ಬೀದರ: ತಾಲೂಕಿನ ಬರೀದಾಬಾದ್ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಜನರ ಅಸ್ವಸ್ಥ ಘಟನೆಗೆ ಪಿಡಿಒ ಬೆನ್ನಲೇ ಬೀದರ ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳ ತಲೆದಂಡ ಆಗಿದೆ.
ಕರ್ತವ್ಯದಲ್ಲಿ ನಿರ್ಲಕ್ಷತೆ ಹಾಗೂ ಕರ್ತವ್ಯ ಲೋಪ ಆರೋಪದ ಹಿನ್ನಲೆ ತಾ.ಪಂ ಇಒ ಮಾಣಿಕರಾವ್ ಪಾಟೀಲ ಅವರನ್ನು ಅಮಾನತ್ತುಗೊಳಿಸಿ ಸೋಮವಾರ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ. ಅವರು ಆದೇಶ ಹೊರಡಿಸಿದ್ದಾರೆ.
ಔರಾದ ತಾಲೂಕಿನ ಕರಕ್ಯಾಳ್ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಗ್ರಾಮಸ್ಥರು ಅಸ್ವಸ್ಥರಾದ ಘಟನೆ ಹಿನ್ನಲೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಗಳಿಗೆ ಖುದ್ದಾಗಿ ಭೇಟಿ ನೀಡಿ, ಇಂಥ ಘಟನೆ ಮರು ಕಳಿಸದಂತೆ ಎಚ್ಚರ ವಹಿಸಲು ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಜು. 25ರಂದು ತಾಲೂಕಿನ ಚಟನಳ್ಳಿ ಗ್ರಾ.ಪಂ ಅಧೀನದ ಬರೀದಾಬಾದ್ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 21 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೂ ತಾ.ಪಂ ಇಒ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕಲುಷಿತ ನೀರು ಪ್ರಕರಣವನ್ನು ಗಂಭೀರವಾಗಿರುವ ಹಿನ್ನಲೆ ಸಮಸ್ಯೆಗಳ ಬಗ್ಗೆ ಎಚ್ಚರ ವಹಿಸಲು ಹಲವಾರು ಬಾರಿ ಸೂಚಿಸಲಾಗಿತ್ತು. ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವುದು ಗ್ರಾ.ಪಂ ಪಿಡಿಒಗಳ ಕರ್ತವ್ಯವಾಗಿದ್ದು, ಇದನ್ನು ಮೇಲ್ವಿಚಾರಣೆ ಮಾಡುವುದು ತಾ.ಪಂ ಇಒಗಳ ಜವಾಬ್ದಾರಿಯಾಗಿದೆ. ಈ ಕೆಲಸದಲ್ಲಿ ನಿರ್ಲಕ್ಷತನ ತೋರುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನಲೆ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯಡಿ ಕೂಡಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.