ದಾವಣಗೆರೆ: ಬಸವ ತತ್ವಗಳನ್ನು ದಿನನಿತ್ಯ ಪಾಲನೆಯಾಗಬೇಕಾದ ಅವಶ್ಯಕತೆ ಇದೆ ಎಂದು ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠದ ಡಾ| ಶ್ರೀ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯ ವ್ಯಕ್ತಪಡಿಸಿದರು. ಶನಿವಾರ ವಿರಕ್ತ ಮಠದಿಂದ ಬಸವ ಪ್ರಭಾತ್ ಪೇರಿ ಶತಮಾನೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ವಿಶೇಷ ಬಸವ ಪ್ರಭಾತ್ ಪೇರಿಗೆ ಚಾಲನೆ ನೀಡಿ ಮಾತನಾಡಿದರು.
ನೂರಾಮೂರು ವರ್ಷಗಳ ಹಿಂದೆ ವಿರಕ್ತಮಠದಲ್ಲಿ ಮೃತ್ಯುಂಜಯ ಸ್ವಾಮೀಜಿ ಮತ್ತು ಹರ್ಡೆàಕರ್ ಮಂಜಪ್ಪನವರು ಬಸವ ಜಯಂತಿ ಆರಂಭಿಸಿದರು. ಆ ಇತಿಹಾಸಕ್ಕೆ ಇಂದು ನಾವು ಸಾಕ್ಷಿಯಾಗಿದ್ದೇವೆ. ವಿಶ್ವಗುರು ಬಸವಣ್ಣನ ತತ್ವಗಳಾದ ಸಮಾನತೆ, ಕಾಯಕ, ದಾಸೋಹ, ಸಹೋದರತೆ, ಸ್ವಾತಂತ್ರ್ಯ ಇಂದಿಗೂ ಆದರ್ಶಗಳಾಗಿವೆ ಎಂದರು.
ದೇಶದಲ್ಲೇ ಮೊದಲ ಬಾರಿಗೆ ಬಸವೇಶ್ವರ ಜಯಂತಿ ಆರಂಭಿಸಿದ ವಿರಕ್ತಮಠದ ಬಗ್ಗೆ ಇರುವ ಪೂಜ್ಯಭಾವನೆ ಈಗ ಇಮ್ಮಡಿಯಾಗಿದೆ. ಅಂಥಹ ಮಹಾನ್ ಕ್ರಾಂತಿಕಾರಿಯ ತತ್ವ, ವಿಚಾರಧಾರೆಗಳನ್ನು ಶ್ರೀಮಠ ಮುಂದುವರಿಸಿಕೊಂಡು ಬರುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ಅವರು ತಿಳಿಸಿದರು.
ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಬಸವ ಜಯಂತಿ ಆರಂಭ ಸ್ಥಳವಾದ ವಿರಕ್ತಮಠ ಸ್ಮಾರಕ ಭಾಗ್ಯ ಕಂಡಿಲ್ಲ. ರಾಜ್ಯ ಸರ್ಕಾರ ವಿರಕ್ತಮಠದ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯ ನೆರವು ನೀಡಬೇಕು. ಬಸವಣ್ಣವನವರನ್ನು ಇಂದು ವಿಶ್ವವೇ ಗೌರವಿಸುತ್ತದೆ. ಈ ಹಿನ್ನೆಲೆಯಲ್ಲಿ ಅವರ ವಚನಗಳನ್ನು ಜಗತ್ತಿನ ಎಲ್ಲ ಭಾಷೆಗಳಿಗೆ ಅನುವಾದ ಮಾಡಬೇಕಿದೆ ಎಂದು ಒತ್ತಾಯಿಸಿದರು.
ಎಂ. ಜಯಕುಮಾರ್, ಕಣಕುಪ್ಪೆ ಮುರುಗೇಶಪ್ಪ, ಹಾಸಬಾವಿ ಕರಿಬಸಪ್ಪ, ಮಹಾದೇವಮ್ಮ, ಗುರುಬಸಪ್ಪ ಬೂಸನೂರು,ಲಂಬಿ ಮುರುಗೇಶಪ್ಪ ಇತರರು ಪೇರಿಯಲ್ಲಿ ಪಾಲ್ಗೊಂಡಿದ್ದರು. ಪ್ರಭಾತ್ ಪೇರಿ ವಿರಕ್ತ ಮಠದಿಂದ ಹೊರಟು ವಿವಿಧ ಬೀದಿಗಳಲ್ಲಿ ಸಂಚರಿಸಿತು. ನಂತರ ನಡೆದ ತೊಟ್ಟಿಲೋತ್ಸವದಲ್ಲಿ 20 ಕ್ಕೂ ಹೆಚ್ಚು ಮಕ್ಕಳಿಗೆ ನಾಮಕರಣ ಮಾಡಲಾಯಿತು.