Advertisement

ಹೃದಯಭಾಗದ ರಸ್ತೆಗಳೂ ಸರಿಯಿಲ್ಲ; ಸವಾರರ ಪರದಾಟ!

03:20 AM Jun 15, 2018 | Karthik A |

ಮಹಾನಗರ: ನಗರದ ಹೃದಯಭಾಗ, ಅದರಲ್ಲಿಯೂ ಹೈಫೈ ಎನಿಸಿಕೊಂಡಿರುವ ಬಿಜೈ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ದಿನಂಪ್ರತಿ ನೂರಾರು ವಾಹನಗಳು ಸಂಚರಿಸುತ್ತಿವೆ. ಪಕ್ಕದಲ್ಲೇ KSRTC ಜಿಲ್ಲಾ ಕೇಂದ್ರದ ಬಸ್‌ ನಿಲ್ದಾಣವಿದ್ದರೂ ಇಲ್ಲಿನ ರಸ್ತೆಯದ್ದು ಮಾತ್ರ ದುಃಸ್ಥಿತಿ. ಸಾಧಾರಣ ಮಳೆ ಬಂದರೆ ಸಾಕು; ಸುಮಾರು ಒಂದೂವರೆ ಅಡಿ ನೀರು ರಸ್ತೆಯಲ್ಲೇ ನಿಲ್ಲುತ್ತದೆ. ಪ್ರತಿ ದಿನ ನೂರಾರು ಮಂದಿ ಓಡಾಡುವ ಪ್ರದೇಶ ಇದಾದರೂ ಈ ಸಮಸ್ಯೆಗೆ ಅನೇಕ ವರ್ಷಗಳಿಂದ ಮುಕ್ತಿ ಸಿಕ್ಕಿಲ್ಲ. ದೇರೆಬೈಲ್‌ ಕಡೆಗೆ ತೆರಳುವ ರಸ್ತೆ ಮತ್ತು ಲಾಲ್‌ ಬಾಗ್‌ ಕಡೆಗೆ ತೆರಳುವ ರಸ್ತೆಯಿಂದ ಬರುವ ನೀರು ಸರಾಗವಾಗಿ ಹರಿಯಲು ಸೂಕ್ತ ಚರಂಡಿ ಇಲ್ಲದಿರುವುದೇ ಇದಕ್ಕೆ ಮೂಲ ಕಾರಣ. 

Advertisement

ಮೂಲ ಸೌಕರ್ಯ ವಂಚಿತ


ಸ್ಮಾರ್ಟ್‌ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರು ಚಿತ್ರಣ ಇನ್ನೂ ಬದಲಾದಂತೆ ಕಾಣುತ್ತಿಲ್ಲ. ನಗರದ ಅನೇಕ ಪ್ರದೇಶಗಳು ಇಂದಿಗೂ ಮೂಲ ಸೌಕರ್ಯಗಳಿಂದ ವಂಚಿತವಾಗಿವೆೆ. ಕೆಲವು ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ. ನಗರದ ಕೊಟ್ಟಾರ ಕ್ರಾಸ್‌ ಹೆಚ್ಚಿನ ಜನವಸತಿ ಇರುವ ಪ್ರದೇಶ. ಕಾಂಕ್ರೀಟ್‌ ರಸ್ತೆಗಳಿವೆ. ಆದರೂ ಸಮಸ್ಯೆಗಳಿಗೇನೂ ಕಡಿಮೆ ಇಲ್ಲ. ಇಲ್ಲಿನ ಕೊಟ್ಟಾರ ಕ್ರಾಸ್‌ ಬಸ್‌ ನಿಲ್ದಾಣದ ಬಳಿ ಕೆಲವು ತಿಂಗಳಿನಿಂದ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಅರ್ಧ ರಸ್ತೆಯನ್ನು ಕಾಮಗಾರಿ ನುಂಗಿದ್ದು, ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ. ಇತ್ತೀಚೆಗಷ್ಟೇ ಕಾಮಗಾರಿ ಮುಗಿದರೂ ಇದರ ಸುತ್ತ ಮಣ್ಣು ಹಾಕಿ ಹಾಗೇ ಬಿಡಲಾಗಿದೆ.


ಮಳೆ ನೀರಿನ ರಭಸಕ್ಕೆ ಸುತ್ತಲೂ ಹಾಕಿದ ಮಣ್ಣು ರಸ್ತೆಗೆ ಕೊಚ್ಚಿ ಬಂದಿದ್ದು, ಇದೇ ಕಾರಣಕ್ಕೆ ಇಲ್ಲಿ ಅನೇಕ ವಾಹನಗಳು ಸ್ಕಿಡ್‌ ಆಗುತ್ತಿವೆ. ಬಿಜೈ ಮಾರುಕಟ್ಟೆಯಿಂದ ಆನೆಗುಂಡಿಯಾಗಿ ಕೊಟ್ಟಾರ ಕ್ರಾಸ್‌ ಸೇರುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಈ ರಸ್ತೆ ಮೂಲಕ ಸಾಗಿದರೆ ಅನೇಕ ಕಡೆಗಳಲ್ಲಿ ಗುಂಡಿಯ ದರ್ಶನವಾಗುತ್ತದೆ. ಈ ಹಿಂದೆ ಈ ಗುಂಡಿಗಳಿಗೆ ಮಣ್ಣು ಮತ್ತು ಮರಳಿನಿಂದ ಮುಚ್ಚಲಾಗಿತ್ತು. ಇದೀಗ ರಸ್ತೆಯ ಮಧ್ಯದಲ್ಲಿ ಮರಳು ತುಂಬಿಕೊಂಡಿದ್ದು, ದ್ವಿಚಕ್ರ ವಾಹನ ಸವಾರರು ಕಷ್ಟಪಟ್ಟು ಚಲಾಯಿಸಬೇಕಿದೆ. ಸ್ಥಳೀಯಾಡಳಿತ ಇತ್ತ ಗಮನಹರಿಸುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

ಅಲ್ಲೇ ಇದೆ ಮೆಸ್ಕಾಂ


KSRTC ಬಸ್‌ ನಿಲ್ದಾಣದಿಂದ ದೇರಬೈಲು ಕಡೆಗೆ ತೆರಳುವ ರಸ್ತೆಯ ಅನೇಕ ಕಡೆಗಳಲ್ಲಿ ಪಾದಚಾರಿ ಮಾರ್ಗ ಮಾಯ. ಬಾಳಿಗ ಸ್ಟೋರ್‌ ಬಳಿ ಇರುವ ಫ‌ುಟ್‌ಪಾತ್‌ನಲ್ಲಿ ಹುಲ್ಲು ಬೆಳೆದಿದೆ. ಪಾದಚಾರಿ ಮಾರ್ಗದ ಪಕ್ಕದಲ್ಲಿಯೇ ಟ್ರಾನ್ಸ್‌ಫಾರ್ಮರ್ ಕೈಗೆಟಕುವಂತಿದ್ದು. ಅಪಾಯವನ್ನು ಆಹ್ವಾನಿಸುತ್ತಿದೆ. ಇಲ್ಲೇ ಕೂಗಳತೆ ದೂರದಲ್ಲಿ ಮೆಸ್ಕಾಂ ಕಚೇರಿ ಇದ್ದರೂ ಚಕಾರ ಎತ್ತುತ್ತಿಲ್ಲ.

ರಸ್ತೆಯಲ್ಲೇ ಮಣ್ಣ ರಾಶಿ
ಮಲ್ಲಿಕಟ್ಟೆಯಿಂದ ನಂತೂರಿಗೆ ತೆರಳುವ ರಸ್ತೆ ಬದಿಯಲ್ಲಿ ಸಮರ್ಪಕವಾಗಿ ನೀರು ಹರಿಯಲು ಅನುವು ಮಾಡಿಕೊಡುವ ಉದ್ದೇಶದಿಂದ ಕೆಲವು ದಿನಗಳಿಂದ ಕಾಮಗಾರಿ ನಡೆಯುತ್ತಿದೆ. ಗುಂಡಿ ತೋಡಿದ ಮಣ್ಣಿನ ರಾಶಿ ರಸ್ತೆಯಲ್ಲೇ ಹಾಕಲಾಗಿದೆ. ಸುರಿಯುತ್ತಿರುವ ಮಳೆಯಿಂದಾಗಿ ಮಣ್ಣು ರಸ್ತೆಗೆ ಬಂದಿದ್ದು, ವಾಹನ ಸವಾರರು ಕಷ್ಟ ಅನುಭವಿಸುತ್ತಿದ್ದಾರೆ. ನಂತೂರು ಕಡೆಯಿಂದ ಬರುವ ವಾಹನಗಳ ಚಾಲಕರಿಗೆ ಪಕ್ಕನೆ ಈ ಮಣ್ಣಿನ ರಾಶಿ ಕಾಣದಿರುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಸ್ಥಳದಲ್ಲಿ ಕಾಮಗಾರಿ ನಡೆಸುವ ಕಾರ್ಮಿಕರು ಹೇಳುವ ಪ್ರಕಾರ, ಇನ್ನೂ ಒಂದು ವಾರ ಕಾಲ ಕಾಮಗಾರಿ ನಡೆಯಲಿದೆಯಂತೆ.

ಮ್ಯಾನ್‌ ಹೋಲ್‌ ಸಮಸ್ಯೆ


ಬಂಟ್ಸ್‌ ಹಾಸ್ಟೆಲ್‌ನಿಂದ ಬಿಜೈ ಮಾರುಕಟ್ಟೆಗೆ ತೆರಳುವ ರಸ್ತೆ, ಬಿಜೈ ಮಾರುಕಟ್ಟೆ, ಮಲ್ಲಿಕಟ್ಟೆ ಸಹಿತ ಇನ್ನಿತರ ಪ್ರದೇಶಗಳಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು ಇದಕ್ಕೆಂದು ರಸ್ತೆ ಮಧ್ಯೆ ಇರುವ ಮ್ಯಾನ್‌ ಹೋಲ್‌ಗ‌ಳನ್ನು ತೆ‌ರೆದಿಡಲಾಗಿದೆ. ರಸ್ತೆ ಸಮತಲವಾಗಿರಬೇಕಿರುವ ಮ್ಯಾನ್‌ ಹೋಲ್‌ಗ‌ಳು ನಗರದ ಅನೇಕ ಕಡೆ ರಸ್ತೆ ಮಟ್ಟದಿಂದ ಅರ್ಧ ಅಡಿ ಜಾರಿಕೊಂಡಿವೆೆ. ಇನ್ನು ಕೆಲವೆಡೆ ಅರ್ಧ ಅಡಿ ಮೇಲೆ ಇವೆೆ. ದ್ವಿಚಕ್ರ ವಾಹನ ಸವಾರರು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ನಗರದ ಕದ್ರಿ ದೇವಸ್ಥಾನ ರಸ್ತೆ, ಮಲ್ಲಿಕಟ್ಟೆ, ಬಿಜೈ ಸೇರಿಂದತೆ ಇನ್ನಿತರ ರಸ್ತೆ ಕಾಂಕ್ರೀಟ್‌ನಿಂದ ಕೂಡಿದರೂ ಪಾಲಿಕೆಯ ನಿರ್ವಹಣೆಯಿಲ್ಲದೆ ರಸ್ತೆಯ ಎರಡೂ ಬದಿಗಳಲ್ಲಿ ಹುಲ್ಲು ಬೆಳೆದುಕೊಂಡಿದೆ. ರಾತ್ರಿ ವೇಳೆಯಲ್ಲಂತೂ ಸಾರ್ವಜನಿಕರು ಮತ್ತು ವಾಹನ ಸವಾರರು ಕಷ್ಟಪಡುವಂತಾಗಿದೆ.

Advertisement

ಗುಂಡಿಗೆ ಬೊಂಡದ ಅಲರ್ಟ್‌ !


ನಗರದ ಕದ್ರಿ ಮಂಜುನಾಥ ದೇವಸ್ಥಾನವನ್ನು ಸಂಪರ್ಕಿಸುವ ರಸ್ತೆಯಲ್ಲಿ ಸುಮಾರು 4 ಅಡಿ ಎತ್ತರದ ಗುಂಡಿಗಳನ್ನು ಅಲ್ಲಲ್ಲಿ ತೋಡಿದ್ದು, ಅದರಲ್ಲಿ ಈಗ ನೀರು ತುಂಬಿಕೊಂಡಿದೆ. ಇಂತ‌ಹ ಗುಂಡಿಗಳು ಫುಟ್‌ಪಾತ್‌ ಉದ್ದಕ್ಕೂ ಸುಮಾರು ಐದಾರು ಕಡೆಗಳಲ್ಲಿ ಇದ್ದು, ಅಪಾಯದ ಮುನ್ಸೂಚನೆ ನೀಡುತ್ತಿವೆ. ಇನ್ನು ಈ ಗುಂಡಿಗಳಲ್ಲಿ ಪಾದಚಾರಿಗಳು ಬೀಳುವುದು ಬೇಡ ಎಂಬ ಕಾರಣಕ್ಕೆ ಸ್ಥಳೀಯರು ಮುಂಜಾಗ್ರತೆ ಎಂಬಂತೆ ಗುಂಡಿ ಸುತ್ತ ಸರಳು ಹಾಕಿ ಅದರ ಮೇಲೆ ಎಳನೀರು ಚಿಪ್ಪು ಇಡಲಾಗಿದೆ. ಆದರೆ ಸ್ಥಳೀಯರನ್ನು ಕೇಳಿದಾಗ, ಯಾವ ಕಾರಣಕ್ಕೆ ಇಲ್ಲಿ ಗುಂಡಿ ತೋಡಿದ್ದಾರೆ ಎನ್ನುವುದು ಗೊತ್ತಿಲ್ಲ. ಮಳೆಗಾಲದಲ್ಲಿ ಈ ರೀತಿ ಕಾಮಗಾರಿ ಹೆಸರಿನಲ್ಲಿ ಅಲ್ಲಲ್ಲಿ ಗುಂಡಿ ತೋಡಿ ಆತಂಕದ ಸ್ಥಿತಿ ನಿರ್ಮಿಸಿರುವುದನ್ನು ಸಂಬಂಧಪಟ್ಟವರು ಗಂಭೀರವಾಗಿ ಪರಿಗಣಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮಳೆಯಲ್ಲೇ ಕಾಮಗಾರಿ


ಎಲ್ಲೆಡೆಯೂ ಎಡೆಬಿಡದೆ ಮಳೆ ಸುರಿಯುತ್ತಿರಬೇಕಾದರೆ, ನಗರದ ಹಲವು ಕಡೆಗಳಲ್ಲಿ ಕಾಮಗಾರಿಯೂ ಚುರುಕಾಗಿ ನಡೆಯುತ್ತಿರುವುದು ವಿಶೇಷ. ಅದರಲ್ಲಿಯೂ ಮೋರಿ, ಮ್ಯಾನ್‌ ಹೋಲ್‌ ರಿಪೇರಿ ನಡೆಯುತ್ತಿದ್ದು, ವಾಹನಗಳ ಸಂಚಾರಕ್ಕೂ ಅಡ್ಡಿಯಾಗುತ್ತಿದೆ. ನಗರದ ಕೊಟ್ಟಾರ ಕ್ರಾಸ್‌, ಕದ್ರಿ ರಸ್ತೆ, ಮಲ್ಲಿಕಟ್ಟೆ ಸಹಿತ ಇನ್ನಿತರ ಪ್ರದೇಶಗಳಲ್ಲಿ ಮಳೆಗಾಲದಲ್ಲಿಯೇ ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆೆ. ಕೆಲವು ಕಡೆ ಕಾಮಗಾರಿಗೆ ಬಳಸಿದ್ದ ಸಿಮೆಂಟ್‌ ಹಾಗೆಯೇ ಬಿಟ್ಟಿದ್ದು, ಈಗ ಅದು ಮಳೆಗೆ ಗಟ್ಟಿಯಾಗಿ ವಾಹನ ಸವಾರರಿಗೆ ಕಿರಿಕಿರಿ ಉಂಟುಮಾಡುತ್ತಿದೆ.

ರಸ್ತೆಯಲ್ಲಿ ತುಂಬಿದ ಮರಳು
ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ವಾಹನ ಸವಾರರು ಕಷ್ಟಪಡುವಂತಾಗಿದೆ. ಇನ್ನು ಕೆಲ ರಸ್ತೆಗಳಲ್ಲಿ ಗುಂಡಿ ಮುಚ್ಚಲು ಈ ಹಿಂದೆ ಮಣ್ಣು ಮತ್ತು ಮರಳು ಹಾಕಲಾಗಿತ್ತು. ಇದೀಗ ಮರಳು ರಸ್ತೆಯಲ್ಲಿ  ತುಂಬಿಕೊಂಡಿದ್ದು, ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದೆ.
– ಪ್ರದೀಪ್‌, ಅತ್ತಾವರ

ಅರೆಬರೆ ಕಾಮಗಾರಿ
ನಗರದ ಅನೇಕ ಕಡೆಗಳಲ್ಲಿ ಅರೆ ಬರೆ ಕಾಮಗಾರಿ ನಡೆಯುತ್ತಿದೆ. ಒಂದೆಡೆ ಜೋರಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಮಳೆ ಬಂದಾಗ ಸ್ಥಳೀಯಾಡಳಿತ ಎಚ್ಚೆತ್ತುಕೊಳ್ಳುವ ಮೊದಲು ಮುನ್ನೆಚ್ಚರಿಕೆ ಕೈಗೊಳ್ಳಬೇಕಿತ್ತು.
– ಹೇಮಂತ್‌,ಕದ್ರಿ

ಮುಂಗಾರು ಆರಂಭವಾಗಿ ವಾರ ಕಳೆದಿಲ್ಲ; ನಗರದ ಹೃದಯ ಭಾಗದ ರಸ್ತೆಯ ಸ್ಥಿತಿಯು ಶೋಚನೀಯವಾಗಿದೆ. ಕಳೆದ ವರ್ಷ ಮಳೆಗಾಲ ಮುಗಿಯುವ ವೇಳೆಗೆ ನಗರದ ಬಹುತೇಕ ಡಾಮರು ರಸ್ತೆಗಳಲ್ಲಿ ಹೊಂಡಗಳು ಸೃಷ್ಟಿಯಾಗಿ ವಾಹನ ಸವಾರರು ನಿತ್ಯ ಪರದಾಡುವಂತಾಗಿತ್ತು. ಹೀಗಿರುವಾಗ, ಮಹಾನಗರ ಪಾಲಿಕೆಯು ಈಗಲೇ ಎಚ್ಚೆತ್ತುಕೊಂಡು ಈ ರಸ್ತೆಗಳ ದುರಸ್ತಿಗೆ ಗಮನಹರಿಸಿದರೆ ಉತ್ತಮ ಎನ್ನುವುದು ನಗರವಾಸಿಗಳ ಅಭಿಪ್ರಾಯ. ಈ ಬಗ್ಗೆ  ಸುದಿನ ರಿಯಾಲಿಟಿ ಚೆಕ್‌ ನಡೆಸಿದ್ದು, ಸಂಬಂಧಪಟ್ಟ ಅಧಿಕಾರಿಗಳ ಗಮನಸೆಳೆಯುವ ಪ್ರಯತ್ನ ಮಾಡಿದೆ. ಇದೇ ರೀತಿಯ ರಸ್ತೆಗಳಿರುವುದು ಗಮನಕ್ಕೆ ಬಂದರೆ ಓದುಗರು ಕೂಡ ಫೋಟೋ ಸಹಿತ ವಿವರಣೆಯನ್ನು ನಮ್ಮ ವಾಟ್ಸಪ್‌ ಸಂಖ್ಯೆ 9900567000ಗೆ ಕಳುಹಿಸಬಹುದು.

— ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next