Advertisement

ಬಂಟ್ವಾಡಿ ಕಿಂಡಿ ಅಣೆಕಟ್ಟು : ಹಲಗೆ ಹಾಕಿದ್ದರೂ, ನದಿಪಾತ್ರದ ಊರುಗಳ ಬಾವಿ ನೀರೆಲ್ಲ ಉಪ್ಪು

03:35 PM May 31, 2023 | Team Udayavani |

ಕುಂದಾಪುರ: ಉಪ್ಪು ನೀರಿನ ಸಮಸ್ಯೆ ಪರಿಹಾರಕ್ಕೆ ಸೌಪರ್ಣಿಕ ನದಿಗೆ ಬಂಟ್ವಾಡಿ ಬಳಿ ಕಿಂಡಿ ಅಣೆಕಟ್ಟು ನಿರ್ಮಿಸಿದ್ದರೂ, ನದಿ ಪಾತ್ರದ ಹತ್ತಾರು ಗ್ರಾಮಗಳಿಗೆ ಇದೇ ಶಾಪವಾಗಿ ಪರಿಣಮಿಸಿದೆ. ಡ್ಯಾಂಗೆ ಹಲಗೆ ಹಾಕಿರುವುದರಿಂದಲೇ ಇಲ್ಲಿನ ಅನೇಕ ಊರುಗಳ ಬಾವಿ ನೀರು ಉಪ್ಪಾಗಿದೆ. ಕೂಡಲೇ ಹಲಗೆ ತೆಗೆಯಬೇಕು ಎನ್ನುವುದಾಗಿ ಈ ಭಾಗದ ಜನರು ಆಗ್ರಹಿಸಿದ್ದಾರೆ.

Advertisement

ಬಂಟ್ವಾಡಿ ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕಿರುವುದರಿಂದ ಬಂಟ್ವಾಡಿ ಆಸುಪಾಸಿನ ಊರುಗಳ ಬಾವಿಗಳ ನೀರು ಕಳೆದ ಡಿಸೆಂಬರ್‌ನಿಂದಲೇ ಉಪ್ಪಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ ಎನ್ನುವ ಜನ, ಈಗಲಾದರೂ ಹಲಗೆ ತೆಗೆದರೆ, ನೀರಿನ ಹರಿವಿನಿಂದಾಗಿಯಾದರೂ ಒಂದಷ್ಟು ಅನುಕೂಲವಾಗಬಹುದು ಎನ್ನುತ್ತಾರೆ.

ಯಾವೆಲ್ಲ ಊರಿಗೆ ಸಮಸ್ಯೆ?
ಬಂಟ್ವಾಡಿ ಸುತ್ತಮುತ್ತಲಿನ ಪರಿಸರ ಸೇರಿದಂತೆ, ನಾವುಂದ, ಹಡವು, ಪಡುಕೋಣೆ, ಮರವಂತೆ, ಬಡಾಕೆರೆ, ಹೇರೂರು, ಕೋಣಿR, ಹುಂತನಗೋಳಿ ಆಸುಪಾಸಿನ ಊರುಗಳಿಗೆ ಈ ಬಂಟ್ವಾಡಿ ಡ್ಯಾಂನಿಂದಾಗಿ ಸಮಸ್ಯೆಯಾಗಿದೆ. ಹಲಗೆಗಳನ್ನು ಸರಿಯಾದ ಕ್ರಮದಲ್ಲ ಅಳವಡಿಸದೇ ಇರುವುದು, ಸರಿಯಾದ ಸಮಯಕ್ಕೆ ಅಳವಡಿಸದೇ ಇರುವುದರಿಂದ ಉಪ್ಪು ನೀರೆಲ್ಲ ಅದಾಗಲೇ ಮೇಲೆ ಬಂದಿದ್ದರಿಂದ ಈ ಸಮಸ್ಯೆ ಬಂದಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಮತ್ತೆ ನೆರೆ ಭೀತಿ
ಪ್ರತೀ ಮಳೆಗಾಲದಲ್ಲೂ ಬಂಟ್ವಾಡಿ ಕಿಂಡಿ ಅಣೆಕಟ್ಟಿನ ಹಲಗೆ ತೆಗೆಯುವ ಪ್ರಕ್ರಿಯೆ ವಿಳಂಬ ಆಗುತ್ತಿರು ವುದರಿಂದ ನಾವುಂದ, ಅರೆಹೊಳೆ, ಮರವಂತೆ, ಕೋಣಿR ಸುತ್ತಮುತ್ತಲಿನ ಪರಿಸರದಲ್ಲಿ ಕೃತಕ ನೆರೆ ಉಂಟಾಗುತ್ತದೆ. ಮಳೆಗಾಲಕ್ಕೂ ಮೊದಲೇ ತೆಗೆಯದೇ, ಕೊನೆಗೆ ಮಳೆ ಶುರುವಾದ ನಂತರ ತೆಗೆಯಲೂ ಆಗದೇ, ಅಲ್ಲೇ ಕೆಲ ಹಲಗೆ ಬಿಡುವ ಪ್ರಮೇಯವೂ ಇರುತ್ತದೆ. ಈ ಬಾರಿಯಾದರೂ ಕಿಂಡಿ ಅಣೆಕಟ್ಟಿನ ಹಲಗೆ ಬೇಗ ತೆಗೆದರೆ, ಆರಂಭದ ಮಳೆಗೆ ಡ್ಯಾಂನ ಕಿಂಡಿಗಳಲ್ಲಿ ನಿಲ್ಲುವ ಮರ, ಮಟ್ಟುಗಳು, ಕಸ, ಕಡ್ಡಿಗಳು ಕೊಚ್ಚಿ ಹೋಗಿ, ನೆರೆ ಭೀತಿ ಕಡಿಮೆಯಾಗಬಹುದು ಎನ್ನುವುದು ಈ ಭಾಗದ ಜನರ ಅಭಿಪ್ರಾಯ.

ಏನು ಪ್ರಯೋಜನ?
ಬಂಟ್ವಾಡಿ, ನಾವುಂದ, ಬಡಾಕೆರೆ, ಹುಂತನಗೋಳಿ ಆಸುಪಾಸಿನ ಭಾಗದಲ್ಲಿ ಸಾಮಾನ್ಯವಾಗಿ ಬಡಾಕೆರೆ ಹಬ್ಬದ ಸಮಯದಲ್ಲಿ ಅಂದರೆ ಜ.27ರ ಹುಣ್ಣಿಮೆ ನೀರು ಮೇಲೆ ಬರುವ ಸಮಯದಲ್ಲಿ ಉಪ್ಪು ನೀರಾಗುವುದು ವಾಡಿಕೆ. ಆದರೆ ಈ ಬಾರಿ ಗುಡ್ಡಮ್ಮಾಡಿ ಷಷ್ಠಿ ಸಂದರ್ಭ ಅಂದರೆ ಡಿಸೆಂಬರ್‌ನಲ್ಲಿಯೇ ಇಲ್ಲಿನ ಬಾವಿಗಳ ನೀರು ಉಪ್ಪಾಗಿದೆ. ಹಾಗಾದರೆ ಹಲಗೆ ಹಾಕಿ ಏನು ಪ್ರಯೋಜನ ಅನ್ನುವುದು ನಾವುಂದ ಗ್ರಾಮ ಪಂಚಾಯತ್‌ ಸದಸ್ಯ ರಾಜೇಶ್‌ ಸಾಲುºಡ ಅವರ ಪ್ರಶ್ನೆ.

Advertisement

ಕೂಡಲೇ ತೆಗೆಸುವ ಕ್ರಮ
ಈಗಾಗಲೇ ಹಲಗೆ ತೆಗೆಯಲು ಮುಂದಾಗಿದ್ದು, ಕೂಡಲೇ ಎಲ್ಲ ಹಲಗೆಯನ್ನು ತೆಗೆಸಲು ಕ್ರಮ ಕೈಗೊಳ್ಳಲಾಗುವುದು. ಮಳೆಗಾಲಕ್ಕೂ ಮೊದಲೇ ತೆಗೆಸಲಾಗುವುದು.
– ನಾಗಲಿಂಗ ಎಚ್‌., ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌,
ಸಣ್ಣ ನೀರಾವರಿ ಇಲಾಖೆ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next