ಬಂಟ್ವಾಳ: ತೆಂಕಕಜೆಕಾರು ಗ್ರಾಮದ ಮಿತ್ತಳಿಕೆಯಲ್ಲಿ ಅಪ್ರಾಪ್ತ ಬಾಲಕನ ವಿವಾಹದ ಹಿನ್ನೆಲೆಯಲ್ಲಿ ಬಂಟ್ವಾಳ ಸಿಡಿಪಿಒ ಕಚೇರಿ ಅಧಿಕಾರಿಗಳು ಹಾಗೂ ಪುಂಜಾಲಕಟ್ಟೆ ಪೊಲೀಸರು ಬಾಲಕನ ಮನೆಗೆ ದಾಳಿ ನಡೆಸಿ ಬಾಲ್ಯ ವಿವಾಹವನ್ನು ತಡೆದ ಘಟನೆ ನಡೆದಿದ್ದು, ಜನನ ಪ್ರಮಾಣ ಪತ್ರವನ್ನೇ ನಕಲಿಯಾಗಿಸಿ ಮಾ. ೫ರಂದು ವಿವಾಹ ನಡೆಸಲು ಸಿದ್ಧರಾಗಿದ್ದ ಎಂಬ ಮಾಹಿತಿ ತಿಳಿದು ಬಂದಿದೆ.
ವಿಶೇಷವೆಂದರೆ ಕಳೆದ ವರ್ಷವೂ ಬಾಲಕನಿಗೆ ಇದೇ ರೀತಿ ಬಾಲ್ಯವಿವಾಹಕ್ಕೆ ಸಿದ್ಧತೆ ನಡೆಸಿ ಬಳಿಕ ಅಧಿಕಾರಿಗಳು ತೆರಳಿ ಅದನ್ನು ತಡೆದಿದ್ದರು. ವಿವಾಹ ಸಿದ್ಧತೆಯ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ಬಂಟ್ವಾಳ ಸಿಡಿಪಿಒ ಗಾಯತ್ರಿ ಕಂಬಳಿ, ಸಹಾಯಕ ಸಿಡಿಪಿಒ ಶೀಲಾವತಿ ಅವರು ಬಂಟ್ವಾಳ ತಹಶೀಲ್ದಾರ್ ಅವರ ನೋಟಿಸ್ ಪಡೆದು ಪುಂಜಾಲಕಟ್ಟೆ ಸಬ್‌ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ ಹಾಗೂ ಸಿಬಂದಿಯ ನೆರವಿನೊಂದಿಗೆ ಬಾಲಕನ ಮನೆಗೆ ತೆರಳಿದ್ದಾರೆ.
ಈ ವೇಳೆ ಮನೆಯವರು ಅಧಿಕಾರಿಗಳ ವಿರುದ್ಧ ಹರಿಹಾಯ್ದು, ವಿವಾಹವೇ ಅಲ್ಲ, ಹರಕೆ ಕಾರ್ಯಕ್ರಮ ಎಂದು ನಿರಾಕರೆಸಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸಿದ ಬಳಿಕ ವಿವಾಹವೆಂದು ಒಪ್ಪಿ ನಕಲಿ ಜನನ ಪ್ರಮಾಣ ಪತ್ರದಲ್ಲಿ ೨೦೦೩ರ ಬದಲು ೨೦೦೧ ಎಂದು ಜನನ ದಿನಾಂಕವನ್ನು ತೋರಿಸಿದ್ದಾರೆ.
ಆದರೆ ಅಧಿಕಾರಿಗಳು ತಾಲೂಕು ಕಚೇರಿಯಲ್ಲಿ ವಿಚಾರಿಸಿದಾಗ ನಕಲಿ ಎಂದು ತಿಳಿದುಬಂದಿದ್ದು, ಮನೆಯವರಿಂದ ಮುಚ್ಚಳಿಕೆ ಬರೆಸಿ ಬಾಲ್ಯವಿವಾಹವನ್ನು ತಡೆದಿದ್ದಾರೆ.
ಇದನ್ನೂ ಓದಿ: ಕೋರ್ಟ್ ಮ್ಯಾರೇಜ್ ಬಳಿಕ ಸಾಂಪ್ರದಾಯಿಕ ವಿವಾಹದ ತಯಾರಿಯಲ್ಲಿ ನಿರತರಾದ ಸ್ವರಾ ಭಾಸ್ಕರ್