ಬಂಟ್ವಾಳ: ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಬಂಟ್ವಾಳ ಸಿದ್ಧಕಟ್ಟೆ ಸಮೀಪದ ಹೊಕ್ಕಾಡಿಗೋಳಿಯಲ್ಲಿ ಶನಿವಾರ ಅಕ್ಕಪಕ್ಕದಲ್ಲೇ ಎರಡು ಕಂಬಳಗಳು ನಡೆದವು. ಒಂದೇ ಕಂಬಳ ನಡೆಯಲು ಹಲವು ಸುತ್ತಿನ ಮಾತುಕತೆಗಳು, ಕಾನೂನು ಹೋರಾಟ ನಡೆದರೂ ವಿಫಲವಾಗಿ ಎರಡೂ ಕಂಬಳಗಳು ಯಶಸ್ವಿಯಾಗಿ ನಡೆದಿವೆ.
ಹಿಂದೆ ಒಂದು ಕಂಬಳ ನಡೆಯುತ್ತಿದ್ದ ಹೊಕ್ಕಾಡಿಗೋಳಿಯಲ್ಲೇ ಶ್ರೀ ಮಹಿಷಮರ್ದಿನಿ ಕಂಬಳ ಸಮಿತಿಯ ವತಿಯಿಂದ ರಶ್ಮಿತ್ ಶೆಟ್ಟಿ ಕೈತ್ರೋಡಿ ಅಧ್ಯಕ್ಷತೆಯಲ್ಲಿ ಒಂದು ಕಂಬಳ ನಡೆದರೆ,ಮತ್ತೊಂದು ಕಂಬಳ ಅಲ್ಲೇ ಪಕ್ಕದ ಕೊಡಂಗೆಯಲ್ಲಿ ಜಿಲ್ಲಾ ಕಂಬಳ ಸಮಿತಿಯ ಬೆಂಬಲದೊಂದಿಗೆ ಶ್ರೀ ವೀರ-ವಿಕ್ರಮ ಕಂಬಳ ಸಮಿತಿ ವತಿಯಿಂದ ಸಂದೀಪ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ವಿಶೇಷವೆಂದರೆ ಎರಡೂ ಕಂಬಳಗಳ ಜೋಡುಕರೆಗಳಿಗೆ ವೀರ-ವಿಕ್ರಮ ಎಂದೇ ಹೆಸರಿಡಲಾಗಿತ್ತು.
ಹೊಕ್ಕಾಡಿಗೋಳಿ ಕಂಬಳಕ್ಕೆ ಸಂಬಂಧಿಸಿ ಜಾಗದ ಗೊಂದಲದ ಕಾರಣದಿಂದ ಹಿಂದೆ ಜ. 13ರಂದು ನಿಗದಿಯಾಗಿದ್ದ ಕಂಬಳವು ಬಳಿಕ ಮುಂದೂಡಲ್ಪಟ್ಟಿತ್ತು. ಆದರೆ ಮುಂದೆ ಶ್ರೀ ಮಹಿಷಮರ್ದಿನಿ ಕಂಬಳ ಸಮಿತಿಯು ಹಿಂದಿನ ಸ್ಥಳದಲ್ಲೇ ಕಂಬಳ ನಡೆಸಲು ತೀರ್ಮಾನಿಸಿದರೆ, ಶ್ರೀ ವೀರ-ವಿಕ್ರಮ ಕಂಬಳ ಸಮಿತಿಯು ಕೊಡಂಗೆಯಲ್ಲಿ ಹೊಸ ಕರೆಗಳನ್ನು ನಿರ್ಮಿಸಿ ಕಂಬಳ ಆಯೋಜಿಸಿದೆ.
ಜಿಲ್ಲಾ ಕಂಬಳ ಸಮಿತಿಯು ಕೊಡಂಗೆ ಕಂಬಳಕ್ಕೆ ಅವಕಾಶ ನೀಡಿ ಇನ್ನೊಂದು ತಂಡದ ಜತೆ ಮಾತುಕತೆ ನಡೆಸಿದರೂ ವಿಫಲವಾಗಿತ್ತು. ಹೀಗಾಗಿ ಹೊಕ್ಕಾಡಿಗೋಳಿ ಕಂಬಳ ಆಯೋಜನೆಯ ವಿರುದ್ಧ ಕಾನೂನು ಹೋರಾಟ ನಡೆಸಿದರೂ ಹೈಕೋರ್ಟ್ ಹಿಂದೆ ನಡೆಯುತ್ತಿದ್ದ ಸ್ಥಳದಲ್ಲಿ ನಡೆಯುವ ಕಂಬಳಕ್ಕೆ ತಡೆ ನೀಡಲು ನಿರಾಕರಿಸಿತ್ತು.
ಶನಿವಾರ ಸ್ಥಳೀಯರು, ಗಣ್ಯರು ಎರಡೂ ಕಂಬಳದಲ್ಲಿ ಪಾಲ್ಗೊಂಡಿದ್ದು, ಕಂಬಳ ಕೋಣದ ಯಜಮಾನರು, ತೀರ್ಪುಗಾರರು ತಮ್ಮ ಇಚ್ಛೆಯ ಕಂಬಳದಲ್ಲಿ ಪಾಲ್ಗೊಂಡಿದ್ದರು. ಕೋಣಗಳು, ಕಂಬಳಾಭಿಮಾನಿಗಳು ಎರಡು ಕಂಬಳದಲ್ಲಿ ಹಂಚಿ ಹೋದ ಪರಿಣಾಮ ಭಾಗವಹಿಸಿದ ಕೋಣಗಳ ಸಂಖ್ಯೆ, ಜನರ ಸಂಖ್ಯೆ ಇತರ ಕಂಬಳ ಗಳಿಗಿಂತ ಕಡಿಮೆಯಾಗಿತ್ತು.