Advertisement

ಬಪ್ಪನಾಡು ದೇವಸ್ಥಾನ: ಮಹಾರಥೋತ್ಸವ ಸಂಪನ್ನ 

10:20 AM Apr 08, 2018 | |

ಬಪ್ಪನಾಡು: ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೆ ಅಂಗವಾಗಿ ಮಹಾ ರಥೋತ್ಸವ ಶುಕ್ರವಾರ ತಡರಾತ್ರಿ ಸಂಪನ್ನಗೊಂಡಿತು.

Advertisement

ಸಂಜೆ ಓಕುಳಿಯೊಂದಿಗೆ ಬಲಿ ಉತ್ಸವ ಆರಂಭಗೊಂಡು ಪೇಟೆ ಸವಾರಿಯ ಮೂಲಕ ಮೂಲ್ಕಿ ನಗರದ ಪ್ರಮುಖ ರಸ್ತೆಯಲ್ಲಿ ವಿವಿಧ ಬಿರುದಾವಳಿಗಳೊಂದಿಗೆ ಪಲ್ಲಕ್ಕಿಯಲ್ಲಿ ಶ್ರೀ ದೇವಿಯ ಮೆರವಣಿಗೆ ನಡೆಯಿತು. ರಾತ್ರಿ ಸುಮಾರು 11 ಗಂಟೆಗೆ ದೇಗುಲದ ಎದುರಿನ ಬಾಕಿಮಾರು ಗದ್ದೆಗೆ ದೇವರ ಆಗಮನವಾಯಿತು. ಬಳಿಕ ರಥೋತ್ಸವದ ವಿಧಿವಿಧಾನಗಳು ನಡೆದು ಬಲಿ ಉತ್ಸವ ನಡೆಯಿತು. ರಥಾರೋಹಣದ ಬಳಿಕ ವಿಶೇಷ ಪೂಜೆ, ತಪ್ಪಂಗಾಯಿ ಎಸೆತದಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿದರು.

ದೇವಸ್ಥಾನಗಳ ರಥ ಬೀದಿಯಲ್ಲಿ ಅತ್ಯಂತ ದೊಡ್ಡ ರಥವನ್ನು ಬಪ್ಪನಾಡು ಸುತ್ತಲಿನ ಪ್ರದೇಶದ ಸಾವಿರಾರು ಜನರು ಭಕ್ತಿಯಿಂದ ಎಳೆದು ತಮ್ಮ ಸೇವೆ ಸಲ್ಲಿಸಿದರು.

ರಥೋತ್ಸವದ ಮೊದಲು ಬಪ್ಪನಾಡು ದೇವಿಯ ಸಹೋದರಿಯರಾದ ಸಸಿಹಿತ್ಲುವಿನ ಶ್ರೀ ಭಗವತಿಯರ ಭೇಟಿ ಅತ್ಯಂತ ಸುಂದರ ಸನ್ನಿವೇಶವಾಗಿತ್ತು. ಅನಂತರ ರಥ ಏಳೆಯುವಾಗ ಪೂರ್ತಿ ಸುತ್ತಿಗೆ ಭಗವತಿಯರು ತಮ್ಮ ಪರಿವಾರ ಶಕ್ತಿಗಳೊಂದಿಗೆ ಪ್ರದಕ್ಷಿಣೆ ಹಾಕುವುದು,ರಥದಿಂದ ಇಳಿದ ದೇವರು ಶಾಂಭವಿ ನದಿದಾಟಿ ಚಂದ್ರಶ್ಯಾನುಭಾಗರ ಕುದ್ರುವಿನಲ್ಲಿ ಶ್ರೀ ದೇವಿಗೆ ಜಳಕ ಉತ್ಸವ ಮತ್ತು ಪೂಜೆ ನಡೆಯತು. 

ಮತ್ತೆ ನದಿ ದಾಟಿ ಬಂದು ಬಪ್ಪನಾಡು ಕ್ಷೇತ್ರ ದತ್ತ ಶ್ರೀದೇವಿ ವಿಮಾನ ರಥರೂಢಳಾಗಿ ಆಗಮಿಸುವಾಗ ಮಧ್ಯೆ ತೂಟೆದರ (ಬೆಂಕಿಯಾಟ) ನಡೆಯಿತು.

Advertisement

ಬೆಳಗ್ಗೆ 6 ಗಂಟೆ ಸುಮಾರಿಗೆ ದೇವಸ್ಥಾನ ತಲುಪಿದ ದೇವರಿಗೆ ಜಾತ್ರಾ ಉತ್ಸವದಲ್ಲಿ ಅತ್ಯಂತ ಪ್ರಸಿದ್ಧವಾದ ಜಳಕದ ಬಲಿ ಉತ್ಸವ, ಚಂದ್ರ ಮಂಡಲ ರಥೋತ್ಸವ ನಡೆದು ಮತ್ತೆ ಶ್ರೀ ಭಗವತಿಯರ ಭೇಟಿಯೊಂದಿಗೆ ಧ್ವಜಾವರೋಹಣಗೊಳ್ಳುವ ಮೂಲಕ ವಾರ್ಷಿಕ ಮಹೋತ್ಸವ ಸಂಪನ್ನ ಗೊಂಡಿತು. ಶನಿವಾರ ಬೆಳಗ್ಗೆಯಿಂದ ಸಾವಿರಾರು ಜನರು ಕ್ಷೇತ್ರಕ್ಕೆ ಆಗಮಿಸಿ ಹಣ್ಣುಕಾಯಿ ಸೇವೆಯನ್ನು ಸಲ್ಲಿಸಿದರು. ಎ. 8ರಂದು ಕ್ಷೇತ್ರದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದು ಅನಂತರ ಫಲಮಂತ್ರಾಕ್ಷತೆಯೊಂದಿಗೆ ಉತ್ಸವದ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳುವುದು. 

Advertisement

Udayavani is now on Telegram. Click here to join our channel and stay updated with the latest news.

Next