ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆ ದಿನದಂದು ಅರಮನೆಗೆ ಅಕ್ರಮವಾಗಿ ನುಸುಳುವವರು ಹಾಗೂ ಟಿಕೆಟ್ ಇಲ್ಲದೇ ಪ್ರವೇಶಿಸುವುದನ್ನು ತಡೆಯುವ ಸಲುವಾಗಿ ಈ ಬಾರಿ ಬಾರ್‌ಕೋಡಿಂಗ್ ಟಿಕೆಟ್ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಸಂಜೆ ಮಾಧ್ಯಮ ಸಮನ್ವಯತೆ ಕುರಿತಂತೆ ಮಾಧ್ಯಮದವರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ದಸರಾ ಸಂದರ್ಭದಲ್ಲಿ ಆಗುತ್ತಿದ್ದ ಅನಗತ್ಯ ಖರ್ಚು-ವೆಚ್ಚಕ್ಕೆ ಕಡಿವಾಣ ಹಾಕಲು ಪ್ರತ್ಯೇಕ ಲೆಕ್ಕ ಮತ್ತು ಆಡಿಟ್ ಸಮಿತಿ ರಚಿಸಲಾಗಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಗಳು ಈ ಲೆಕ್ಕಪತ್ರಗಳ ನಿರ್ವಹಣೆ ಮಾಡಲಿದ್ದಾರೆ.
ಅಲ್ಲದೇ, 2017ರ ದಸರಾ ಮಹೋತ್ಸವದ ಖರ್ಚಿನ ಕುರಿತು ಅಂದಾಜು ಪಟ್ಟಿಯನ್ನು ಅಪರ ಜಿಲ್ಲಾಧಿಕಾರಿ ನೇತೃತ್ವದ ಎಸ್ಟಿಮೇಟ್ ಕಮಿಟಿ ಮುಂದೆ ಮಂಡಿಸಿ ಅನುಮೋದನೆ ಪಡೆಯುವಂತೆ ಎಲ್ಲಾ ಉಪ ಸಮಿತಿಗಳಿಗೆ ಸೂಚಿಸಲಾಗಿದೆ. ಉಪ ಸಮಿತಿಗಳು ಖರ್ಚು ಮಾಡಿದ ಅನುದಾನಕ್ಕೆ ಜಿಪಂ ಲೆಕ್ಕಾಧಿಕಾರಿಗಳು ಲೆಕ್ಕಪತ್ರ ಬಿಡುಗಡೆ ಮಾಡಲಿದೆ. ಖರ್ಚು ವೆಚ್ಚದ ಬಗ್ಗೆ ಸಮಿತಿ ನಿಗಾ ವಹಿಸಲಿದೆ ಎಂದರು.
ಉಪ ಸಮಿತಿಗೆ ಸೂಚನೆ: ಈ ಬಾರಿಯ ದಸರಾ ಸಂದರ್ಭದಲ್ಲಿ ನಡೆಯುವ ಕಾರ್ಯಕ್ರಮಗಳ ಕುರಿತು ಪಟ್ಟಿ ನೀಡುವಂತೆ ಉಪ ಸಮಿತಿಗಳಿಗೆ ಸೂಚಿಸಲಾಗಿದೆ. ಈಗಾಗಲೇ ದಸರಾ ಕಾರ್ಯಕ್ರಮಗಳ ಬಗ್ಗೆ ಸಿದ್ಧತೆ ಮಾಡುತ್ತಿದ್ದು, ಈ ವಾರದಲ್ಲಿ ಅಧಿಕಾರೇತರ ಸಮಿತಿ ರಚಿಸಿ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಇನ್ನೊಂದು ಸಭೆ ನಡೆಸಿ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. ದಸರಾ ಮಹೋತ್ಸವಕ್ಕೆ ಸರ್ಕಾರ 15 ಕೋಟಿ ರೂ. ಅನುದಾನ ನೀಡಲು ಒಪ್ಪಿದ್ದು, ಮುಂಗಡವಾಗಿ 10 ಕೋಟಿ ರೂ. ನೀಡುವಂತೆ ಆರ್ಥಿಕ ಇಲಾಖೆಗೆ ಕೇಳಲಾಗಿದೆ. ಶೀಘ್ರ ಬಿಡುಗಡೆಯಾಗಲಿದೆ ಎಂದರು.
ಆನೆಗೆ ವಿಮೆ: ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಮೂರು ಹಂತದಲ್ಲಿ ಪ್ರೀಮಿಯಂ ಪಾವತಿಸಿ ವಿಮೆ ಮಾಡಿಸಲಾಗಿದೆ. ಅರ್ಜುನ ಸೇರಿದಂತೆ 15 ಆನೆಗಳಿಗೆ ಒಟ್ಟು 42 ಲಕ್ಷ ರೂ., ಮಾವುತರು ಮತ್ತು ಕಾವಾಡಿಗಳು ಸೇರಿ 30 ಮಂದಿಗೆ ತಲಾ ಒಂದು ಲಕ್ಷದಂತೆ 30 ಲಕ್ಷ ರೂ. ವಿಮೆ ಮಾಡಲಾಗಿದ್ದು, ನ್ಯೂ ಇಂಡಿಯಾ ಇನ್ಶೂರೆನ್Ò, ಮತ್ತು ಯುನೈಟೆಡ್ ಇಂಡಿಯಾ ವಿಮಾ ಕಂಪನಿಗಳಿಗೆ ಪ್ರೀಮಿಯಂ ಮಾಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಯೋಗೀಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ರಾಜು, ನಿರ್ಮಲಾ ಇದ್ದರು.