ಬಂಟ್ವಾಳ: ಇಡೀ ಜಿಲ್ಲೆಯನ್ನೇ ಮುಳುಗಿಸಿದ್ದ 1923ರ ಮಾರಿ ಬೊಳ್ಳ(ಭೀಕರ ಪ್ರವಾಹ)ಕ್ಕೆ ಕಳೆದ ವರ್ಷ ನೂರು ವರ್ಷ ತುಂಬಿದ ಬೆನ್ನಲ್ಲೇ, ಈಗ 1974ರಲ್ಲಿ ಕಾಣಿಸಿಕೊಂಡ ಮತ್ತೊಂದು ಭೀಕರ ಪ್ರವಾಹಕ್ಕೆ ಈ ವರ್ಷ 50 ತುಂಬುತ್ತಿದೆ. ಅಂದು ಜು. 26ರಂದು ಶುಕ್ರವಾರ ಪ್ರವಾಹ ಕಾಣಿಸಿಕೊಂಡಿದ್ದು, 50ನೇ ವರ್ಷದ ಬಳಿಕ ಬಂದ ಜು. 26 ಕೂಡ ಶುಕ್ರವಾರದ ದಿನವೇ ಬರುತ್ತಿರುವುದು ವಿಶೇಷ.
1974ರ ಪ್ರವಾಹವು 1923ರ ಪ್ರವಾಹದಷ್ಟು ಭೀಕರವಾಗಿರಲಿಲ್ಲ. 1923ರ ಪ್ರವಾಹದ ಸಂದರ್ಭದ ಪೋಟೊಗಳು ಇಲ್ಲವಾಗಿದ್ದು, ಆದರೆ ಜನತೆ ಅದನ್ನು ಮರೆಯಬಾರದು ಎನ್ನುವ ಕಾರಣಕ್ಕೆ ಬಂಟ್ವಾಳ-ಪಾಣೆಮಂಗಳೂರು ಭಾಗದ ಕಟ್ಟಡಗಳಲ್ಲಿ ಮುಳುಗಿರುವ ಜಾಗಕ್ಕೆ ಹಾಕಿರುವ ಗುರುತುಗಳನ್ನು ಈಗಲೂ ಕಾಣಬಹುದಾಗಿದೆ.
ಅದೇ ಜಾಗಗಳಲ್ಲಿ 1974ರ ಪ್ರವಾಹದ ಗುರುತುಗಳು ಕೂಡ ಕಂಡುಬರುತ್ತಿವೆ. ಆದರೆ 1974ರ ಪ್ರವಾಹವು ಕೆಮರಾಗಳಲ್ಲಿ ಸೆರೆಯಾಗಿದ್ದು, ಪ್ರಸ್ತುತ ಅಂದಿನ ಪ್ರವಾಹದ ಭೀಕರತೆಯ ಕಪ್ಪು ಬಿಳುಪಿನ ಪೋಟೊಗಳು ಸಾಮಾಜಿಕ ಜಾಲತಾಣಗಳನ್ನು ಹರಿದಾಡುತ್ತಿದೆ. ಅಂದಿನ ಪ್ರವಾಹದ ಪರಿಣಾಮ ಉಪ್ಪಿನಂಗಡಿ, ಬಂಟ್ವಾಳ, ಪಾಣೆಮಂಗಳೂರು ಪಟ್ಟಣಗಳು ಸಹಿತ ಹಲವು ಪ್ರದೇಶಗಳು ಸಾಕಷ್ಟು ನಲುಗಿ ಹೋಗಿದ್ದು, ಮುಳಿಹಲ್ಲಿನ ಇಡೀ ಮನೆಗಳೇ ನದಿಯಲ್ಲಿ ಕೊಚ್ಚಿ ಹೋಗುವ ದೃಶ್ಯಗಳನ್ನು ಕಾಣಬಹುದಾಗಿತ್ತು.
1923ರ ಪ್ರವಾಹ ಕಂಡವರು ತೀರಾ ವಿರಳವಾಗಿದ್ದು, ಆದರೆ 1974ರ ಪ್ರವಾಹದ ನೆನಪುಗಳು 50 ದಾಟಿರುವವರ ಸ್ಮೃತಿಪಟಲದಲ್ಲಿ ಇನ್ನೂ ಹಾಗೇ ಇದೆ. ಬಂಟ್ವಾಳದ ದಿ| ಡಾ| ನರೇಂದ್ರ ಆಚಾರ್ಯ ಅವರು ಅಂದು ತೆಗೆದ ಚಿತ್ರಗಳನ್ನು ಈಗಲೂ ಸಂಗ್ರಹಿಡಲಾಗಿದೆ. ಬಂಟ್ವಾಳ ಪೇಟೆ ಮುಳುಗಿರುವ ದೃಶ್ಯಗಳು ಅದರಲ್ಲಿ ಕಾಣಬಹುದು. 1974ರ ಬಳಿಕ ಅಂತಹ ಪ್ರವಾಹ ಬಂದಿಲ್ಲ ಎಂದು ತಿಳಿದವರು ಅಭಿಪ್ರಾಯಿಸುತ್ತಾರೆ.