Advertisement
ಹಲವು ವರ್ಷಗಳಿಂದ ಜನಪ್ರತಿನಿಧಿಗಳನ್ನು ಒತ್ತಾಯಿಸುತ್ತಿದ್ದರೂ ಸೌಲಭ್ಯಗಳು ಸಿಕ್ಕಿಲ್ಲ. ಕೆಲ ದಿನಗಳ ಹಿಂದೆಯಷ್ಟೆ ವಿಧಾನಸಭಾ ಚುನಾವಣೆ ನಡೆದಿದೆ. ಮತ ಕೇಳಲು ಬಂದವರ ಬಳಿಯೂ ಇವರು ಸಮಸ್ಯೆ ಹೇಳಿಕೊಂಡಿದ್ದಾರೆ. ಈ ಬಾರಿ ಖಂಡಿತ ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ ಎಂಬ ಭರವಸೆಯೂ ದೊರಕಿದೆ. ಇನ್ನಾದರೂ ನಮ್ಮ ಕುಟುಂಬಗಳಿಗೆ ಬೆಳಕು ಹರಿಯಬಹುದು, ಸಮಸ್ಯೆ ಸುಧಾರಿಸ ಬಹುದು ಎಂಬ ನಿರೀಕ್ಷೆ ಯಲ್ಲಿ ಮನೆ ಮಂದಿ ಇದ್ದಾರೆ.
ಶೌಚಾಲಯ, ನೀರು, ವಿದ್ಯುತ್ತಿಲ್ಲ
ರಸ್ತೆಗೆ ಹೊಂದಿಕೊಂಡೆ ಮನೆಗಳಿವೆ. ಆದರೂ ಸೌಕರ್ಯಗಳು ಇಲ್ಲ. ಕಾಲನಿಯಲ್ಲಿ ಶೌಚಾಲಯವಿದ್ದರೂ ನೆಪಕ್ಕಷ್ಟೇ ಎಂಬಂತಿದೆ. ಅದು ಸೂಕ್ತವಾಗಿಲ್ಲ. ನಿರಂತರ ನೀರು, ವಿದ್ಯುತ್ ವ್ಯವಸ್ಥೆ ಇಲ್ಲ. ಇನ್ನೂ ವಿಶೇಷವೆಂದರೆ, ಈ ಮನೆಗಳಿಗೆ ಇದುವರೆಗೂ ಹಕ್ಕುಪತ್ರ ಸಿಕ್ಕಿಲ್ಲ. ಸಲ್ಲಿಸಿರುವ ಅರ್ಜಿಯ ಸ್ಥಿತಿಗತಿ ಏನು ಎಂಬ ಬಗ್ಗೆಯೂ ಮಾಹಿತಿಯಿಲ್ಲ. ಪಡಿತರ ಚೀಟಿ ಹೊರತುಪಡಿಸಿದರೆ ಬೇರಾವ ಸೌಕರ್ಯವೂ ಒದಗಿಲ್ಲ. ಕುಡಿಯುವ ನೀರೇನೋ ಬರುತ್ತಿದೆ. ಆದರೆ, ಬಟ್ಟೆ ಒಗೆಯಲು, ಸ್ನಾನಕ್ಕೆ ಸಮೀಪದ ಹೊಳೆಗೋ ಯಾರದಾದರೂ ಮನೆಗೋ ಹೋಗಬೇಕು. ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಸರಕಾರ, ಸ್ಥಳೀಯಾಡಳಿತ ನೂರಾರು ಯೋಜನೆಗಳನ್ನು ಜಾರಿಗೆ ತರುತ್ತಿವೆ. ನಮ್ಮ ಸಮಸ್ಯೆಗೂ ಸ್ಪಂದಿಸಿ ಎನ್ನುತ್ತಾರೆ ಸ್ಥಳೀಯರು.
Related Articles
ಸೌಲಭ್ಯ ದೊರೆಯುತ್ತದೆ ಎಂದು ನಂಬಿದ್ದೆವು ಹಕ್ಕು ಪತ್ರಕ್ಕೆ 94 ಸಿ ಮೂಲಕ ಅರ್ಜಿ ಸಲ್ಲಿಸಿದ್ದೆವು. ಅದಾದರೂ ದೊರೆಯುತ್ತದೆ ಎಂಬ ಆಶಾವಾದವಿತ್ತು. ಈಗ ಭರವಸೆ ಕಳೆದುಹೋಗುತ್ತಿದೆ ಎನ್ನುತ್ತಾರೆ, ಕುಟುಂಬದ ನಿವಾಸಿ ಚಂದ್ರಶೇಖರ ಪನ್ನೆ.
Advertisement
ಚುನಾವಣೆ ವೇಳೆ ಎಲ್ಲರೂ ಬಂದು ಭರವಸೆಗಳನ್ನು ನೀಡುತ್ತಾರೆ. ಎಲ್ಲ ಸೌಲಭ್ಯ ಕಲ್ಪಿಸುತ್ತೇವೆಂದು ಹೇಳುತ್ತಾರೆ. ಚುನಾವಣೆ ಮುಗಿದ ಮೇಲೆ ಇತ್ತ ಗಮನ ಹರಿಸುವುದಿಲ್ಲ. ಇದು ಬೇಸರ ತರಿಸುತ್ತಿದೆ ಎನ್ನುತ್ತಾರೆ ವೃದ್ಧೆ ಕಾಳಿ ಅವರು. ಈ ಬಾರಿ ಕುಟುಂಬದ ಸದಸ್ಯರೆಲ್ಲರೂ ಮತ ಚಲಾಯಿಸಿದ್ದಾರೆ. ಅದೇ ರೀತಿ, ಜನಪ್ರತಿನಿಧಿಗಳೂ ತಮ್ಮ ಜವಾಬ್ದಾರಿ ನಿರ್ವಹಿಸಲಿ ಎಂದು ಆಗ್ರಹಿಸಿದ್ದಾರೆ.
ಮುರುಕು ಜೋಪಡಿಗಳುಎರಡು ಮನೆಗಳಲ್ಲಿ ಛಾವಣಿಗೆ ಟಾರ್ಪಲ್ ಹಾಸಿಕೊಂಡಿವೆ. ಮಣ್ಣಿನಿಂದ ನಿರ್ಮಿಸಿದ ಗೋಡೆಗಳು ಬಿರುಕು ಬಿಟ್ಟಿವೆ. ಮನೆಯೊಳಕ್ಕೆ ಹೊಕ್ಕು ಮೇಲಕ್ಕೆ ನೋಡಿದರೆ ಛಾವಣಿಯಲ್ಲಿನ ರಂಧ್ರಗಳು ಆಕಾಶದಲ್ಲಿನ ನಕ್ಷತ್ರಗಳನ್ನು ಎಣಿಸಲು ಅನುಕೂಲವಾದಂತಿವೆ. ಧರೆಗುರುಳಲು ಸಿದ್ಧವಾದ ಜೋಪಡಿಗಳ ಒಳಗೆ ದಶಕಗಳಿಂದ ಎರಡೂ ಕುಟುಂಬಗಳು ಅಸಹಾಯಕ ಸ್ಥಿತಿಯಲ್ಲಿ ದಿನ ದೂಡುತ್ತಿವೆ. ಪರಿಶೀಲಿಸುವೆ
ಸೌಕರ್ಯ ವಂಚಿತ ಎರಡು ಕುಟುಂಬಗಳು ಮೂಲ ಸವಲತ್ತು ಕೋರಿ ಪಂಚಾಯತ್ ಗೆ ಅರ್ಜಿ ಸಲ್ಲಿಸಿವೆಯೇ ಎಂಬ ಕುರಿತು ಪರಿಶೀಲಿಸುತ್ತೇನೆ. ಅರ್ಜಿ ಸಲ್ಲಿಸದೆ ಇದ್ದಲ್ಲಿ ಅವರ ಗಮನಕ್ಕೆ ತಂದು ಅರ್ಜಿ ಸಲ್ಲಿಸುವಂತೆ ತಿಳಿಸುತ್ತೇನೆ. ಸಮಸ್ಯೆಗಳಿದ್ದಲ್ಲಿ ಈ ಬಗ್ಗೆ ಗಮನ ಹರಿಸುತ್ತೇನೆ.
-ವಿದ್ಯಾಧರ, ಪಿಡಿಒ, ಹರಿಹರ ಗ್ರಾ.ಪಂ. — ಬಾಲಕೃಷ್ಣ ಭೀಮಗುಳಿ