Advertisement

ಸುಸ್ಥಿರ ನಗರದ ಪಟ್ಟಿಯಲ್ಲೂ ಅಸ್ಥಿರ ಸ್ಥಾನ

12:28 PM Aug 24, 2020 | Suhan S |

ಬೆಂಗಳೂರು: ಬಿಬಿಎಂಪಿ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಮತ್ತೆ ಕಳಪೆ ಸಾಧನೆ ಮಾಡಿದೆ. ಇದಕ್ಕೆ ಮುಖ್ಯ ಕಾರಣ ಪಾಲಿಕೆ ಇರುವ ಸಂಪನ್ಮೂಲ ಹಾಗೂ ವ್ಯವಸ್ಥೆಯನ್ನು ಸರಿಯಾಗಿ ಬಳಸಿಕೊಳ್ಳದೆ ಇರುವುದಷ್ಟೇ ಅಲ್ಲ, ಮೀಸಲಿಟ್ಟ ಅನುದಾನ ಸದ್ಬಳಕೆಯಾಗದೆ ಇರುವುದೂ ಕಾರಣ.

Advertisement

ಅಪಾರ ಪ್ರಮಾಣದ ಅನುದಾನ ಹಾಗೂ ಸಂಪನ್ಮೂಲವಿದ್ದರೂ, ಸುಸ್ಥಿರ ನಗರಗಳ ಪಟ್ಟಿಯಲ್ಲೂ ಪಾಲಿಕೆ ಕಳಪೆ ಸಾಧನೆ ಮಾಡಿದೆ. ಇದೊಂದು ರೀತಿ ಸಾಮಾನ್ಯ ಪರೀಕ್ಷೆಯಲ್ಲೂ ಫೇಲ್‌ ಆದಂತೆ. ಪಾಲಿಕೆ ವ್ಯಾಪ್ತಿಯಲ್ಲಿ ಹಸಿ ಸಂಸ್ಕರಣಾ ಘಟಕಗಳಿವೆ, ಬಯೋ ಮಿಥನೈಸೇಷನ್‌ ವ್ಯವಸ್ಥೆಯೂ ಇದೆ. ಆದರೆ, ಇದರ ನಿರ್ವಹಣೆ ಮತ್ತು ಫಲಿತಾಂಶ ಮಾತ್ರ ಕಳಪೆ. ಇದೆಲ್ಲವನ್ನು ಸಮಪರ್ಕವಾಗಿ ಬಳಸಿಕೊಂಡಿದ್ದರೆ ಸ್ವಚ್ಛ ಸರ್ವೇಕ್ಷಣ್‌ನ ಸುಸ್ಥಿರ ನಗರಗಳ ವಿಭಾಗ ಪಟ್ಟಿಯಲ್ಲಿ ಪಾಲಿಕೆ ಉತ್ತಮ ಸ್ಥಾನದಲ್ಲಿ ಇರುತ್ತಿತ್ತು. ಕಳಪೆ ಸಾಧನೆಯಿಂದ 47 ನಗರಗಳ ಪಟ್ಟಿಯಲ್ಲಿಯೂ 37ನೇ ರ್‍ಯಾಂಕಿಗೆ ಸಮಾಧಾನ ಪಟ್ಟುಕೊಂಡಿದೆ. ನಗರದಲ್ಲಿ ಏಳು ಹಸಿಕಸ ಸಂಸ್ಕರಣಾ ಘಟಕಗಳಿವೆ.

ಇವುಗಳಲ್ಲಿ ಈಗಾಗಲೇ ಮೂರು ಸಂಸ್ಕರಣಾ ಘಟಕಗಳು ಮುಚ್ಚಿವೆ. ಕೆಲವು ಘಟಕಗಳು ಸಾಮರ್ಥ್ಯದ ಅರ್ಧದಷ್ಟು ಕಾರ್ಯನಿರ್ವಹಿಸುತ್ತಿಲ್ಲ. ಲಿಂಗಧೀರನಹಳ್ಳಿ ಹಸಿಕಸ ಸಂಸ್ಕರಣಾ ಘಟಕ ಎನ್‌ ಜಿಟಿ ಆದೇಶದ ಅನ್ವಯ ಮುಚ್ಚಲಾಗಿದೆ. ಇನ್ನು ಸುಬ್ಬರಾಯನಪಾಳ್ಯ ಹಾಗೂ ಸೀಗೇಹಳ್ಳಿ ಘಟಕಗಳು ಸ್ಥಳೀಯರ ವಿರೋಧದಿಂದ ಮುಚ್ಚಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ, ಇದಕ್ಕೆ ಸ್ಥಳೀಯ ನಾಯಕರ ವಿರೋಧವೂ ಇದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಬಿಬಿಎಂಪಿಯ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು.

ಕಸವಿಲೇವಾರಿ, ಹಸಿಕಸ ಸಂಸ್ಕರಣಾ ಘಟಕಗಳು ಹಾಗೂ ಭೂಭರ್ತಿ ಕೇಂದ್ರಗಳ ಸುತ್ತುಮತ್ತಲಿನ ಹಳ್ಳಿಗಳ ಅಭಿವೃದ್ಧಿಗೆ ಪಾಲಿಕೆ ಪ್ರತಿ ವರ್ಷವೂ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದೆ. ಆದರೆ, ಈ ಘಟಕಗಳ ನಿರ್ವಹಣೆ ಹಾಗೂ ಸಂಸ್ಕರಣಾ ಘಟಕಗಳ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಮೀಸಲಿಡುವ ಮೊತ್ತ ಪ್ರತಿ ಬಜೆಟ್‌ನಲ್ಲಿ ಏರಿಕೆಯಾಗುತ್ತಲೇ ಇದೆ. ಆದರೆ, ಅದನ್ನು ಯಾವುದಕ್ಕೆ ಬಳಸಲಾಗುತ್ತಿದೆ ಎನ್ನುವ ಸ್ಪಷ್ಟತೆಯೇ ಸಿಗುತ್ತಿಲ್ಲ.

ಒಂದೊಮ್ಮೆ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನ ಹಸಿಕಸ ಸಂಸ್ಕರಣಾ ಘಟಕಗಳ ನಿರ್ವಹಣೆಗೆ ಬಳಕೆಯಾಗಿದ್ದರೆ, ಇವುಗಳ ಸಾಮರ್ಥ್ಯ ಹೆಚ್ಚಾಗಬೇಕಾಗಿತ್ತು. ಇಲ್ಲವೇ ಹಸಿಸಂಸ್ಕರಣಾ ಘಟಕಗಳ ಪರಿಸ್ಥಿತಿಯಾದರೂ ಬದಲಾಗಬೇಕಾಗಿತ್ತು. ಆದರೆ, ಇದ್ಯಾವುದೂ ಆಗಿಲ್ಲ. ಹಸಿ ಸಂಸ್ಕರಣಾ ಘಟಕಗಳ ಬಳಕೆ: ನಗರದಲ್ಲಿನ ಏಳು ಹಸಿಕಸ ಸಂಸ್ಕರಣಾ ಘಟಕಗಳಿವೆ. ಇವುಗಳ ಒಟ್ಟಾರೆ ಸಾಮರ್ಥ್ಯ 1,570 ಮೆಟ್ರಿಕ್‌ ಟನ್‌ ಆದರೆ, ಈಗ ಈ ಹಸಿಕಸ ಸಂಸ್ಕರಣಾ ಘಟಕದಲ್ಲಿ ಸಂಸ್ಕರಣೆಯಾಗುತ್ತಿರುವುದು ಕೇವಲ 500 ಮೆಟ್ರಿಕ್‌ ಟನ್‌ ಮಾತ್ರ !. ಕರ್ನಾಟಕ ಕಾಂಪೋಸ್ಟ್‌ ಅಭಿವೃದ್ಧಿ ಕಾರ್ಪೊರೇಷನ್‌ ಸಂಸ್ಕರಣಾ ಘಟಕದ ಸಾಮರ್ಥ್ಯ 350 ಮೆಟ್ರಿಕ್‌ ಟನ್‌ ಇದೆ. ಆದರೆ, ಇಲ್ಲಿಗೆ ಹೋಗುತ್ತಿರುವುದು ಕೇವಲ 80 ಮೆ.ಟ. ಇದೊಂದು ಘಟಕವನ್ನು ನೋಡಿದರೆ ಸಾಕು ಪಾಲಿಕೆ ಅದ್ಯಾವ ರೀತಿಯಲ್ಲಿ ಸಂಸ್ಕರಣಾ ಘಟಕಗಳನ್ನು ನಿರ್ವಹಣೆ ಮಾಡುತ್ತದೆ ಎಂದು ತಿಳಿಯುತ್ತದೆ.

Advertisement

ನಿರ್ವಹಣೆಗೆ ಮೀಸಲಿಟ್ಟ ಅನುದಾನ :  ಕೇಂದ್ರಗಳ ನಿರ್ವಹಣೆಗೆ 2018-19ನೇ ಸಾಲಿನಲ್ಲಿ 1.73 ಕೋಟಿ ರೂ. ಹಾಗೂ 2019-20ನೇ ಸಾಲಿನಲ್ಲಿ 3.75 ಕೋಟಿ ರೂ. ಪಾಲಿಕೆ ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಕರ್ನಾಟಕ ಕಾಂಪೋಸ್ಟ್‌ ಅಭಿವೃದ್ಧಿ ಕಾರ್ಪೊರೇಷನ್‌ ಅಭಿವೃದ್ಧಿಗೆ 2018-19ನೇ ಸಾಲಿನಲ್ಲಿ 2 ಕೋಟಿ ರೂ. ಹಾಗೂ 2019-20ನೇ ಸಾಲಿನಲ್ಲಿ 4.10 ಕೋಟಿ ರೂ. ಮೀಸಲಿಡಲಾಗಿದೆ. 2018-19ನೇ ಸಾಲಿನಲ್ಲಿ 1.10 ಕೋಟಿ ರೂ. ಮೀಸಲಿಡಲಾಗಿತ್ತು. ಈ ವರ್ಷದ ಬಜೆಟ್‌ನಲ್ಲಿ ಈ ಮೊತ್ತವನ್ನು ಬರೋಬ್ಬರಿ 5.43 ಕೋಟಿ ರೂ.ಗೆ ಏರಿಕೆ ಮಾಡಲಾಗಿದೆ. ಆದರೆ ಅಭಿವೃದ್ಧಿ ವಿಚಾರಕ್ಕೆ ಬಂದರೆ ನಗರದ ಹಸಿಕಸ ಸಂಸ್ಕರಣಾ ಘಟಕಗಳಲ್ಲಾಗಲಿ ಅಥವಾ ಸುತ್ತಮುತ್ತಲಿನ ಪ್ರದೇಶಗಳಲ್ಲಾಗಲಿ ಯಾವುದೇ ರೀತಿಯ ಸಕಾರಾತ್ಮಕ ಬದಲಾವಣೆಯಾಗಿಲ್ಲ.

ಸಂಸ್ಕರಣಾ ಘಟಕಗಳ ನಿರ್ವಹಣೆಗೆ ಬದ್ಧತೆ ಇರುವ ಅಧಿಕಾರಿಗಳನ್ನು ನೇಮಕ ಮಾಡಬೇಕು. ಅಲ್ಲದೆ, ಪ್ರತ್ಯೇಕ ತಂಡದಿಂದ ಘಟಕಗಳ ನಿರ್ವಹಣೆಯ ಬಗ್ಗೆ ಪರಿಶೀಲನೆ ನಡೆಯಬೇಕು. ಈ ಬಗ್ಗೆ ಹಲವು ಬಾರಿ ನಾವು ಶಿಫಾರಸು ಮಾಡಿದ್ದೇವೆ. –ಡಾ. ಶರತ್‌ಚಂದ್ರ, ಕಸ ನಿರ್ವಹಣೆ ತಾಂತ್ರಿಕ ಮಾರ್ಗಸೂಚಿ ಸಮಿತಿ ಸದಸ್ಯ

 

ಹಿತೇಶ್‌. ವೈ

Advertisement

Udayavani is now on Telegram. Click here to join our channel and stay updated with the latest news.

Next