Advertisement
ನೇತ್ರಾವತಿ ನದಿಗೆ ಜಕ್ರಿಬೆಟ್ಟುನಲ್ಲಿ ಜಾಕ್‌ವೆಲ್ ನಿರ್ಮಿಸಿ ನೀರು ತೆಗೆದು ಅದನ್ನು ಜಕ್ರಿಬೆಟ್ಟು ಎತ್ತರದ ಪ್ರದೇಶದಲ್ಲಿರುವ ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಿಸಿ ಪುರಸಭೆ ವ್ಯಾಪ್ತಿಗೆ ಪೂರೈಕೆ ಮಾಡಲಾಗುತ್ತದೆ. ಆದರೆ ಶುದ್ಧೀಕರಣ ಘಟಕದ ಶುದ್ಧತೆಯ ಕುರಿತೇ ಸಾಕಷ್ಟು ಆರೋಪಗಳಿವೆ. ಜಕ್ರಿಬೆಟ್ಟುವಿನಲ್ಲಿ ಹೊಸ ಘಟಕ ಆರಂಭಗೊಳ್ಳುವ ಮೊದಲೇ ಹಳೆಯ ನೀರಿನ ಟ್ಯಾಂಕ್‌ಗಳಿದ್ದು, ಪ್ರಸ್ತುತ ಅದು ಕೂಡ ಕಾರ್ಯಾಚರಣೆಯ ಹಂತದಲ್ಲಿದೆ. ಆದರೆ ಹಳೆಯ ಟ್ಯಾಂಕ್‌ಗಳ ನಿರ್ವಹಣೆಯನ್ನೇ ಪುರಸಭೆ ಮರೆತಿದೆ ಎಂದು ಸ್ವತಃ ಸದಸ್ಯರೇ ಆರೋಪಿಸುತ್ತಾರೆ.ನೀರಿನ ಟ್ಯಾಂಕ್‌ಗಳನ್ನು ತೊಳೆಯದೆ ಟ್ಯಾಂಕ್‌ನ ಒಳಗೂ-ಹೊರಗೂ ಪಾಚಿ ಬೆಳೆದಿದ್ದು, ನಿರ್ವಹಣೆ ಇಲ್ಲದ ಪರಿಣಾಮ ಒಳ ಭಾಗದಲ್ಲಿ ಕಬ್ಬಿಣದ ರಾಡ್‌ಗಳು ಕಾಣುತ್ತಿದೆ. ಜತೆಗೆ ನೀರಿನ ಟ್ಯಾಂಕ್‌ನ ಸುತ್ತಲೂ ಪೊದೆಗಳು ಬಿಡಿ, ಮರಗಳೇ ಬೆಳೆದರೂ ಅದರ ತೆರವಿಗೆ ಕ್ರಮವಹಿಸಿಲ್ಲ ಎಂದು ಆರೋಪಗಳು ಕೇಳಿಬಂದಿದೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಜಾಕ್‌ವೆಲ್, ಟ್ರೀಟ್‌ಮೆಂಟ್ ಪ್ಲಾಂಟ್ ಹೀಗೆ ಎಲ್ಲವೂ ಹೊಸದಾಗಿ ಅನುಷ್ಠಾನಗೊಂಡಿದ್ದರೂ, ಹಳೆಯ ಟ್ಯಾಂಕ್‌ಗಳನ್ನು ಯಾಕೆ ಉಪಯೋಗಿಸಲಾಗುತ್ತಿದೆ ಎಂಬ ಪ್ರಶ್ನೆ ಪುರಸಭಾವಾಸಿಗಳನ್ನು ಕಾಡುತ್ತಿದೆ. ಒಂದು ವೇಳೆ ಉಪಯೋಗಿಸುವುದು ಅನಿವಾರ್ಯವಾದರೂ, ಅದರ ನಿರ್ವಹಣೆ ಏಕಿಲ್ಲ ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ. ಹಳೆಯ ಟ್ಯಾಂಕ್‌ಗಳು ಸುಮಾರು 9 ಲಕ್ಷ ಲೀ.ನೀರಿನ ಸಾಮರ್ಥ್ಯ ಹೊಂದಿದ್ದು, ಸದಸ್ಯರ ಮಾಹಿತಿ ಪ್ರಕಾರ ಬಂಟ್ವಾಳ ಪೇಟೆಯ ಭಾಗಕ್ಕೆ ಇದೇ ಟ್ಯಾಂಕ್‌ನಿಂದ ನೀರು ಪೂರೈಕೆಯಾಗುತ್ತಿದೆ. ಒಂದು ವೇಳೆ ಸುತ್ತಲೇ ಮರ ಬೆಳೆದು ಅದರ ಬೇರುಗಳಿಂದ ಟ್ಯಾಂಕ್‌ಗೆ ಅಪಾಯ ಉಂಟಾದರೆ ನೂರಾರು ಮನೆಗಳ ನೀರು ಪೂರೈಕೆಗೆ ತೊಂದರೆ ಉಂಟಾಗಲಿದೆ. ಜತೆಗೆ ನಿರ್ವಹಣೆ ಇಲ್ಲದೆ ಕುಸಿದರೂ ದೊಡ್ಡ ಅನಾಹುತವಾಗಲಿದೆ.
Related Articles
ಸ್ಥಳೀಯ ಸಂಸ್ಥೆಗಳ ಮೂಲಕ ಪೂರೈಕೆಯಾಗುವ ಕುಡಿಯುವ ನೀರು ಶುದ್ಧೀಕರಣಗೊಂಡು ಪೂರೈಕೆಯಾಗುತ್ತಿದ್ದು, ನೀರನ್ನು ತುಂಬಿಸುವ ಟ್ಯಾಂಕ್‌ಗಳನ್ನು ನಿಗದಿತ ಸಮಯದಲ್ಲಿ ತೊಳೆಯಬೇಕಾಗುತ್ತದೆ. ಆದರೆ ಪುರಸಭೆ ಆ ಕಾರ್ಯವನ್ನೇ ಮಾಡುತ್ತಿಲ್ಲ ಎನ್ನಲಾಗುತ್ತಿದೆ. ಪುರಸಭೆಯ ಹಳೆಯ ಟ್ಯಾಂಕ್‌ಗಳನ್ನು ತೊಳೆಯದೆ 7 ವರ್ಷಗಳೇ ಕಳೆದಿದ್ದು, ಅದರ ನೀರು ಕುಡಿದರೆ ಜನರ ಆರೋಗ್ಯದ ಸ್ಥಿತಿ ಹೇಗಾಗಬಹುದು ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತದೆ.
Advertisement
ಸುಣ್ಣ ಬಳಿಯಲು ಕ್ರಮ ಟ್ಯಾಂಕ್‌ನ ಶುಚಿತ್ವದ ಕುರಿತು ಕ್ರಮವಹಿಸಿದ್ದು, ಪಾಚಿ ಬೆಳೆದಿರುವುದಕ್ಕೆ ಟ್ಯಾಂಕನ್ನು ಡ್ರೈ ಮಾಡಿಕೊಂಡು ಸುಣ್ಣ ಬಳಿಯುವ ಕಾರ್ಯವನ್ನು ಮಾಡಲಿದ್ದೇವೆ. ಜತೆಗೆ ಟ್ಯಾಂಕ್‌ನ ಹೊರ ಭಾಗದಲ್ಲಿ ಶುಚಿಗೊಳಿಸುವ ಕಾರ್ಯ ನಡೆದಿದ್ದು, ಒಳ ಭಾಗದ ಶುಚಿತ್ವವನ್ನು ಶೀಘ್ರ ಮಾಡಲಿದ್ದೇವೆ.
-ಎಂ.ಆರ್. ಸ್ವಾಮಿ, ಮುಖ್ಯಾಧಿಕಾರಿಗಳು, ಬಂಟ್ವಾಳ ಪುರಸಭೆ