ಬಸವಕಲ್ಯಾಣ: ಗುರು ಹಾಗೂ ದೇವರ ಮನದಲ್ಲಿ ಮತ್ತು ಮನೆಯಲ್ಲಿ ಪ್ರವೇಶ ಸಿಗಬೇಕು ಎಂದರೆ, ನಮ್ಮ ಮನಸ್ಸು ಚನ್ನಾಗಿರಬೇಕು. ಆಗ ಮಾತ್ರ ಪ್ರವೇಶ ಸಿಗಲು ಸಾಧ್ಯ ಎಂದು ಗೋಕರ್ಣ ರಾಮಚಂದ್ರಾಪೂರ ಮಠದ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು ಹೇಳಿದರು.
ಮುಚಳಂಬ ಗ್ರಾಮದ ಶ್ರೀ ನಾಗಭೂಷಣ ಶಿವಯೋಗಿ ಸಂಸ್ಥಾನ ಮಠದಲ್ಲಿ ಶ್ರೀ ನಾಗಭೂಷಣ ಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಹಾಗೂ ಶ್ರೀ ಪ್ರಣವಾನಂದ ಮಹಾಸ್ವಾಮಿಗಳ 50 ನೇ ವರ್ಷದ ವರ್ಧಂತಿ ಮಹೋತ್ಸವ ಅಂಗವಾಗಿ ಗುರುವಾರ ನಡೆದ “ಕಿಂ ತೀರ್ಥ ಅಚ್ಛಾ ಮತಿ’ ವಿಷಯ ಕುರಿತು ಅವರು ಪ್ರವಚನ ನೀಡಿದರು.
ಮನುಷ್ಯನಲ್ಲಿ ಒಳ್ಳೆಯ ಮನಸ್ಸು ಇದ್ದಾಗ ಮಾತ್ರ ಒಳಗೆ ಬಾ ಅನ್ನುತ್ತಾನೆ. ಕಲ್ಮಷ ಇದ್ದಲ್ಲಿ ಹೊರಗೆ ಹೋಗು ಅನ್ನುತ್ತಾನೆ. ಏಕೆಂದರೆ ಮನಸ್ಸು ಮನುಷ್ಯನ ಮತ್ತು ದೇವರ ನಡುವೆ ಸೇತುಗೆಯಾಗಿ ಕೆಲಸ ಮಾಡುತ್ತದೆ ಎಂದರು.
ಮನುಷ್ಯ ದಿನಾಲೂ ಮೈ ತೊಳೆಯುತ್ತಿದ್ದಾನೆ ಹೊರತು ಮನಸ್ಸು ತೊಳೆಯುವುದಿಲ್ಲ. ಇದರಿಂದ ಕಾಲ ಕಳೆದಂತೆ ಮನುಷ್ಯನ ಮನಸ್ಸು ಹಾಳಾಗುತ್ತ ಹೋಗುತ್ತಿದೆ. ಹೀಗಾಗಿ ಭಕ್ತಾದಿಗಳು ಸ್ವತ್ಛವಾದ ಮನಸ್ಸು ಮಾಡಿಕೊಳ್ಳುವ ಮೂಲಕ ದೇವರ-ಗುರುಗಳ ಮನೆಯಲ್ಲಿ ಪ್ರವೇಶ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಲೋಕ ನಾಯಕ ಹಾಗೂ ಮಾಜಿ ಸಚಿವ ಭೀಮಣ್ಣಾ ಖಂಡ್ರೆ ಮಾತನಾಡಿ, ಶ್ರೀ ನಾಗಭೂಷಣ ಶಿವಯೋಗಿಗಳು ಸಮಾಜಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ, ಸುಮಾರು 9 ನೂರು ತೀರ್ಥ ಸ್ಥಳಗಳ ಪ್ರವಾಸ ಮಾಡಿ ಯೋಗ ಮಾಡುತ್ತಿದ್ದಾಗ ನಾನು ಅದರಲ್ಲಿ ಭಾಗವಹಿಸಿನ್ನು ಇಂದಿಗೂ ನಾನು ಮರೆಯುವಂತಿಲ್ಲ. ಹೀಗಾಗಿ ಇಂತಹ ಪವಿತ್ರವಾದ ಮಠಕ್ಕೆ ಸದಾ ಬೆನ್ನೆಲುಬಾಗಿ ನಿಂತುಕೊಳ್ಳುತ್ತೇನೆ ಎಂದು ಹೇಳಿದರು.
ಮುಚಳಂಬದ ಶ್ರೀ ಪ್ರಣವಾನಂದ ಮಹಾಸ್ವಾಮಿಗಳು ಮಾತನಾಡಿ, ಮನುಷ್ಯ ಪುಣ್ಯಸ್ಥಾನಗಳಿಗೆ ಹೋಗಿ ನೀರಿನಲ್ಲಿ ಮುಳಗಿದರೆ ಪಾವನವಾಗುವುದಿಲ್ಲ. ಸತ್ಸಂಗದಲ್ಲಿ ಮುಳಗಿದಾಗ ಮಾತ್ರ ಪಾವನವಾಗುತ್ತಾನೆ. ಹೀಗಾಗಿ ಅಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳುವ ಮೂಲಕ ನಿಮ್ಮ ಮನಸ್ಸು ಪಾವನ ಮಾಡಿಕೊಳ್ಳಿ ಎಂದರು.
ಇದಕ್ಕೂ ಮುನ್ನ ಗಂವ್ಹಾ ತ್ರಿವಿಕ್ರಮಾನಂದ ಮಠದ ಶ್ರೀ ಸೋಪಾನನಾಥ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ವೈಜನಾಥ ಕಾಮಶೆಟ್ಟೆ, ಆನಂದ ದೇವಪ್ಪಾ, ಕೆ.ಕೆ.ಮಾಸ್ಟರ್ ಸೇರಿದಂತೆ ವಿವಿಧ ಮಠಾಧಿಧೀಶರು ಹಾಗೂ ಭಕ್ತಾದಿಗಳು ಇದ್ದರು.