Advertisement

ಹೆಸರಿಗೆ ಸೀಮಿತವಾದ ಬಾಪೂಜಿ ಸೇವಾ ಕೇಂದ್ರ

03:00 PM Jul 06, 2018 | |

ಮಸ್ಕಿ: ಗ್ರಾಮೀಣ ಜನರು ತಾಲೂಕು ಕೇಂದ್ರಕ್ಕೆ ಅಲೆದಾಡುವುದನ್ನು ತಪ್ಪಿಸಲು ಸರ್ಕಾರ ಗ್ರಾಮ ಪಂಚಾಯತಿಗಳ ಮೂಲಕ ದಾಖಲೆಗಳ ವಿಲೇವಾರಿ ಸರಳೀಕರಣಕ್ಕೆ ಆರಂಭಿಸಿದ ಬಾಪೂಜಿ ಸೇವಾ ಕೇಂದ್ರಗಳು ಹೆಸರಿಗೆ ಮಾತ್ರ ಎಂಬಂತಾಗಿದೆ. ಈ ಕೇಂದ್ರಗಳಲ್ಲಿ ಸಾರ್ವಜನಿಕರು, ರೈತರು, ವಿದ್ಯಾರ್ಥಿಗಳು ಸೇರಿ 100 ಸೇವೆಗಳನ್ನು, ದಾಖಲೆಗಳನ್ನು ಪಡೆಯಬಹುದಾಗಿತ್ತು. ಆದರೆ ಒಂದು ದಾಖಲೆ ಸಿಗುವುದೂ ಕೂಡಾ ಕಷ್ಟವಾಗಿದೆ.

Advertisement

ಮಸ್ಕಿ ತಾಲೂಕಿನ ಗುಡದೂರು, ಸಂತೆಕಲ್ಲೂರು, ಮಾರಲದಿನ್ನಿ ಗ್ರಾಮ ಪಂಚಾಯತಿಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳು ಪ್ರಾರಂಭವಾಗಿ ವರ್ಷಗಳೇ ಕಳೆದರೂ ಸೇವೆ ಮಾತ್ರ ಸಿಗುತ್ತಿಲ್ಲ. ಗುಡದೂರು ಬಾಪೂಜಿ ಸೇವಾ ಕೇಂದ್ರದಲ್ಲಿ ಪಹಣಿ ಮಾತ್ರ ಕೊಡಲಾಗುತ್ತಿದೆ. ಇನ್ನುಳಿದ ಸೌಲಭ್ಯಗಳು ದೊರೆಯುತ್ತಿಲ್ಲ. ಅಲ್ಲದೇ ಈ ಕೇಂದ್ರದಲ್ಲಿ ಪಡಿತರ ಚೀಟಿಗೆ ಆಧಾರ್‌ ಜೋಡಣೆ ಮಾಡಲು ಜನತೆ ಪರದಾಡುವಂತಾಗಿದೆ. ಇಲ್ಲಿನ ಪಂಚಾಯತಿಯಲ್ಲಿ ಬ್ರಾಡ್‌ ಬ್ಯಾಂಡ್‌ ವ್ಯವಸ್ಥೆ ಇದ್ದು, ಗಣಕಯಂತ್ರ ಸಾಮಾಗ್ರಿಗಳು, ಕಂಪ್ಯೂಟರ್‌ ಆಪರೇಟರ್‌ ಇದ್ದಾರೆ. ಪಡಿತರ ಚೀಟಿಗೆ ಆಧಾರ ಜೋಡಣೆ ಮಾಡಿ ಎಂದು ಸೇವಾ ಕೇಂದ್ರಕ್ಕೆ ಹೋದರೆ ನೆಟ್‌ವರ್ಕ್‌ ಇಲ್ಲ, ಕೆಲಸ ಮಾಡಲು ಸಿಬ್ಬಂದಿ ಇಲ್ಲ ಮಸ್ಕಿ ಹಾಗೂ ಲಿಂಗಸುಗೂರು ಪಟ್ಟಣಗಳಿಗೆ ಹೋಗಿ ಹೇಳಲಾಗುತ್ತಿದೆ.

ಆಧಾರ್‌ ಲಿಂಕ್‌ ಪಟ್ಟಿಯಲ್ಲಿ ನಮ್ಮ ಹೆಸರು ಇಲ್ಲದ್ದರಿಂದ ನ್ಯಾಯಬೆಲೆ ಅಂಗಡಿ ಮಾಲಿಕರು ಅಕ್ಕಿ ವಿತರಣೆ ಮಾಡುತ್ತಿಲ್ಲ.
ಇದರಿಂದ ಒಂದು ದಿನದ ಕೂಲಿ ಕೆಲಸ ಬಿಟ್ಟು ಗ್ರಾಮಸ್ಥರು ಪಟ್ಟಣ ಪ್ರದೇಶದ ಸೈಬರ್‌ ಸೆಂಟರ್‌ಗೆ ಅಲೆದಾಡುವಂತಾಗಿದೆ. ಹೀಗಾಗಿ ಕೆಲ ಜನರ ಪಡಿತರ ಧಾನ್ಯಗಳು ರದ್ದಾಗಿರುವ ಉದಾಹರಣೆಳಿವೆ. ಸದ್ಯ ಪಡಿತರ ಟೀಚಿಗಳಿಗೆ ಆಧಾರ್‌ ಜೋಡಣೆ ತಾತ್ಕಾಲಿಕ ಸ್ಥಗಿತವಾಗಿದೆ. ಇನ್ನು ಒಂದು ತಿಂಗಳೊಳಗೆ ಮತ್ತೆ ಆಧಾರ್‌ ಲಿಂಕ್‌ ಮಾಡುವ ಪ್ರಕ್ರಿಯೆಗಳು ಪ್ರಾರಂಭವಾಗುವ ಲಕ್ಷಣಗಳಿದ್ದು, ಅಷ್ಟರಲ್ಲಿ ಬಾಪೂಜಿ ಸೇವಾ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಯೋಜನೆ ಜಾರಿ: ಗ್ರಾಮ ಪಂಚಾಯತಿಗಳಲ್ಲಿ ತೆರೆದಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು
ಪಂಚಾಯತ್‌ ರಾಜ್‌ ಇಲಾಖೆಯ 43 ಸೇವೆಗಳು, ಕಂದಾಯ ಇಲಾಖೆಯ 40 ಸೇವೆಗಳು ಇತರೆ 17 ಸೇವೆಗಳು ಸೇರಿದಂತೆ ಒಟ್ಟು 100 ಸೇವೆಗಳು ಗ್ರಾಮೀಣ ಜನರಿಗೆ ಲಭ್ಯವಾಗಲಿ ಎಂದು ಸರ್ಕಾರ ಇವುಗಳನ್ನು ತೆರೆದಿತ್ತು.

ನೆಟ್‌ವರ್ಕ್‌ ಸಮಸ್ಯೆ: ಮಸ್ಕಿ ತಾಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ನೆಟ್‌ವರ್ಕ್‌ ಸಮಸ್ಯೆ, ಸಿಬ್ಬಂದಿ ಸಮಸ್ಯೆಯಿಂದ ಬಾಪೂಜಿ ಸೇವಾಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬಂರುತ್ತಿವೆ.

Advertisement

ತರಬೇತಿ: ಬಾಪೂಜಿ ಸೇವಾ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವುದಕ್ಕಾಗಿ ಪ್ರಸ್ತುತ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ. ಆದರೆ ಗ್ರಾಮ ಪಂಚಾಯತಿಯಲ್ಲಿ ಒಬ್ಬರೇ ಕಂಪ್ಯೂಟರ್‌ ಆಪರೇಟರ್‌ ಇರುತ್ತಾರೆ. ಎಲ್ಲ ಕೆಲಸಗಳನ್ನು ಇವರೊಬ್ಬರೇ ನಿರ್ವಹಿಸುವುದು ಕಷ್ಟಕರವಾಗುತ್ತಿದೆ.

ಕಂಪ್ಯೂಟರ್‌ ಇಲ್ಲ: ಬಾಪೂಜಿ ಸೇವಾ ಕೇಂದ್ರಗಳಲ್ಲಿ ಈವರೆಗೆ ಸರ್ಕಾರ ಅಗತ್ಯ ಸಂಖ್ಯೆಯ ಕಂಪ್ಯೂಟರ್‌, ಟೇಬಲ್‌, ಸೇರಿದಂತೆ ಬೇಕಾಗುವ ಇನ್ನಿತರ ಸಲಕರಣೆಗಳನ್ನು ಪೂರೈಸಿಲ್ಲ ಎಂದು ತಿಳಿದು ಬಂದಿದೆ. ಇದರಿಂದ ಸಿಬ್ಬಂದಿ ತರಬೇತಿ ಪಡೆದು ಬಂದರೂ ಸೇವೆಗಳು ಪ್ರಾರಂಭವಾಗಿಲ್ಲ. ಈಗಲಾದರೂ ಸರ್ಕಾರ, ಜಿಲ್ಲಾಡಳಿತ ಎಚ್ಚೆತ್ತು ಬಾಪೂಜಿ ಸೇವಾ ಕೇಂದ್ರಗಳಿಗೆ ಬೇಕಾಗುವ ಸಿಬ್ಬಂದಿ, ಕಂಪ್ಯೂಟರ್‌ ಸೇರಿ ಅಗತ್ಯ ಸಲಕರಣೆಗಳನ್ನು ಪೂರೈಸಿ ಗ್ರಾಮೀಣ
ಭಾಗದ ಜನರು ಅಲೆದಾಡುವುದು ತಪ್ಪಿಸಬೇಕೆನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next