Advertisement

ಬರೋಡಾ-ಕರ್ನಾಟಕ: ಎತ್ತಣಿಂದೆತ್ತಣ ಸಂಬಂಧವಯ್ಯ?

12:40 AM Oct 09, 2021 | Team Udayavani |

ಬ್ರಿಟಿಷರ ಆಡಳಿತದ ವೇಳೆ ಅಖಂಡ ಭಾರತದ ಬರೋಡಾ, ಮೈಸೂರು ಮತ್ತು ಹೈದರಾಬಾದ್‌ ರಾಜ ಸಂಸ್ಥಾನಗಳು ಅತ್ಯಂತ ಪ್ರಭಾವಶಾಲಿಗಳಾಗಿದ್ದವು. ಇವು ಗಳಲ್ಲಿ ಶೈಕ್ಷಣಿಕ- ಸಾಮಾಜಿಕ ಸುಧಾರಣೆ, ಜನಾನುರಾಗ, ಅಭಿವೃದ್ಧಿ ದೃಷ್ಟಿಕೋನದಲ್ಲಿ ಬರೋಡಾ ಮತ್ತು ಮೈಸೂರು ಮುಂದಿದ್ದವು. ಇವುಗಳ ನಡುವೆ ಕೊಡು-ಕೊಳ್ಳುವಿಕೆ ಕಂಡು ಬರುತ್ತವೆ. ಎರಡೂ ಕಡೆಯ ಅರ ಮನೆ- ಗ್ರಂಥಾಲಯ, ನಗರಾಭಿವೃದ್ಧಿ ಕಲ್ಪನೆಗಳಲ್ಲಿ ಸಾಮ್ಯಗಳಿವೆ. ಮೈಸೂರಿನ ಚಾಮರಾಜೇಂದ್ರ ಒಡೆಯರ್‌ ಬರೋಡಾಕ್ಕೆ 1888ರಲ್ಲಿ ಭೇಟಿ ನೀಡಿದ ದ್ಯೋತಕವಾಗಿ ಅರಮನೆ ಸಮೀಪದ ರಸ್ತೆಗೆ ಒಡೆಯರ್‌ ಹೆಸರಿಟ್ಟರೆ, ಮೈಸೂರಿನ ಒಂದು ರಸ್ತೆಗೆ ಸಯ್ನಾಜಿರಾವ್‌ ಗಾಯಕ್‌ವಾಡ್‌ ಹೆಸರು ನಾಮಕರಣವಾಯಿತು. ಬರೋಡಾ ಓರಿಯಂಟಲ್‌ ಇನ್‌ಸ್ಟಿಟ್ಯೂಟ್‌ಗೆ ಮೈಸೂರಿನ ಓರಿಯಂಟಲ್‌ ಸಂಸ್ಥೆ ಪ್ರೇರಣೆಯಾಯಿತು. 1908ರಲ್ಲಿ ಬ್ಯಾಂಕ್‌ ಆಫ್ ಬರೋಡಾ, 1913ರಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು ಸ್ಥಾಪನೆಗೊಂಡಿತು.

Advertisement

ಬಾಲ್ಯವಿವಾಹ ನಿಷೇಧ, ಅಸ್ಪೃಶ್ಯತಾ ನಿವಾರಣೆ, ಸಂಸ್ಕೃತ ಶಿಕ್ಷಣ ಜಾರಿ, ಸಾರ್ವತ್ರಿಕ ಉಚಿತ-ಕಡ್ಡಾಯ ಪ್ರಾಥಮಿಕ ಶಿಕ್ಷಣದ ಜಾರಿ, ರೈಲ್ವೇ, ನೀರಾವರಿ ಯೋಜನೆ, ಲಲಿತಕಲೆಗಳಿಗೆ ಪ್ರೋತ್ಸಾಹ ಹೀಗೆ ಒಂದೆರಡಲ್ಲ ಸಯ್ನಾಜಿರಾವ್‌ ಗಾಯಕ್‌ವಾಡ್‌ ಸಾಧನೆ. ಅರಬಿಂದೋ ಬರೋಡಾ ಸೇವೆಗೆ ಸೇರಲೂ ಇವರು ಕಾರಣ. ಇವರ ಶೈಕ್ಷಣಿಕ ಪ್ರೋತ್ಸಾಹದಿಂದ ಬೆಳೆದವರಲ್ಲಿ ಡಾ| ಬಾಬಾ ಸಾಹೇಬ್‌ ಅಂಬೇಡ್ಕರ್‌ ಒಬ್ಬರು. ಇವರಲ್ಲಿ ದಿವಾನರಾಗಿದ್ದು ಅನಂತರ ಸ್ವಾತಂತ್ರ್ಯ ಹೋರಾಟಗಾರರಾದವರು ದಾದಾಬಾಯಿ ನವರೋಜಿ. 1895ರಲ್ಲಿ ಎಸ್‌.ಬಿ. ತಳಪಾಡೆಯವರು ಮಾನವರಹಿತ ವಿಮಾನವನ್ನು (ಮರುತ್ಸಖ) ರೈಟ್‌ ಸಹೋದರರಿಗಿಂತ ಎಂಟು ವರ್ಷಗಳ ಮುನ್ನ ಮುಂಬಯಿ ಚೌಪಾಟಿ ಬೀಚ್‌ನಲ್ಲಿ ಆಗಸಕ್ಕೆ ಹಾರಿಸುವಾಗ ಪ್ರೋತ್ಸಾಹಿಸಿದವರು, ಸಾಕ್ಷಿಯಾದವರು ಸಯ್ನಾಜಿರಾವ್‌.

ಸಾಮಾನ್ಯನಾಗಿದ್ದ ಈ ಸಯ್ನಾಜಿರಾವ್‌ ರಾಜ ನಾದದ್ದೇ ಕುತೂಹಲಕಾರಿ. ಈತ ನಾಸಿಕದಲ್ಲಿ ಜನಿಸಿದ್ದ. ಮನೆತನ ಮಾತ್ರ ಗಾಯಕ್‌ವಾಡ್‌ರದ್ದು. ಖಂಡೇ ರಾವ್‌ ಗಾಯಕ್‌ವಾಡ್‌ ಅನಂತರ ರಾಜನಾದ ತಮ್ಮ ಮಲ್ಹಾರರಾವ್‌ ದುರ್ವರ್ತನೆ ಕಾರಣ ಪದಚ್ಯುತಗೊಳ್ಳ ಬೇಕಾಯಿತು. ಇದೇ ಸಂದರ್ಭ ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿಯ ಮುತ್ತಿಗಿ ಶ್ರೀನಿವಾಸ ಆಚಾರ್ಯರು ದೇಶ ಪರ್ಯಟನೆ ಹೊರಟಿದ್ದರು. ಮಹಾರಾಷ್ಟ್ರ ದಾಟಿ ಬರೋಡಾಕ್ಕೆ ಹೋಗುವಾಗ (1875) ಸಂಗೋರಾಮ ಎಂಬವ ಜತೆಗೂಡಿದ. ಇಬ್ಬರೂ ಬೈರಾಗಿಗಳು. ಇವರ ಬಳಿ ಒಬ್ಬ ಬಾಲಕ ಬಂದ. ಆತನಾರೋ ಇವರಿಗೆ ತಿಳಿಯದು. ಮುತ್ತಿಗಿ ಆಚಾರ್ಯರು “ಈತನಿಗೆ ರಾಜಯೋಗವಿದೆ’ ಎಂದರು. “ನಿನಗೆ ರಾಜ್ಯ ಪ್ರಾಪ್ತವಾದರೆ ಹೇಗೆ ಇರುತ್ತಿ?’ ಎಂದು ಸಂಗೋ ರಾಮ ಕೇಳಿದಾಗ “ಸರಳವಾಗಿದ್ದು ಸತು³ರುಷರ ಸೇವೆ ಮಾಡಿಕೊಂಡು ಇರುತ್ತೇನೆ. ಇವರನ್ನು ನನ್ನ ಬಳಿಯೇ ಇಟ್ಟುಕೊಳ್ಳುತ್ತೇನೆ’ ಎಂದ. ಆಗ “ನಾನು ಯಾರಲ್ಲಿ ಯಾದರೂ ಇರುವವನೆ?’ ಎಂದು ಆಚಾರ್ಯರು ಮನಸ್ಸಿನಲ್ಲಿಯೇ ಮುಸಿಮುಸಿ ನಕ್ಕರಂತೆ.
ಹೋಳ್ಕರ್‌ ಸಂಸ್ಥಾನದ ದಿವಾನರಾಗಿದ್ದ ಕನ್ನಡ ಮಾತನಾಡುವ ಟಿ.ಮಾಧವ ರಾವ್‌ ಬರೋಡಾಕ್ಕೆ ನೇಮಕಗೊಂಡರು. ಖಂಡೇರಾವ್‌ ಗಾಯಕ್‌ವಾಡ್‌ ಪತ್ನಿ ಜಮುನಾದೇವಿಯವರಿಗೆ ಗಂಡು ಮಕ್ಕಳಿರಲಿಲ್ಲ. ಜಮುನಾದೇವಿಯವರು ಗೋಪಾಲನನ್ನು ದತ್ತು ಪಡೆದು ರಾಜನನ್ನಾಗಿ ನೇಮಿಸಿದರು. ಗೋಪಾಲನನ್ನು ದಿವಾನ್‌, ರೆಸಿಡೆಂಟ್‌ ರಾಬರ್ಟ್‌ ಪೈರೆ ರಾಜ ಪೋಷಾಕಿನೊಂದಿಗೆ ಕರೆದೊಯ್ಯುವಾಗ ಮುತ್ತಿಗೆ ಆಚಾರ್ಯರನ್ನುದ್ದೇಶಿಸಿ “ಗುರುಮಹಾರಾಜರು’ ತಮ್ಮೊಂದಿಗೆ ಬರಬೇಕೆಂದು ಹಠತೊಟ್ಟ, ಬಾಲಕ ನಲ್ಲವೆ? ಇವರೂ ಹೋದರು. ಬಳಿಕ ಮುತ್ತಿಗೆ ಆಚಾರ್ಯ, ಸಂಗೋರಾಮರು ಹಣವೇ ಇಲ್ಲದೆ ಏಳು ವರ್ಷ ರಾವಲ್ಪಿಂಡಿ, ಲಾಹೋರ್‌, ಕರಾಚಿ (ಈಗ ಪಾಕಿಸ್ಥಾನಕ್ಕೆ ಸೇರಿದ), ನೇಪಾಲ ಸೇರಿದಂತೆ ದೇಶದ ಉದ್ದಗಲ ಸಂಚರಿಸಿದರು. ಇತ್ತ ಗೋಪಾಲ ಸಯ್ನಾಜಿರಾವ್‌ ಗಾಯಕ್‌ವಾಡ್‌ ಹೆಸರಿನಿಂದ ಪ್ರಸಿದ್ಧನಾದ. ಮುತ್ತಿಗೆ ಆಚಾರ್ಯರು ಇವೆಲ್ಲ ಲೌಕಿಕ ವ್ಯವಹಾರಗಳಿಂದ ದೂರವಿದ್ದರೂ ಅವರ ಸನ್ಯಾಸ ಪೂರ್ವೋತ್ತರದ ಎರಡು ಚಿತ್ರಗಳು ಬರೋಡಾದ ಅಸೆಂಬ್ಲಿ ಹಾಲ್‌ನಲ್ಲಿ ರಾರಾಜಿಸುತ್ತಿದ್ದವು.

ಇದನ್ನೂ ಓದಿ:ಬದಲಿ ಇಂಧನ ಬಳಕೆ ಮಾಡಿದರೆ ದೇಶ ಐದು ವರ್ಷಗಳಲ್ಲಿ ನಂ1

ಗೋಪಾಲ ಹುಟ್ಟಿದ್ದು 1863ರ ಮಾರ್ಚ್‌ 11, ದತ್ತು ಹೋದದ್ದು 1875ರ ಮೇ 27, ರಾಜನಾಗಿ ನಿಯುಕ್ತಿ ಜೂನ್‌ 16, ಪ್ರಾಪ್ತ ವಯಸ್ಸಿನಲ್ಲಿ ಪೂರ್ಣಾಧಿಕಾರ ಹೊಂದಿದ್ದು 1881ರ ಡಿಸೆಂಬರ್‌ 28ರಂದು. ಚಾಮರಾಜ ಒಡೆಯರ ಕಾಲದ (1863-1894) ಬಳಿಕ ಕೃಷ್ಣರಾಜ ಒಡೆಯರ್‌ ಕಾಲದಲ್ಲಿಯೂ (1884-1940) ಬರೋಡಾದ ಸಂಬಂಧ ಮುಂದುವರಿಯಿತು. 1860ರಲ್ಲಿ ತಿರುಪತಿ ಸಮೀಪ ಹುಟ್ಟಿದ ಮುತ್ತಿಗೆ ಆಚಾರ್ಯರು 12 ವರ್ಷವಿದ್ದಾಗ 1972ರಲ್ಲಿ ದೇಶಪರ್ಯಟನೆಗೆ ಹೊರಟರು. ಕೆಲವು ಕಾಲ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಆರ್ಯಅಕ್ಷೋಭ್ಯ ಸಂಸ್ಥಾನದ ಉತ್ತರಾಧಿಕಾರಿಗಳಾಗಿ ಶ್ರೀ ರಘುಪ್ರೇಮತೀರ್ಥರೆಂಬ ಹೆಸರಿನಲ್ಲಿ ನಿಯುಕ್ತಿ ಗೊಂಡರೂ ಕೆಲವೇ ವರ್ಷಗಳಲ್ಲಿ ಆ ಅಧಿಕಾರವನ್ನೂ ಹಿಂದಿರುಗಿಸಿ ಕೇವಲ ಸನ್ಯಾಸಿಯಾಗಿ ಪರಂಧಾಮ ಗೈದದ್ದು 1943ರಲ್ಲಿ ಆಂಧ್ರಪ್ರದೇಶದ ಅದೋನಿಯ ರಾಮಮಂದಿರದಲ್ಲಿ. ಅಪಾರ ಪಿತ್ರಾರ್ಜಿತ ಭೂಮಿ, ಚಿನ್ನ, ತಮ್ಮ ಸಂಪಾದನೆಯನ್ನು ಮೂರು ಬಾರಿ ಸರ್ವಸ್ವ ದಾನ ಮಾಡಿದ ನೈಜ ವಿರಾಗಿ.

Advertisement

ಕರ್ನಾಟಕದ ಕರಾವಳಿಯಲ್ಲಿ ಹುಟ್ಟಿ ರಾಷ್ಟ್ರ ಮಟ್ಟಕ್ಕೇರಿದ ಐದು ಬ್ಯಾಂಕ್‌ಗಳಲ್ಲಿ ಒಂದಾದ ವಿಜಯಾ ಬ್ಯಾಂಕ್‌ನ್ನು 1931ರ ಅಕ್ಟೋಬರ್‌ 23ರಂದು ಅತ್ತಾವರ ಬಾಲಕೃಷ್ಣ ಶೆಟ್ಟಿ ಅವರು ಸ್ಥಾಪಿಸಿ, 1949- 1956ರಲ್ಲಿ ಮದ್ರಾಸ್‌ ಪ್ರಾಂತ್ಯದ ಕಾಂಗ್ರೆಸ್‌ ಸರಕಾರ ದಲ್ಲಿ ಸಚಿವರಾಗಿದ್ದರೂ ಬ್ರಹ್ಮಸಮಾಜ, ಆರ್ಯ ಸಮಾಜ, ಶೋಷಿತ ವರ್ಗದವರ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡ ಆದರ್ಶಜೀವಿ. ಈಗ ಬ್ಯಾಂಕ್‌ ಆಫ್ ಬರೋಡಾ ಜತೆ ವಿಜಯ ಬ್ಯಾಂಕ್‌ ವಿಲೀನಗೊಂಡು ದೇಶದ ಪ್ರಮುಖ ವಿತ್ತ ಸಂಸ್ಥೆಯಾಗಿದೆ.

ರಾಜರಾಗಲೀ (ಆಡಳಿತಗಾರರು), ಸನ್ಯಾಸಿಗಳಾ ಗಲೀ ಹೇಗಿರಬೇಕೆಂದು ತೋರಿಸಿದವರು ಹಲವರು, ಈಗಲೂ ಸ್ಮರಣೀಯರು. ಇಂತಹ ಅವಕಾಶ ಎಲ್ಲರಿಗೆ ಅವರವರ ಮಟ್ಟಿಗೆ ಸಿಗುತ್ತಲೇ ಇರುತ್ತದೆ. ಹುದ್ದೆಯಿಂದ ವ್ಯಕ್ತಿಗೆ ಗೌರವ, ವ್ಯಕ್ತಿಯಿಂದ ಹುದ್ದೆಗೆ ಗೌರವ ಬೇರೆ ಬೇರೆ. ಸೌಮನಸ್ಕರಾಗಿದ್ದರೆ (ಒಳ್ಳೆಯ ಮನಸ್ಸು) ಅವರ ಆದರ್ಶಗಳಿಗೆ ತಡೆ ಇರದು, ಮರು ಹುಟ್ಟು ಪಡೆದು ಸಂಬಂಧಗಳು ಮುಂದುವರಿಯುತ್ತಲೇ ಇರುತ್ತವೆ. ಇವುಗಳ ಎಲ್ಲ ಹೆಜ್ಜೆ ಗುರುತುಗಳನ್ನು ಗುರುತಿಸುವುದು ನಮ್ಮ ಇತಿಮಿತಿಗೆ ಕಷ್ಟ.

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next