ರಾಯಚೂರು: ತೊಗರಿ ಬೆಂಬಲ ಬೆಲೆ 6ರಿಂದ 8 ಸಾವಿರ ರೂ.ಗೆ ಹೆಚ್ಚಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಉಮೇಶ ಕತ್ತಿ ನೀಡಿದ್ದಾರೆ ಎನ್ನಲಾದ ಹೇಳಿಕೆ ರೈತರಲ್ಲಿ ಆಸೆಯ ಜತೆಗೆ ಗೊಂದಲ ಸೃಷ್ಟಿಸಿದೆ. ಹೀಗಾಗಿ ಖರೀದಿ ಕೇಂದ್ರಗಳಿಗೆ ರೈತರು ತೊಗರಿ ಮಾರುವ ಬದಲು ಬೆಲೆ ಹೆಚ್ಚಳ ಯಾವಾಗ ಎಂದು ಕೇಳಲು ಬರುವಂತಾಗಿದೆ.
ಸರ್ಕಾರ ಜಿಲ್ಲೆಯಲ್ಲಿ ಈ ಬಾರಿ 42 ತೊಗರಿ ಖರೀದಿ ಕೇಂದ್ರ ಆರಂಭಿಸಿದೆ. ಚೀಲಗಳಿಗೆ ಕ್ಯೂಆರ್ ಕೋಡ್ ಅಳವಡಿಸಿದ್ದರಿಂದ ಕೇಂದ್ರಗಳಲ್ಲಿ ಖರೀದಿ ಪ್ರಕ್ರಿಯೆ
ತಡವಾಗಿದ್ದು, ಫೆ.1ರಿಂದ ಶುರುವಾಗಿದೆ. ಖರೀದಿ ಕೇಂದ್ರಕ್ಕಿಂತ ಮುಕ್ತ ಮಾರುಕಟ್ಟೆಯಲ್ಲೇ ಕ್ವಿಂಟಲ್ ಗೆ 500 ರೂ. ದರ ಹೆಚ್ಚಾಗಿರುವ ಕಾರಣ ರೈತರು ಖರೀದಿ ಕೇಂದ್ರಗಳ ಆಸೆ ಕೈ ಬಿಟ್ಟಿದ್ದರು. ಈಚೆಗೆ ಸಚಿವರು ತೊಗರಿ ಬೆಲೆ ಹೆಚ್ಚಳದ ಕುರಿತು ನೀಡಿದ ಮುನ್ಸೂಚನೆ; ರೈತರಲ್ಲಿ ಮತ್ತೆ ಜಿಜ್ಞಾಸೆ ಮೂಡಿಸಿದೆ.
ಉಭಯ ಸಂಕಟದಲ್ಲಿ ರೈತರು: ಒಂದು ತಿಂಗಳ ಹಿಂದೆಯೇ ನೋಂದಣಿ ಮಾಡಿಸಿದರೂ ಕ್ಯೂಆರ್ ಕೋಡ್ ವಿಳಂಬದಿಂದ ತೊಗರಿ ಖರೀದಿ ಶುರುವಾಗಿರಲಿಲ್ಲ. ಹೇಗಿದ್ದರೂ ಮಾರುಕಟ್ಟೆಯಲ್ಲೂ ಉತ್ತಮ ಬೆಲೆ ಇದೆಯಲ್ಲ ಎಂದು ಸಾಕಷ್ಟು ರೈತರು ಈಗಾಗಲೇ ಮಾರಾಟ ಮಾಡಿದ್ದಾರೆ. ಸಚಿವರು ತೊಗರಿ ಬೆಲೆ ಹೆಚ್ಚಳದ ಹೇಳಿಕೆ ನೀಡಿದ್ದಾರೋ ಆಗಿನಿಂದ ರೈತರಿಗೆ ಗೊಂದಲ ಏರ್ಪಟ್ಟಿದೆ. ಈ ಸುದ್ದಿಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ತೊಗರಿ ಮಾರಬೇಕೆಂದವರು ಹಿಂದೇಟು ಹಾಕುವಂತಾಗಿದೆ.
ಖರೀದಿ ಕೇಂದ್ರಗಳು ಭಣ ಭಣ: ಮೊದಲ ಬಾರಿಗೆ ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳು ಭಣಗುಡುತ್ತಿವೆ. ಈ ಬಾರಿ ಪ್ರತಿ ಪಹಣಿಗೆ 10ರ ಬದಲು 20 ಕ್ವಿಂಟಲ್ ತೊಗರಿ ಖರೀದಿಸಲಾಗುತ್ತಿದೆ. ಖರೀದಿ ಕೇಂದ್ರಗಳನ್ನು 35ರಿಂದ 42ಕ್ಕೆ ಹೆಚ್ಚಿಸಲಾಗಿದೆ. ಖರೀದಿ ಶುರುವಾದರೂ ರೈತರು ಬಾರದ ಕಾರಣ ಕೇಂದ್ರಗಳು ಭಣಗುಡುತ್ತಿವೆ. ಕಳೆದ ವರ್ಷ ಖರೀದಿ ಕೇಂದ್ರಗಳಲ್ಲೇ 2.10 ಲಕ್ಷ ಕ್ವಿಂಟಲ್ ತೊಗರಿ ಖರೀದಿಯಾಗಿತ್ತು.
ಎಪಿಎಂಸಿಗೂ ಕುಗ್ಗಿದ ಆವಕ ಸರ್ಕಾರ 6 ಸಾವಿರ ರೂ. ಬೆಂಬಲ ಬೆಲೆ ನಿಗದಿ ಮಾಡಿದ್ದರೆ, ಮುಕ್ತ ಮಾರುಕಟ್ಟೆಯಲ್ಲಿ ಈಗಾಗಲೇ 6,500 ರೂ. ದರವಿದೆ. ಮಾರುಕಟ್ಟೆಗೆ ಆವಕ ಕೂಡ ಕಳೆದ ವರ್ಷಕ್ಕಿಂತ ಕಡಿಮೆ ಇದೆ. ಹೀಗಾಗಿ ವರ್ತಕರು ಹಿಂದಿನಂತೆ ಅರ್ಧ ಹಣ ಹಿಡಿದು ಕೊಡದೆ ಪೂರ್ತಿ ಹಣ ನೀಡುತ್ತಿದ್ದಾರೆ. ಇದು ಕೂಡ ರೈತರಿಗೆ ವರವಾಗಿದೆ. ಕೆಲ ದಿನಗಳ ಹಿಂದೆ ಎಪಿಎಂಸಿಗೆ ನಿತ್ಯ 7-8 ಸಾವಿರ ಕ್ವಿಂಟಲ್ ತೊಗರಿ ಆವಕವಾಗುತ್ತಿದ್ದರೆ, ಈಗ 5100 ಕ್ವಿಂಟಲ್ ಬರುತ್ತಿದೆ.
ಜಿಲ್ಲೆಯಲ್ಲಿ ತೊಗರಿ ಖರೀದಿ ಕೇಂದ್ರ ಹೆಚ್ಚಿಸಿದರೂ ನೋಂದಣಿ ಹೆಚ್ಚಾಗಿಲ್ಲ. 12500 ಆಸು ಪಾಸಿಗೆ ನಿಂತು ಹೋಗಿದೆ. ಆದರೆ, ಸಚಿವರು ಬೆಲೆ ಹೆಚ್ಚಿಸುವ ಕುರಿತು ಹೇಳಿಕೆ ನೀಡಿದ್ದು, ಬೆಲೆ ಯಾವಾಗ ಹೆಚ್ಚಾಗಲಿದೆ ಎಂದು ರೈತರು ನಿತ್ಯ ಕೇಳುತ್ತಿದ್ದಾರೆ. ಈ ಕುರಿತು ನಮಗೆ ಯಾವುದೇ ಆದೇಶ ಬಂದಿಲ್ಲ. ಈಗ ನಾವು ಹಳೇ ದರಕ್ಕೆ ಖರೀದಿಸಲು ಸಿದ್ಧರಿದ್ದರೂ ರೈತರು ಮಾತ್ರ ಕೇಂದ್ರಗಳತ್ತ ಸುಳಿಯುತ್ತಿಲ್ಲ.
ನಾಗರಾಜ್, ಮಾರ್ಕೆಂಟಿಗ್ ಫೆಡರೇಶನ್, ರಾಯಚೂರು
ಈಗಾಗಲೇ ತೊಗರಿ ಖರೀದಿ ಕೇಂದ್ರಗಳಲ್ಲಿ ಖರೀದಿ ಪ್ರಕ್ರಿಯೆ ಸಾಕಷ್ಟು ವಿಳಂಬವಾಗಿದೆ. ಈಗ 8 ಸಾವಿರ ರೂ. ಬೆಲೆ ನಿಗದಿ ಮಾಡುವ ಸುದ್ದಿ ಹರಿದಾಡುತ್ತಿದೆ. ಒಂದು ವೇಳೆ ಬೆಲೆ ಹೆಚ್ಚಿಸುವುದಾದರೆ ಸರ್ಕಾರ ಕೂಡಲೇ ನಿರ್ಧಾರ ಪ್ರಕಟಿಸಬೇಕು. ಇಲ್ಲವಾದರೆ ಮುಕ್ತ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದ್ದು, ರೈತರು ಅಲ್ಲಿಯೇ ಮಾರಾಟ ಮಾಡುತ್ತಾರೆ.
ಷಣ್ಮುಖಯ್ಯ ಸ್ವಾಮಿ, ರೈತ, ದೇವಸುಗೂರು
*ಸಿದ್ದಯ್ಯಸ್ವಾಮಿ ಕುಕುನೂರು