Advertisement

ಹಂತಗಳ ಆಧಾರದಲ್ಲಿ ಬಸ್‌ ದರ ಪರಿಷ್ಕರಣೆ

11:52 AM Apr 14, 2017 | Team Udayavani |

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳ ಪ್ರಯಾಣ ದರ ಪರಿಷ್ಕರಿಸಿದೆ. ಇದರಲ್ಲಿ ಕೆಲವು ಹಂತಗಳಲ್ಲಿ (ಎರಡು ಕಿ.ಮೀಗೆ ಒಂದು ಹಂತ)ದರ ಇಳಿಕೆ ಮಾಡಿದ್ದರೆ, ಇನ್ನು ಹಲವು ಹಂತಗಳಲ್ಲಿ ಪ್ರಯಾಣಿಕರಿಗೆ ಏರಿಕೆ ಬಿಸಿ ತಟ್ಟಲಿದೆ. 

Advertisement

ಸಾಮಾನ್ಯ ಬಸ್‌ಗಳಲ್ಲಿ ಅತಿ ಹೆಚ್ಚು ಶೇ. 26ರಷ್ಟು ಪ್ರಯಾಣಿಕರು ಸಂಚರಿಸುವ 2ನೇ ಹಂತದಲ್ಲಿ ದರವನ್ನು 12ರಿಂದ 10 ರೂ.ಗಳಿಗೆ ಇಳಿಸಲಾಗಿದೆ. ಬೆನ್ನಲ್ಲೇ 3, 6 ಮತ್ತು 8ನೇ ಹಂತಗಳಲ್ಲಿ ಕ್ರಮವಾಗಿ 1 ರೂ. ಹೆಚ್ಚಳ ಮಾಡಲಾಗಿದೆ. ಆದರೆ, ಇದರ ಬಿಸಿ ಶೇ. 10ರಷ್ಟು ಪ್ರಯಾಣಿಕರಿಗೆ ತಟ್ಟಲಿದೆ. 

ಅದೇ ರೀತಿ, ವೋಲ್ವೊ ಬಸ್‌ಗಳಲ್ಲಿ 1, 3, 4, 14ನೇ ಹಂತಗಳಲ್ಲಿ ಕ್ರಮವಾಗಿ 5 ರೂ. ಇಳಿಕೆ ಮಾಡಲಾಗಿದೆ. ಈ ಹಂತಗಳಲ್ಲಿ ಶೇ. 32ರಷ್ಟು ಪ್ರಯಾಣಿಕರು ಸಂಚರಿಸುತ್ತಿದ್ದು, ಅವರೆಲ್ಲರಿಗೂ ಇದರಿಂದ ಅನುಕೂಲ ಆಗಲಿದೆ. ಇನ್ನು 10, 16, 18, 19 ಮತ್ತು 22ನೇ ಹಂತಗಳಲ್ಲಿ ಕ್ರಮವಾಗಿ 5 ರೂ. ಹೆಚ್ಚಿಸಲಾಗಿದೆ.

ಈ ಹಂತಗಳಲ್ಲಿ ಕೇವಲ ಶೇ. 7ರಷ್ಟು ಪ್ರಯಾಣಿಕರು ಸಂಚರಿಸುವುದರಿಂದ ಅವರಿಗೆ ಅಷ್ಟಾಗಿ ಹೊರೆ ಆಗದು. ಈ ದರ ಪರಿಷ್ಕರಣೆಯಿಂದ ಸಾಮಾನ್ಯ ಬಸ್‌ಗಳ ಕಾರ್ಯಾಚರಣೆಯಲ್ಲಿ ನಿತ್ಯ ಒಂದೂವರೆ ಲಕ್ಷ ಹಾಗೂ ವೋಲ್ವೊದಲ್ಲಿ 3 ಲಕ್ಷ ರೂ. ಬಿಎಂಟಿಸಿಗೆ ಹೊರೆ ಆಗಲಿದೆ ಎಂದು ಅಂದಾಜಿಸಲಾಗಿದೆ. 

ಶಾಂತಿನಗರದ ಬಿಎಂಟಿಸಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಪರಿಷ್ಕೃತ ಬಸ್‌ ಪ್ರಯಾಣ ದರ ಪ್ರಕಟಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಯಾಣ ದರಗಳನ್ನು ಪರಿಷ್ಕರಿಸಲಾಗಿದೆ. ಇದರ ಉದ್ದೇಶ ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವುದಾಗಿದೆ. ಶೇ. 30ರಿಂದ 40ರಷ್ಟು ಪ್ರಯಾಣಿಕರು ಸಂಚರಿಸುವ ಹಂತಗಳನ್ನು ಗುರುತಿಸಿ, ಅಂತಹ ಕಡೆ ದರ ಇಳಿಸಲಾಗಿದೆ ಎಂದು ಹೇಳಿದರು. 

Advertisement

ಕಳೆದ ಒಂದು ವರ್ಷದಲ್ಲಿ ಡೀಸೆಲ್‌ ಬೆಲೆ 20 ರೂ. ಹೆಚ್ಚಳವಾಗಿದೆ. ಇದರಿಂದ 18 ಕೋಟಿ ರೂ. ಹಾಗೂ ಸಿಬ್ಬಂದಿ ವೇತನ, ತಟ್ಟಿಭತ್ಯೆ ಪರಿಷ್ಕರಣೆಯಿಂದ 12 ಕೋಟಿ ರೂ. ವಾರ್ಷಿಕ ಹೆಚ್ಚುವರಿ ಹೊರೆ ಆಗುತ್ತಿದೆ. ಆದರೆ, ಒಟ್ಟಾರೆ ನಿಗಮದ ನಷ್ಟದ ಬಾಬ್ತು ಎಷ್ಟು ಎಂದು ಈಗಲೇ ಹೇಳುವುದು ಕಷ್ಟ ಎಂದ ಅವರು, ಆರ್ಥಿಕ ಹೊರೆ ನಡುವೆಯೂ ಪ್ರಯಾಣಿಕರ ಅನುಕೂಲಕ್ಕಾಗಿ ದರ ಪರಿಷ್ಕರಿಸಲಾಗಿದೆ ಎಂದರು.    

ಮುಂದಿನ ವಾರ ಸ್ಮಾರ್ಟ್‌ ಕಾರ್ಡ್‌: ಬಸ್‌ಗಳಲ್ಲಿ “ಸ್ಮಾರ್ಟ್‌ ಕಾರ್ಡ್‌’ ಪ್ರಾಯೋಗಿಕ ಬಳಕೆಗೆ ಇನ್ನೊಂದು ವಾರದಲ್ಲಿ ಚಾಲನೆ ದೊರೆಯಲಿದೆ. ಈ ಸಂಬಂಧ ಪೂರ್ವಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು, ನಗರದ ಯಾವುದಾದರೂ ಒಂದು ಮಾರ್ಗದಲ್ಲಿ ಪರೀಕ್ಷಾರ್ಥವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು. ಇದರಿಂದ ಬಸ್‌ ಪ್ರಯಾಣ ನಗದುರಹಿತ ವ್ಯವಸ್ಥೆಗೆ ಒಳಪಡಲಿದೆ.

ಮುಂದಿನ ದಿನಗಳಲ್ಲಿ ಮೆಟ್ರೋ ಜತೆಗೆ ಇದನ್ನು ಜೋಡಣೆ ಮಾಡಲಾಗುವುದು. ಆಗ ಎರಡೂ ಕಡೆಗಳಲ್ಲೂ ಈ ಸ್ಮಾರ್ಟ್‌ ಕಾರ್ಡ್‌ ಬಳಸಬಹುದು ಎಂದು ಸಚಿವ ರಾಮಲಿಂಗಾರೆಡ್ಡಿ ಇದೇ ವೇಳೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಎಂಟಿಸಿ ಅಧ್ಯಕ್ಷ ನಾಗರಾಜು ಯಾದವ್‌, ನಿರ್ದೇಶಕ (ಮಾಹಿತಿ ತಂತ್ರಜ್ಞಾನ) ಬಿಶ್ವಜಿತ್‌ ಮಿಶ್ರಾ ಮತ್ತಿತರರು ಉಪಸ್ಥಿತರಿದ್ದರು. 

ನೂರು ಫೀಡರ್‌ ಬಸ್‌: ಮೆಟ್ರೋ ಮೊದಲ ಹಂತ ಏಪ್ರಿಲ್‌ಗೆ ಪೂರ್ಣಗೊಳ್ಳಲಿದ್ದು, ಇದಕ್ಕೆ ಪೂರಕವಾಗಿ ನೂರು “ಮೆಟ್ರೋ ಸಂಪರ್ಕ ಸೇವೆ’ಗಳನ್ನು ಆರಂಭಿಸಲಾಗುವುದು ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಡಾ.ಏಕರೂಪ್‌ ಕೌರ್‌ ತಿಳಿಸಿದ್ದಾರೆ. ಈಗಾಗಲೇ 83 ಸಂಪರ್ಕ ಸೇವೆಗಳು ಅಸ್ತಿತ್ವದಲ್ಲಿವೆ. ಸ್ವಾಮಿ ವಿವೇಕಾನಂದ ರಸ್ತೆಯಿಂದ ವೈಟ್‌ಫೀಲ್ಡ್‌ ನಡುವೆ ವೋಲ್ವೊ ಬಸ್‌ಗಳನ್ನು ಕಲ್ಪಿಸಿದ್ದು, ಕಡಿಮೆ ದರದಲ್ಲಿ ದಿನದ ಬಸ್‌ ಪಾಸ್‌ ಕೂಡ ನೀಡಲಾಗುತ್ತಿದೆ.

ಮೆಟ್ರೋ ಮೊದಲ ಹಂತ ಪೂರ್ಣಗೊಂಡ ನಂತರ ಇನ್ನೂ ನೂರು ಸಂಪರ್ಕ ಸೇವೆಗಳು ಹಾಗೂ “ಚಕ್ರ’ ಸೇವೆ ಆರಂಭಿಸಲಾಗುವುದು ಎಂದರು.  ಅಲ್ಲದೆ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಸಂಚರಿಸುವ ವಾಯುವಜ್ರ ಸೇವೆಗಳಲ್ಲಿ ಪ್ರಯಾಣಿಕರನ್ನು ಸೆಳೆಯಲು ನಾಲ್ಕಕ್ಕಿಂತ ಹೆಚ್ಚು ಪ್ರಯಾಣಿಕರಿಗೆ ವಿನಾಯ್ತಿ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು. 

650 ಕೋಟಿ ರೂ. ಸಾಲದಲ್ಲಿರುವ ಬಿಎಂಟಿಸಿ 
ಪ್ರಸ್ತುತ ಬಿಎಂಟಿಸಿ ಸಾಲ 650 ಕೋಟಿ ರೂ. ಇದೆ. ಬಸ್‌ಗಳ ಸಂಖ್ಯೆ ಕಡಿಮೆ ಇದ್ದು, ಪೀಕ್‌ ಅವರ್‌ನಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಲೋಡ್‌ ಫ್ಯಾಕ್ಟರ್‌ (ಒಂದು ಬಸ್‌ನಲ್ಲಿ ಪ್ರಯಾಣಿಸುವವರ ಸಂಖ್ಯೆ) ಶೇ. 78ರಷ್ಟಿದೆ ಎಂದು ಮಾಹಿತಿ ಬಿಎಂಟಿಸಿ ಎಂಡಿ ಏಕರೂಪ್‌ ಕೌರ್‌ ತಿಳಿಸಿದರು. ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಜುಲೈ ಅಂತ್ಯದೊಳಗೆ 1,658 ಹೊಸ ಬಸ್‌ಗಳು ಸೇರ್ಪಡೆಗೊಳ್ಳಲಿವೆ. ವರ್ಷಾಂತ್ಯಕ್ಕೆ ಸಂಸ್ಥೆಯಲ್ಲಿ 9 ಸಾವಿರ ಬಸ್‌ಗಳು ಕಾರ್ಯಾಚರಣೆ ಆರಂಭಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next