ಧಾರವಾಡ: ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸಬೇಕೆಂಬುದು ಸರ್ವ ಸಮಾಜದವರ ನಿರ್ಧಾರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು. ಬಸವ ಜಯಂತಿ ಆಚರಣೆ ಕುರಿತಂತೆ ನಗರದ ಮುರುಘಾಮಠದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮಹಾತ್ಮಾ ಬಸವೇಶ್ವರರ ಜಯಂತಿಯನ್ನು ಸರ್ವ ಜನಾಂಗದವರು ಸೇರಿ ಆಚರಿಸಬೇಕು. ಮಕ್ಕಳು, ಯುವಜನರು ಅತೀ ಹೆಚ್ಚು ಪಾಲ್ಗೊಳ್ಳಬೇಕಿದೆ. ಯುವ ಪೀಳಿಗೆಗೆ ಶರಣರ, ಮಹಾತ್ಮರ ಸಂದೇಶವನ್ನು ತಿಳಿಸುವುದು ಅವಶ್ಯವಾಗಿದೆ. ಜಯಂತಿ ಕಾಟಾಚಾರಕ್ಕೆಂಬಂತೆ ಆಗಬಾರದು ಎಂದರು.
ಬಸವಣ್ಣನವರು ಕಾಯಕಕ್ಕೆ ಹೆಚ್ಚು ಮಹತ್ವ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಸವ ಜಯಂತಿಯಂದು ರಜೆಯ ಅವಶ್ಯಕತೆಯಿಲ್ಲ. ಅಂದು ಎಲ್ಲರೂ ಕಾಯಕ ಮಾಡುವ ಮೂಲಕ ಬಸವಣ್ಣನವರಿಗೆ ಗೌರವಾರ್ಪಣೆ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಸರಕಾರಿ ರಜೆಯನ್ನು ರದ್ದು ಮಾಡುವಂತೆ ಸರಕಾರದ ಗಮನ ಸೆಳೆಯುವುದಾಗಿ ಸಚಿವರು ತಿಳಿಸಿದರು.
ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, 1913ನೇ ಇಸ್ವಿಯಲ್ಲಿ ಲಿಂ|ಮೃತ್ಯುಂಜಯಪ್ಪಗಳು ಹಾಗೂ ಕರ್ನಾಟಕ ಗಾಂಧಿಧಿ ಹಡೇìಕರ ಮಂಜಪ್ಪನವರ ನೇತೃತ್ವದಲ್ಲಿ ಮೊದಲ ಬಾರಿಗೆ ಮುರುಘಾಮಠದ ವತಿಯಿಂದ ಬಸವ ಜಯಂತಿ ಆರಂಭವಾಯಿತು. ಅವರ ಆಶಯದಂತೆ ಈ ವರ್ಷವೂ ಸುಂದರ-ಸರಳ ಕಾರ್ಯಕ್ರಮ ಜರುಗಲಿದೆ ಎಂದರು.
ಏ.29ರಂದು ಬೆಳಗ್ಗೆ ಕಲಾಭವನದ ಆವರಣದಲ್ಲಿರುವ ಮಹಾತ್ಮಾ ಬಸವೇಶ್ವರರ ಪುತ್ಥಳಿಗೆ ಪುಷ್ಪ ಸಮರ್ಪಿಸಿ, ಶ್ರೀ ಉಳವಿ ಚನ್ನಬಸವೇಶ್ವರ ದೇವಸ್ಥಾನದಿಂದ ಬಸವೇಶ್ವರ ಭಾವಚಿತ್ರದೊಂದಿಗೆ ಪಲ್ಲಕ್ಕಿ ಸಮೇತವಾಗಿ ಭವ್ಯ ಮೆರವಣಿಗೆ ಹೊರಟು ವಿವಿಧ ಮುಖ್ಯ ರಸ್ತೆ ಮೂಲಕ ಸಂಚರಿಸಿ ನಂತರ ಮರಳಿ ದೇವಸ್ಥಾನಕ್ಕೆ ಆಗಮಿಸಲಿದೆ.
ಅಂದು ಸಂಜೆ 4 ಗಂಟೆಗೆ ಕಲಾಭವನ ಆವರಣದಿಂದ ಬೈಕ್ ರ್ಯಾಲಿ ಹಾಗೂ ಪಥ ಸಂಚಲನ ಮೂಲಕ ಭಕ್ತಾಧಿ ದಿಗಳು ಶ್ರೀ ಮುರುಘಾಮಠಕ್ಕೆ ಆಗಮಿಸಿ ಸಮಾವೇಶಗೊಳ್ಳುವರು ಎಂದರು. ಅಂದು ಸಂಜೆ 6 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅಧ್ಯಕ್ಷತೆ ಹಾಗೂ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯದಲ್ಲಿ ಜ್ಯೋತಿ ಬದಾಮಿ ಅವರಿಂದ ಉಪನ್ಯಾಸ ಜರುಗಲಿದೆ.
ಕಲಾವಿದೆ ಸೀತಾ ಚಪ್ಪರ ತಂಡದವರಿಂದ ವಚನ ನೃತ್ಯ, ಶ್ರೀಧರ ಕುಲಕರ್ಣಿ ತಂಡದಿಂದ ವಚನ ಸಂಗೀತ ನಡೆಯಲಿದೆ. ಭಕ್ತರಿಗೆ ಪ್ರಸಾದ ವ್ಯವಸ್ಥೆ ಇದೆ ಎಂದರು. ಸಿದ್ದರಾಮಣ್ಣ ನಡಕಟ್ಟಿ, ರಾಜು ಮರಳಪ್ಪನವರ, ನಾಗರಾಜ ಪಟ್ಟಣಶೆಟ್ಟಿ, ಡಿ.ಬಿ.ಲಕಮನಹಳ್ಳಿ, ಜಿಪಂ ಸದಸ್ಯ ಕೆ.ಸಿ.ಪುಡಕಲಕಟ್ಟಿ, ಸತೀಶ ತುರಮರಿ ಸೇರಿದಂತೆ ಹಲವರು ಇದ್ದರು.