Advertisement

ವೇಣೂರಿನ ಸರಸ್ವತಿಗೆ ಸ್ನಾನಗೃಹವೇ ಆಸರೆ !

11:30 AM Jul 28, 2018 | Team Udayavani |

ವೇಣೂರು: ಗಂಡ ಹಾಗೂ ಪುತ್ರನಿಂದ ದೂರವಾಗಿ  ಸಾರ್ವಜನಿಕ ಶೌಚಾಲಯದಲ್ಲೇ ಆಶ್ರಯ
ಪಡೆದುಕೊಂಡಿರುವ ಮಹಿಳೆಯ ಕಣ್ಣೀರಿನ ಕಥೆ ಇದು.

Advertisement

ಈಕೆ ಸುಮಾರು 67 ವರ್ಷ ವಯಸ್ಸಿನ ಸರಸ್ವತಿ. ಬೆಳ್ತಂಗಡಿ ತಾಲೂಕಿನ ವೇಣೂರು ಮಹಾವೀರ ನಗರದ ಸಾರ್ವಜನಿಕ ಶೌಚಾಲಯದ ಸ್ನಾನಗೃಹದಲ್ಲಿ ಸುಮಾರು ಒಂದೂವರೆ ವರ್ಷದಿಂದ ವಾಸಿಸುತ್ತಿದ್ದಾರೆ. 

ಸ್ನಾನಗೃಹದಲ್ಲಿ ವಾಸ
ವೇಣೂರು ಪೇಟೆಯಲ್ಲಿ ಸುಮಾರು ಹತ್ತು ಶೌಚಾಲಯಗಳಿರುವ ಕಟ್ಟಡ ಇದೆ. ಸ್ನಾನಗೃಹದ ಎರಡು ಕೊಠಡಿಗಳಲ್ಲಿ ಸರಸ್ವತಿಯವರ ವಾಸ್ತವ್ಯ. ಒಂದು ರೂಮಿನಲ್ಲಿ ಬಟ್ಟೆಬರೆ ಇರಿಸಿದ್ದು, ಮತ್ತೂಂದರಲ್ಲಿ ಮಲಗುತ್ತಾರೆ. ಬಾಡಿಗೆ ಮನೆ ಮಾಡಲು ಹಣವಿಲ್ಲ. ಸರಕಾರದ ಸೌಲಭ್ಯ ದೊರೆತಿಲ್ಲ, ತಾನು ಕೇಳಲೂ ಹೋಗಿಲ್ಲ ಎನ್ನುತ್ತಾರೆ ಸರಸ್ವತಿ.

ಒಂದೊಮ್ಮೆ ಸುಖೀ ಕುಟುಂಬ
ವೇಣೂರು ದೇವಸ್ಥಾನದ ಬಳಿ ತಾಯಿ, ತಂಗಿ ಯೊಂದಿಗೆ ವಾಸವಾಗಿದ್ದ ಸರಸ್ವತಿ ಅವರನ್ನು ಸುಮಾರು 32 ವರ್ಷ ವಯಸ್ಸಿನಲ್ಲಿ ಕಳಸದ ಕೃಷ್ಣ ಮಡಿವಾಳ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿ ಎರಡು ಗಂಡು, ಒಂದು ಹೆಣ್ಣುಮಕ್ಕಳನ್ನು ಪಡೆದಿದ್ದರು. ಆದರೆ ಹೆಣ್ಣುಮಗು ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿತ್ತು.

ಕುಡಿತದ ಚಟದಿಂದ ಕುಟುಂಬ ಛಿದ್ರ
ವಿಪರೀತ ಮದ್ಯಪಾನ ಚಟ ಹೊಂದಿರುವ ಕೃಷ್ಣ ಮಡಿವಾಳ ಹಾಗೂ ಹಿರಿಯ ಪುತ್ರ ಮನೆಯಲ್ಲಿ ಗಲಾಟೆ ನಡೆಸುತ್ತಿದ್ದರು. ತಂಗಿಯ ಸಾವು ಹಾಗೂ ಮನೆಯಲ್ಲಿ ರಂಪಾಟದಿಂದ ಬೇಸತ್ತ ಕಿರಿಯ ಪುತ್ರ 20ನೇ ವಯಸ್ಸಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. 

Advertisement

ಮನೆಬಿಟ್ಟ ಸರಸ್ವತಿ
ಪುತ್ರಿ ಮತ್ತು ಕಿರಿಯ ಪುತ್ರನನ್ನು ಕಳೆದುಕೊಂಡ ನೋವಿನಿಂದ ಸರಸ್ವತಿ ಕಳಸದ ಮನೆ ತ್ಯಜಿಸಿ ವೇಣೂರಿಗೆ ಬಂದು ತಂಗಿ ಮನೆಯಲ್ಲಿ ನೆಲೆಸಿದ್ದರು. ಅಲ್ಲಿ ಅವರಿಗೆ ಹೆಚ್ಚು ದಿನ ಸರಿಹೋಗಲಿಲ್ಲ. ಗಂಡನೂ ಇತ್ತ ಮುಖ ಮಾಡಲಿಲ್ಲ. ಹಿರಿಯ ಮಗನೂ ಮದ್ಯದ ದಾಸನಾಗಿ ನನ್ನನ್ನು ಮರೆತಿದ್ದಾನೆ ಎಂದು ಸರಸ್ವತಿ ಕಣ್ಣೀರಿಡುತ್ತಾರೆ.

10 ವರ್ಷಗಳಿಂದ ಅಲೆದಾಟ
ವೇಣೂರಿನ ತಂಗಿಮನೆಯಿಂದ ಹೊರಬಿದ್ದ ಸರಸ್ವತಿ ಅಲ್ಲಲ್ಲಿ ಬಿಡಾರ ಹೂಡಿ ದ್ದಾರೆ. ಈಗ ಸುಮಾರು ಒಂದೂವರೆ ವರ್ಷದಿಂದ ವೇಣೂರಿನ ಸಾರ್ವಜನಿಕ ಶೌಚಾಲಯದಲ್ಲಿದ್ದಾರೆ. ದಾಖಲೆ ಪತ್ರಗಳೆಲ್ಲ ಕಳಸದ ವಿಳಾಸದಲ್ಲಿ ಇರುವ ಕಾರಣ ಇಲ್ಲಿ ಸರಕಾರಿ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ. ರಾಷ್ಟ್ರೀಕೃತ ಬ್ಯಾಂಕ್‌ ಖಾತೆಯ ಸಹಾಯದಿಂದ ಆಧಾರ್‌ ಕಾರ್ಡನ್ನು ಇಲ್ಲಿನ ವಿಳಾಸದಲ್ಲಿ ಮಾಡಿಕೊಂಡಿದ್ದಾರೆ. ಅತ್ತ ಕಳಸಕ್ಕೂ ಹೋಗಲಾಗದೆ ಇತ್ತ ತಂಗಿ ಮನೆ ಯಲ್ಲೂ ತಂಗಲಾರದೆ ಅನಾಥೆಯಾಗಿದ್ದಾರೆ.

– ಪದ್ಮನಾಭ ವೇಣೂರು

Advertisement

Udayavani is now on Telegram. Click here to join our channel and stay updated with the latest news.

Next