Advertisement
ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿರುವ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಧರಣಿ ಅಂತ್ಯಗೊಳಿಸಲು ಪಂಚಮಸಾಲಿ ಸಮುದಾಯದ ಹಿರಿಯ ಮುಖಂಡರು, ಮಾಜಿ ಸಚಿವರು ಹಾಗೂ ಬಿಜೆಪಿಯ ಹಾಲಿ ಶಾಸಕರ ಮೂಲಕ ಮನವೊಲಿಕೆ ಪ್ರಯತ್ನ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
Related Articles
Advertisement
ಸಚಿವರ ನಡೆಯ ಬಗ್ಗೆ ಬೇಸರ: ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟದಲ್ಲಿ ಅದೇ ಸಮುದಾಯದ ಸಚಿವರು ಸಮುದಾಯದ ಪರವಾಗಿ ಸರ್ಕಾರದ ಮೇಲೆ ಒತ್ತಡ ಹೇರುವ ಬದಲು, ಸರ್ಕಾರದ ಪರವಾಗಿ ಪ್ರತಿಭಟನೆ ಕೈಬಿಡುವಂತೆ ಪರೋಕ್ಷ ಒತ್ತಡ ಹೇರುತ್ತಿದ್ದಾರೆಂಬ ಆರೋಪ ಪ್ರತಿಭಟನಾಕಾರರಿಂದ ಕೇಳಿ ಬರುತ್ತಿದೆ.
ವೇಗ ಕಳೆದುಕೊಂಡ ಹೋರಾಟ: ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯು ವವರೆಗೂ ಹೋರಾಟದವೇಗ ಜೋರಾಗಿಯೇ ಇತ್ತು. ಆದರೆ,ಸಮಾವೇಶ ಮುಗಿದ ನಂತರ ಹರಿಹರಪೀಠದ ವಚನಾನಂದ ಸ್ವಾಮೀಜಿಪ್ರತಿಭಟನಾ ಧರಣಿಯಿಂದ ದೂರ ಉಳಿದಿದ್ದು, ಹೋರಾಟ ತನ್ನ ತೀವ್ರತೆ ಕಳೆದುಕೊಳ್ಳುವಂತಾಗಿದೆ ಎಂಬ ಅಭಿ ಪ್ರಾಯ ಕೇಳಿ ಬರುತ್ತಿದೆ.
ಸದನದಲ್ಲಿ ಪ್ರಸ್ತಾಪಕ್ಕೆ ನಿರ್ಧಾರ: ರಾಜ್ಯ ಸರ್ಕಾರ ತಮ್ಮ ಹೋರಾಟಕ್ಕೆ ಸರಿಯಾಗಿ ಸ್ಪಂದಿಸದೇ ಹತ್ತಿಕ್ಕುವ ಯತ್ನ ಮಾಡುತ್ತಿದೆ ಎನ್ನುವ ಕಾರಣಕ್ಕೆ ಮಾ.8ರ ನಂತರ ಈ ಕುರಿತು ಅಧಿವೇಶನದಲ್ಲಿ ಪ್ರಸ್ತಾಪಿಸಲು ಹೋರಾಟದ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಂದಾಗಿದ್ದಾರೆ.
ಈ ಕುರಿತು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಭೇಟಿ ಮಾಡಿ ಮನವಿ ಮಾಡಿದ್ದು, ಸೋಮವಾರ ಬಜೆಟ್ ಮಂಡನೆಯಾದ ನಂತರ ಮಂಗಳವಾರ ಈ ಕುರಿತು ಸದನದಲ್ಲಿ ಪ್ರಸ್ತಾಪಕ್ಕೆ ಆಗ್ರಹಿಸುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಉತ್ತರ ನೋಡಿಕೊಂಡು ಮತ್ತೆ ಮುಂದಿನ ಹೋರಾಟದ ಕುರಿತು ಚರ್ಚಿಸಿ ನಿರ್ಧರಿಸಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ.
–ಶಂಕರ ಪಾಗೋಜಿ