ಈ ರೀತಿ ವರದಿ ಮಂಡನೆಯಾಗಿ ಸಭೆಯಲ್ಲಿ ಚರ್ಚೆಗೆ ಒಳಪಡಿಸುವುದು ಅತ್ಯಗತ್ಯ.
-ಗಂಗಾಂಬಿಕೆ, ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next