Advertisement

Bantwal: ಅಶಕ್ತರಿಗೆ ಒಳಿತು ಬಯಸುವ ಪ್ರೇತ!; 1.50 ಲಕ್ಷ ರೂ. ನೆರವು

12:56 PM Oct 08, 2024 | Team Udayavani |

ಬಂಟ್ವಾಳ: ಕಳೆದ 4 ವರ್ಷಗಳಲ್ಲಿ ನವರಾತ್ರಿಯ ಸಂದರ್ಭದಲ್ಲಿ ವೇಷ ಹಾಕಿ ಹಣ ಸಂಗ್ರಹಿಸಿ ಸುಮಾರು 1.50 ಲಕ್ಷ ರೂ.ಗಳಷ್ಟು ಮೊತ್ತವನ್ನು 10ಕ್ಕೂ ಅಧಿಕ ಅಶಕ್ತರಿಗೆ ನೀಡಿದ್ದ ಸರಪಾಡಿಯ ಯುವಕ ಈ ಬಾರಿ ಪ್ರೇತದ ವೇಷ ಹಾಕಿ ತಿರುಗಾಟ ಆರಂಭಿಸಿದ್ದಾರೆ.

Advertisement

ಸರಪಾಡಿ ಗ್ರಾಮದ ನೀರೊಲ್ಬೆ ನಿವಾಸಿ ದೇವದಾಸ್‌ ನಾಯ್ಕ ಅವರು ಪ್ರತಿವರ್ಷ ನವರಾತ್ರಿಯ ಸಂದರ್ಭದಲ್ಲಿ ವೇಷ ಹಾಕಿ 9 ದಿನಗಳ ಕಾಲ ಊರೂರು ಸುತ್ತಿ ಹಣ ಸಂಗ್ರಹಿಸಿ ಅಶಕ್ತರನ್ನು ಹುಡುಕಿ ಅವರಿಗೆ ನೆರವಾಗುತ್ತಿದ್ದಾರೆ. ಈ ಬಾರಿ ಅ. 6ರ ರಾತ್ರಿ ವೇಷ ಹಾಕಿ ಅ. 13ರ ವರೆಗೆ ತಿರುಗಾಟ ನಡೆಸಿ ವಿಟ್ಲದಲ್ಲಿ ತನ್ನ ತಿರುಗಾಟ ಕೊನೆಗೊಳಿಸಲಿದ್ದಾರೆ.

ಪ್ರತಿವರ್ಷವೂ ವೇಷ ಹಾಕುವ ಮೊದಲೇ ಎರಡು ಮೂರು ಅಶಕ್ತರನ್ನು ಹುಡುಕಿ ಸಂಗ್ರಹಗೊಂಡ ಮೊತ್ತವನ್ನು ಪಾಲು ಮಾಡಿ ನೀಡುತ್ತಿರುವ ದೇವದಾಸ್‌ ಅವರು ಈ ಬಾರಿ ಮೊತ್ತ ಸಂಗ್ರಹಗೊಂಡ ಬಳಿಕ ಅಶಕ್ತರನ್ನು ಹುಡುಕುವ ಕಾರ್ಯ ಮಾಡಲಿದ್ದಾರೆ. ಪ್ರತಿವರ್ಷವೂ ಮೊತ್ತವನ್ನು ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ಪ್ರಾರ್ಥಿಸಿ ಅಶಕ್ತರಿಗೆ ನೀಡುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ.

ಹೆಚ್ಚಿನ ಮೊತ್ತ ನೀಡಿ ಪ್ರೋತ್ಸಾಹ
ವೃತ್ತಿಯಲ್ಲಿ ಕೂಲಿ ಕಾರ್ಮಿಕನಾಗಿರುವ ದೇವದಾಸ್‌ ಅವರು ಸರಪಾಡಿ, ಮಣಿ ನಾಲ್ಕೂರು ಪರಿಸರದಲ್ಲಿ ಚಿರಪರಿಚಿತವಾಗಿದ್ದು, ಪ್ರತಿವರ್ಷ ವೇಷ ಹಾಕಿಕೊಂಡು ಹೋದಾಗಲೂ ಈತನ ಸದುದ್ದೇಶವನ್ನು ಪ್ರೋತ್ಸಾಹಿಸಿ ಹೆಚ್ಚಿನ ಮೊತ್ತವನ್ನೇ ನೀಡುತ್ತಿದ್ದಾರೆ. ಇವರ ಸೇವಾ ಕಾರ್ಯದ ಕುರಿತು ತಿಳಿಯದೇ ಸ್ವಲ್ಪ ಹಣವನ್ನು ಕೊಟ್ಟವರು ತಿಳಿದ ಬಳಿಕ ಮತ್ತೆ ಕರೆದು ಹೆಚ್ಚಿನ ಹಣ ನೀಡಿದ ಉದಾಹರಣೆಗಳಿವೆ.

ಕಳೆದ ವರ್ಷ ಅವರು ಸುಮಾರು 47 ಸಾವಿರ ರೂ.ಗಳನ್ನು ಸಂಗ್ರಹಿಸಿ ಮೂವರು ಅಶಕ್ತರಿಗೆ ವಿತರಿಸಿದ್ದರು. ವಿಶೇಷವೆಂದರೆ ವೇಷ ಹಾಕುವ ಖರ್ಚು, ತಿರುಗಾಟ ಖರ್ಚು ಹೀಗೆ ಇತರ ಯಾವುದೇ ಖರ್ಚನ್ನು ಸಂಗ್ರಹಗೊಂಡ ಮೊತ್ತದಿಂದ ಪಡೆಯದೆ ಅದಕ್ಕೆ ತನ್ನ ದುಡಿಮೆಯ ಹಣವನ್ನೇ ಬಳಸುತ್ತಿದ್ದಾರೆ.

Advertisement

ಬೈಕಿನ ವಿನ್ಯಾಸವೂ ಬದಲು.!
ವಿಭಿನ್ನ ವೇಷಗಳ ಮೂಲಕ ಗಮನ ಸೆಳೆದಿರುವ ದೇವದಾಸ್‌ ಅವರು ಈ ಹಿಂದೆ ಮಹಿಷಾಸುರ, ಪ್ರೇತ, ಅವತಾರ್‌ ವೇಷದ ಮೂಲಕ ಗಮನ ಸೆಳೆದಿದ್ದು, ಈ ಬಾರಿ ಮತ್ತೆ ಪ್ರೇತವಾಗಲು ಹೊರಟಿದ್ದಾರೆ. ತನ್ನ ವೇಷಕ್ಕೆ ತಕ್ಕಂತೆ ತಿರುಗಾಡುವ ಬೈಕನ್ನೂ ಗ್ಯಾರೇಜ್‌ನಲ್ಲಿ ವಿನ್ಯಾಸಗೊಳಿಸಿ ಬಳಿಕ ಮತ್ತೆ ಹಿಂದಿನ ರೂಪಕ್ಕೆ ತರುತ್ತಾರೆ.

ನೆರವು ನೀಡುವುದರಲ್ಲಿ ತೃಪ್ತಿ
ಈ ಬಾರಿ ಪ್ರೇತದ ಮೂಲಕ 7 ದಿನಗಳ ಕಾಲ ತಿರುಗಾಟ ನಡೆಸಿ ವಿಟ್ಲದಲ್ಲಿ ಕೊನೆಗೊಳಿಸಲಿದ್ದೇನೆ. ಸಂಗ್ರಹಗೊಂಡ ಮೊತ್ತವನ್ನು ಪ್ರತಿವರ್ಷದಂತೆ ಅಶಕ್ತರಿಗೆ ನೀಡಲಿದ್ದು, ನವರಾತ್ರಿ ಮುಗಿದ ಬಳಿಕ ಯಾರಿಗೆ ನೀಡಬೇಕು ಎಂಬುದರ ಕುರಿತು ನಿರ್ಧರಿಸಲಿದ್ದೇನೆ. ಬೇರೆ ರೂಪದಲ್ಲಿ ಅಶಕ್ತರಿಗೆ ನೆರವು ನೀಡುವಷ್ಟು ಶ್ರೀಮಂತ ನಾನಲ್ಲ. ಹೀಗಾಗಿ ಈ ರೀತಿ ವೇಷ ಹಾಕಿ ನೆರವು ನೀಡುವುದರಲ್ಲಿ ತೃಪ್ತಿ ಇದೆ.
-ದೇವದಾಸ್‌ ನಾಯ್ಕ ನೀರೊಲ್ಬೆ

-ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next