Advertisement

ಕುವೈಟ್‌ ಸೆರೆಯಿಂದ ಬಸ್ರೂರು ಶಂಕರ ಪೂಜಾರಿ ಬಿಡುಗಡೆ

12:30 AM Jan 17, 2019 | |

ಕುಂದಾಪುರ/ಬಸ್ರೂರು: ಊರಿನಿಂದ ಬೇರೆಯವರ ಮಾತ್ರೆ ಪಾರ್ಸೆಲನ್ನು ಕುವೈಟ್‌ಗೆ ಒಯ್ದು ಸಿಕ್ಕಿಬಿದ್ದ ಕುಂದಾಪುರ ತಾಲೂಕಿನ ಬಸ್ರೂರು ನಿವಾಸಿ ಶಂಕರ ಪೂಜಾರಿ (40) ಅವರು ಏಳು ತಿಂಗಳ ಕುವೈಟ್‌ ಜೈಲು ವಾಸ ಅಂತ್ಯಕಂಡಿದೆ.

Advertisement

2014ರಿಂದ ಕುವೈಟ್‌ನ ಅಗ್ರಿಕಲ್ಚರಲ್‌ ಫ‌ುಡ್‌ ಪ್ರಾಡೆಕ್ಟ್ ಕಂ. ಕೆಎಸ್‌ಸಿಯಲ್ಲಿ ಕೆಲಸ ಮಾಡುತ್ತಿದ್ದ ಶಂಕರ್‌ ಪೂಜಾರಿ ಎರಡು ವರ್ಷಕ್ಕೊಮ್ಮೆ ಊರಿಗೆ ಬರುತ್ತಿದ್ದರು. 2018ರ ಎ. 25ರಂದು ಬಂದವರು ಜೂ. 13ರಂದು ಮುಂಬಯಿ ಮೂಲಕ ಕುವೈಟ್‌ಗೆ ಮರಳಿದ್ದರು. ಸಹೋದ್ಯೋಗಿಯ ವಿನಂತಿ ಮೇರೆಗೆ ಕುವೈಟ್‌ನಲ್ಲಿರುವ ಅವರ ಅತ್ತೆಗೆ ತಲುಪಿಸುವಂತೆ ಉಡುಪಿಯ ಒಬ್ಬರು ನೀಡಿದ ಪಾರ್ಸೆಲನ್ನು ಒಯ್ದಿದ್ದರು. ಅದೇ ಅವರಿಗೆ ಮುಳುವಾಗಿತ್ತು. ಕುವೈಟ್‌ ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಿದ ಪೊಲೀಸರು ಮನೆಗೆ ಬಿಟ್ಟಿದ್ದರು. ಆದರೆ ಅಲ್ಲಿನ ವಾಸಸ್ಥಳ ತಲುಪುತ್ತಿದ್ದಂತೆಯೇ ಹಿಂಬಾಲಿಸಿದ ಪೊಲೀಸರು ಮತ್ತೆ ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಕೊಲ್ಲಿ ರಾಷ್ಟ್ರಗಳಲ್ಲಿ ನಿಷೇಧಕ್ಕೊಳಗಾದ ನೋವು ನಿವಾರಕ ಮಾತ್ರೆಗಳಿರುವ ಪಾರ್ಸೆಲ್‌ ಸಿಕ್ಕಿತ್ತು.

ವಿಚಾರಣೆ ವೇಳೆ ಸಹೋದ್ಯೋಗಿಯ ವಿನಂತಿಯಂತೆ ಕುವೈಟ್‌ನಲ್ಲಿರುವ ಮಹಿಳೆಗೆ ನೀಡಲು ತಂದಿರುವುದಾಗಿ ಹೇಳಿದ್ದರು. ಆದರೆ ಪೊಲೀಸರ ಮುಂದೆ ಅವರ ಸಹೋದ್ಯೋಗಿ ಇದನ್ನು ನಿರಾಕರಿಸಿದ್ದರಿಂದ ಶಂಕರ ಪೂಜಾರಿ ಅವರನ್ನು ಬಂಧಿಸಿ ಸಿಲಾಬಿಯಾ ಪಬ್ಲಿಕ್‌ ಜೈಲಿಗೆ ಹಾಕ‌ಲಾಗಿತ್ತು. ಬಳಿಕ ಕೆಲಸದಿಂದಲೂ ತೆಗೆದು ಹಾಕಲಾಗಿತ್ತು. ಇದೀಗ ಆರೋಪ ನಿರಾಧಾರವಾಗಿದ್ದು ಮರಳಿ ಕೆಲಸ ಕೊಡಿಸಲು ವಿನಂತಿ ಮಾಡಲಾಗಿದೆ.

ಮನವಿ
ಸಂಸದರಾದ ನಳಿನ್‌ ಕುಮಾರ್‌ ಕಟೀಲು, ಶೋಭಾ ಕರಂದ್ಲಾಜೆ ಅವರ ಮೂಲಕ ಸಚಿವೆ ಸುಷ್ಮಾ ಸ್ವರಾಜ್‌ಗೆ ಮನವಿ ಕೊಡಲಾಗಿತ್ತು. ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಡಾ| ರವೀಂದ್ರನಾಥ ಶಾನುಭಾಗ್‌ ಮಾರ್ಗದರ್ಶನ ಮಾಡಿದ್ದರು. ಇದೀಗ ಅವರ ಬಿಡುಗಡೆ ನಡೆದಿದೆ ಎಂದು ಮನೆಗೆ ಕುವೈಟ್‌ನಲ್ಲಿ ಉದ್ಯಮಿಯಾಗಿರುವ ಪುಷ್ಪರಾಜ್‌ ಮಾಹಿತಿ ನೀಡಿದ್ದಾರೆ; ಒಂದೆರಡು ದಿನಗಳಲ್ಲಿ ಅವರು ಸ್ವದೇಶಕ್ಕೆ ಮರಳಲಿದ್ದಾರೆ ಎಂದು ಶಂಕರ ಪೂಜಾರಿಯವರ ಪತ್ನಿ ಜ್ಯೋತಿ “ಉದಯವಾಣಿ’ಗೆ ತಿಳಿಸಿದ್ದಾರೆ. ಫೆ. 4ರ ವರೆಗೆ ಶಂಕರ ಪೂಜಾರಿ ಅವರ ವೀಸಾ ಅವಧಿ ಇದೆ. 

ಪೂರ್ಣಪ್ರಮಾಣದ ಚಾರ್ಜ್‌ ಶೀಟ್‌ ಹಾಕಿರಲಿಲ್ಲ. ಮಾತ್ರೆ ಪಡೆಯಲಿದ್ದ ಮಹಿಳೆಯ ಹೇಳಿಕೆ ಪಡೆದಿದ್ದು ಶಂಕರ ಪೂಜಾರಿ ಮೇಲಿನ ಆರೋಪ ನಿರಾಧಾರ ಎಂದಾಗಿದೆ. ಮಣಿಪಾಲ ಆಸ್ಪತ್ರೆಯಿಂದ ಕೂಡ ಎಲ್ಲ ಮಾಹಿತಿ ರವಾನಿಸಲಾಗಿತ್ತು. ಮಂಗಳವಾರ ಸಂಜೆ ನ್ಯಾಯಾಧೀಶರು ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದಾರೆ. ಕುವೈಟ್‌ನ ಬಿಲ್ಲವ ಸಂಘ, ತುಳುಕೂಟ ಮೊದಲಾದವರು ಸಹಕರಿಸಿದ್ದಾರೆ. ಯಾರೇ ಆಗಲಿ ವಿದೇಶಕ್ಕೆ ಹೋಗುವವರು ಇತರರ ಮುಚ್ಚಿದ ಪಾರ್ಸೆಲ್‌ ಕೊಂಡೊಯ್ಯಬೇಡಿ.
– ಡಾ| ರವೀಂದ್ರನಾಥ್‌ ಶಾನುಭಾಗ್‌, 
ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ

Advertisement
Advertisement

Udayavani is now on Telegram. Click here to join our channel and stay updated with the latest news.

Next