Advertisement

ರಾಜ್ಯದಲ್ಲಿ ಕೋವಿಡ್ 3ನೇ ಅಲೆಯ ಭೀತಿ ಇದ್ದರೂ ಸರ್ಕಾರ ಸಿದ್ಧತೆಗೆ ಮುಂದಾಗಿಲ್ಲ : ಯತ್ನಾಳ್

09:54 PM May 19, 2021 | Team Udayavani |

ವಿಜಯಪುರ: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯ ಭೀತಿ ಇದ್ದರೂ ರಾಜ್ಯ ಸರ್ಕಾರ ಸಿದ್ಧತೆಗೆ ಮುಂದಾಗಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಜಿಂದಾಲ್ ಕಂಪನಿಗೆ ಜಮೀನು ನೀಡುವ, ಲೂಟಿ ಹೊಡೆಯುವ ಕೆಲಸಬಿಟ್ಟು ಜನ‌ಸೇವೆ ಮಾಡಲಿ, ಇಲ್ಲವೇ ಖುರ್ಚಿ ಖಾಲಿ ಮನೆಗೆ ಹೋಗಲಿ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಚರು ಸಿ.ಎಂ. ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.

Advertisement

ಬುಧವಾರ ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸುಮ್ಮನೇ ಮನೆಯಲ್ಲಿ ಕುಳಿತು ಕಾಲಹರಣ ಮಾಡುವ ಬದಲು ಕೋವಿಡ್ ವಿಷಯದಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡಲಿ. ಅದಾಗದಿದ್ದರೆ ಅಧಿಕಾರದಲ್ಲಿ ಇರುವ ಕುರ್ಚಿ ತೊರೆದು ಮನೆಗೆ ಮರಳಲಿ ಎಂದು ಯತ್ನಾಳ ಆಗ್ರಹಿಸಿದರು.

ಮುಖ್ಯಮಂತ್ರಿಗಳೇ ಕೇವಲ ಜಿಂದಾಲ್‌ಗೆ ಜಮೀನು ನೀಡಲು ಕುರ್ಚಿಯ ಮೇಲೆ ಕುಳಿತುಕೊಳ್ಳಬೇಡಿ. ಅಧಿಕಾರದಿಂದ ಕೆಳಗೆ ಇಳಿಯುವಾಗಲಾದರೂ ಜನ‌ಸೇವೆ ಮಾಡಲಿ. ಅದಾಗದಿದ್ದಲ್ಲಿ ರಾಜಕೀಯ ನಿವೃತ್ತಿಯಾಗಿ ಮನೆಯಲ್ಲಿ ಕುಳಿತುಕೊಳ್ಳಿ ಎಂದು ಒತ್ತಾಯಿಸಿದರು.

ಇದನ್ನೂ ಓದಿ :ನೂರು ಹಾಸಿಗೆಗಳ ಕೊರೊನಾ ಆರೈಕೆ ಕೇಂದ್ರ ನಾಳೆಯಿಂದ ಆರಂಭ: ಈಶ್ವರಪ್ಪ

ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಕ್ಕೆ ಬರುತ್ತಲೇ ಕೇವಲ ಲೂಟಿ ಮಾಡುವುದನ್ನಷ್ಟೇ ಮಾಡಿದ್ದಾರೆ. ಇನ್ನಾದರೂ ಕಷ್ಟದಲ್ಲಿ ಇರುವ ಜನರನ್ನು ಉಳಿಸುವ ಕೆಲಸ ಮಾಡಲಿ‌ ಎಂದು ಕುಟುಕಿದರು.

Advertisement

ನಕಲಿ ಯೋಜನೆಗಳನ್ನು ಕೈ ಬಿಡಲಿ, ಅಲ್ಪಸಂಖ್ಯಾತರ ಅಭಿವೃದ್ಧಿಗೆ 1500 ಕೋಟಿ ರೂ., ಚರ್ಚ್ ನಿರ್ಮಾಣಕ್ಕೆ 200 ಕೋಟಿ ರೂ. ನಕಲಿ ಯೋಜನೆ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಯವರು ಘೋಷಣೆ ಮಾಡಿರುವ ಕೋವಿಡ್ ಪರಿಹಾರ ಪ್ಯಾಕೇಜ್‌, ಲಾಕ್‌ಡೌನ್ ಘೋಷಣೆ ಮಾಡುವ ಮೊದಲೇ ಪರಿಹಾರ ಪ್ಯಾಕೇಜ್‌ ಘೋಷಣೆ ಮಾಡಿದ್ದಾರೆ. ಪರಿಹಾರದ ಹಣಕ್ಕೆ ಬದಲಾಗಿ ಬಡವರಿಗೆ, ಕೂಲಿಕಾರ್ಮಿಕರಿಗೆ ಆಹಾರ ಧಾನ್ಯ ವಿತರಿಸಬೇಕಿತ್ತು. ಆದರೆ, ಇವರು ಕೊರೊನಾ ಹೆಚ್ಚಾದರೆ ತಮ್ಮ ಕುರ್ಚಿ ಉಳಿಯುತ್ತದೆಂಬ ದುರಾಸೆಯಿಂದ ಈ ವರೆಗೆ ಸುಮ್ಮನಿದ್ದು, ಇದೀಗ ಪ್ಯಾಕೇಜ್ ಘೋಷಿಸಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ಕಾಂಗ್ರೆಸ್ ಹಾಗೂ ಇತರೆ ವಿರೋಧ ಪಕ್ಷದವರು, ಬುದ್ದಿಜೀವಿಗಳು, ದೇಶದ್ರೋಹಿಗಳು ಕೋವಿಡ್‌ ಲಸಿಕೆ ಕುರಿತು ಇದು ಮೋದಿ ಲಸಿಕೆ, ಇದು ಬಿಜೆಪಿ ಲಸಿಕೆ ಎಂದು ಅಪಪ್ರಚಾರ ಮಾಡಿ ಲಕ್ಷಾಂತರ ಲಸಿಕೆ ಹಾಳಾಗಲು ಕಾರಣರಾದರು. ಇದೀಗ ಅದೇ ಲಸಿಕೆ ಪಡೆಯಲು ಸಾಲುಗಟ್ಟಿದ್ದಾರೆ ಎಂದು ಟೀಕಿಸಿದರು.

ವಿಜಯಪುರಕ್ಕೆ ಇನ್ನೂ ಹೆಚ್ಚಿನ ಲಸಿಕೆ ಬೇಕಿದ್ದರೂ ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಮುಖ್ಯಮಂತ್ರಿ ತಾರತಮ್ಯ ಮಾಡಬಾರದು. ಆರೋಗ್ಯ ಸಚಿವರಿಗೆ ಹೆಚ್ಚಿನ ಲಸಿಕೆ ನೀಡುವಂತೆ ಮನವಿ ಮಾಡಿದ್ದೇನೆ. ಲಸಿಕೆಯನ್ನು ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮಾಡದೇ ಯಾವ ಕ್ಷೇತ್ರದಲ್ಲಿ ಹೆಚ್ಚಿನ ಲಸಿಕೆ ಹಾಕಲಾಗಿದೆಯೋ ಆ ಕ್ಷೇತ್ರಕ್ಕೆ ಹೆಚ್ಚಿಗೆ ನೀಡಬೇಕು ಎಂದು ಒತ್ತಾಯಿಸಿದರು.

ವಿಜಯಪುರ ನಗರದಲ್ಲಿ ಶೇಕಡಾ ನೂರರಷ್ಟಯ ಪ್ರಮಾಣದಲ್ಲಿ ಲಸಿಕೆ ಹಾಕಲು ನಿರ್ಧರಿಸಿದ್ದೇವೆ. ಯಾರು ಈ ಲಸಿಕೆ ಬಗ್ಗೆ ಟೀಕೆ ಮಾಡುವವರು ಮನೆಯಲ್ಲಿಯೇ ಮಲಗಿಕೊಳ್ಳಲಿ. ದೇಶಪ್ರೇಮಿಗಳಿಗೆ ಲಸಿಕೆ ಹಾಕಿಕೊಳ್ಳಲಿ ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next