ಕಡೂರು: ತಾಲೂಕಿನ ಅಮೃತ್ ಮಹಲ್ ಬಾಸೂರು ಕಾವಲಿನಲ್ಲಿ ಹುಲ್ಲುಗಾವಲಿಗೆ ಮತ್ತು ಕುರುಚಲು ಕಾಡಿಗೆ ದುಷ್ಕರ್ಮಿಗಳು ಅಲ್ಲಲ್ಲಿ ಬೆಂಕಿ ಹಚ್ಚುತ್ತಿರುವ ಪ್ರಸಂಗಗಳು ನಡೆಯುತ್ತಿವೆ. ಇದರಿಂದ ಅಪಾರ ಪ್ರಮಾಣದಲ್ಲಿ ಕಾಡು ನಾಶವಾಗುತ್ತಿದೆ.
ಬಯಲು ಸೀಮೆಯ ವನ್ಯಜೀವಿಗಳಿಗೆ ಮತ್ತು ಅಮೃತ್‌ಮಹಲ್ ತಳಿಯ ಗೋವುಗಳಿಗೆ ಮೇಯಲು ಸಮೃದ್ಧವಾಗಿ ಹುಲ್ಲು ಬೆಳೆದಿದ್ದು, ಬೆಂಕಿಯ ಕೆನ್ನಾಲಿಗೆಗೆ ಹುಲ್ಲುಗಾವಲು ಸುಟ್ಟು ಹೋಗುತ್ತಿದೆ. ಬಾಸೂರು ಸಮುದಾಯ ಸಂರಕ್ಷಣಾ ಮೀಸಲು ಅಡಿಯಲ್ಲಿ ಅಲ್ಲಿ ಸಂರಕ್ಷಣೆಯನ್ನು ಅರಣ್ಯ ಇಲಾಖೆ ಮಾಡುತ್ತಿದೆ.
ಬೇಸಿಗೆ ಪ್ರಾರಂಭದಲ್ಲೆ ಅಲ್ಲಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವುದರಿಂದ ವನ್ಯಜೀವಿಗಳು ಆತಂಕದಲ್ಲಿವೆ. ಕೆಲ ದುಷ್ಕರ್ಮಿಗಳು ಅರಣ್ಯ ಪ್ರವೇಶಿಸಿ ಒಣಗಿರುವ ಹುಲ್ಲುಗಾವಲು ಮತ್ತು ಕುರುಚಲು ಕಾಡಿಗೆ ಬೆಂಕಿ ಹಚ್ಚುತ್ತಿರುವುದು ಕಂಡುಬಂದಿದೆ.
ಅಪರೂಪದ ಕೃಷ್ಣಮೃಗ ಸೇರಿದಂತೆ ನೂರಾರು ಪಕ್ಷಿ ಸಮೂಹ ಮತ್ತು ವಲಸೆ ಹಕ್ಕಿಗಳು ಈ ಭಾಗದಲ್ಲಿ ಕಂಡುಬರುತ್ತದೆ. ಕೆಲವು ಪಕ್ಷಿಗಳು ನೆಲದ ಹುಲ್ಲುಗಾವಲಿನಲ್ಲಿ ಗೂಡು ಕಟ್ಟಿ ಮೊಟ್ಟೆಯಿಟ್ಟು ಸಂತಾನೋತ್ಪತಿ ಪ್ರಕ್ರಿಯೆಯಲ್ಲಿ ತೊಡಗುತ್ತವೆ. ಚಿರತೆ ಸೇರಿದಂತೆ ಹಲವು ಪ್ರಾಣಿಗಳು ಇಲ್ಲಿವೆ ಈ ಬೆಂಕಿಯಿಂದ ಇವೆಲ್ಲ ನಾಶವಾಗುವ ಭೀತಿ ಎದುರಾಗಿದೆ. ಸಮೃದ್ಧ ಹುಲ್ಲು ಬೆಂಕಿಗೆ ಆಹುತಿ ಆಗುವುದರಿಂದ ಗೋವುಗಳಿಗೂ ಮೇವಿನ ಕೊರತೆ ಎದುರಾಗುವ ಸಾಧ್ಯತೆ ಇದೆ.
ಕಡೂರು ವಲಯದ ಅರಣ್ಯ ಇಲಾಖೆ ಬೆಂಕಿಕೊಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಬೆಂಕಿಯಿಂದ ಬಾಸೂರು ಕಾವಲು ಅರಣ್ಯವನ್ನು ಸಂರಕ್ಷಿಸಲು ಬೆಂಕಿ ನಿಗ್ರಹ ತಂಡವನ್ನು ರಚಿಸಿ ಬೆಂಕಿಬೀಳದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಪರಿಸರಾಸಕ್ತರು ಒತ್ತಾಯಿಸಿದ್ದಾರೆ.