ಬಂಟ್ವಾಳ: ತಾಲೂಕಿನ ಕೆದಿಲ ಹಾಗೂ ನೆಟ್ಲಮುಟ್ನೂರು ಗ್ರಾಮವನ್ನು ಸಂಪರ್ಕಿಸುವ ಕುಕ್ಕರೆಬೆಟ್ಟು- ಪಾಟ್ರಕೋಡಿ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಇಲ್ಲಿ ಸಂಚರಿಸುವ ವಾಹನಗಳು ಎದುಬಿದ್ದು ಸಾಗಬೇಕಾದ ಪರಿಸ್ಥಿತಿ ಉಂಟಾಗಿದೆ. ರಸ್ತೆಯ ದುರಸ್ತಿಗಾಗಿ ಶಿಲಾನ್ಯಾಸ ನಡೆದು ತಿಂಗಳುಗಳೇ ಆದರೂ ಇನ್ನೂ ಕೂಡ ಕಾಮಗಾರಿ ನಡೆದಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಮಳೆಯ ಕಾರಣದಿಂದ ರಸ್ತೆಯಲ್ಲಿ ಈಗಾಗಲೇ ಹತ್ತಾರು ವಾಹನಗಳು ಹೂತು ಹೋಗಿರುವ ಘಟನೆಗಳೂ ನಡೆದಿವೆ. ಮಂಗಳೂರು-ಬೆಂಗಳೂರು ಹೆದ್ದಾರಿ ಹಾಗೂ ಮಾಣಿ-ಮೈಸೂರು ಹೆದ್ದಾರಿಯನ್ನು ಸಂಪರ್ಕಿಸುವ ಈ ರಸ್ತೆಯು ಅತೀ ಪ್ರಮುಖ ರಸ್ತೆ ಎನಿಸಿಕೊಂಡಿದೆ.
ಈ ರಸ್ತೆಯನ್ನೇ ಬಳಸಿ ದಿನನಿತ್ಯ 5-6 ಶಾಲಾ ಬಸ್‌ಗಳು, ಹಲವಾರು ಘನ-ಲಘು ವಾಹನಗಳು, ಆಟೋ ರಿಕ್ಷಾಗಳು ಸಾಗುತ್ತಿದ್ದು, ರಸ್ತೆಯ ಅವ್ಯವಸ್ಥೆಯನ್ನು ಕಂಡು ಹಿಡಿಶಾಪ ಹಾಕುವಂತಾಗಿದೆ. ಪಾಟ್ರಕೋಡಿ, ಕರಿಮಜಲು, ಕುದ್ದುಂಬ್ಲಾಡಿ, ಕಲ್ಲರ್ಪೆ ಮೊದಲಾದ ಭಾಗಗಳ ಸಾವಿರಾರು ನಿವಾಸಿಗಳಿಗೆ ಇದೇ ಪ್ರಮುಖ ಸಂಪರ್ಕದ ಕೊಂಡಿ ಎನಿಸಿಕೊಂಡಿದೆ.
ರಸ್ತೆಗೆ ಈಗಾಗಲೇ 4.60 ಕೋ.ರೂ. ವಿಶೇಷ ಅನುದಾನ ಬಿಡುಗಡೆಗೊಂಡಿದೆ ಎಂದು ಜನಪ್ರತಿನಿಧಿಗಳು ಸ್ಥಳೀಯರಿಗೆ ಭರವಸೆ ನೀಡಿದ್ದಾರೆ. ಮಳೆಗಾಲದಲ್ಲಿ ರಸ್ತೆ ದುರಸ್ತಿ ಕಷ್ಟವಾದರೆ ಕನಿಷ್ಠ ತಾತ್ಕಾಲಿಕ ಕಾಮಗಾರಿಯ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕಿದೆ. ಇದನ್ನು ಹೀಗೇ ಬಿಟ್ಟರೆ ಮುಂದೆ ಸಂಪ ರ್ಕವೇ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನವುದು ಸ್ಥಳೀಯರು ಅಭಿಪ್ರಾಯ.