ಮಣಿಪಾಲ: ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಕನ್ಸಲ್ಟೆಂಟ್ ಕಾರ್ಡಿಯೋಲಾಜಿಸ್ಟ್ ಡಾ.ಕೆ.ಎಸ್.ಎಸ್. ಭಟ್ ಅವರ ಪತ್ನಿ, ಹಿರಿಯ ವೈದ್ಯೆ ಡಾ. ಆಶಾ ಭಟ್ (79) ಅಸೌಖ್ಯದಿಂದ ಡಿ. 24ರಂದು ಬೆಂಗಳೂರು ಇಂದಿರಾನಗರದ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತಿ, ಪುತ್ರನಾದ ಬೆಂಗಳೂರಿನ ಹೆಸರಾಂತ ಮನೋವೈದ್ಯ ಡಾ.ಶಾಮ್ ಭಟ್ ಮತ್ತು ಪುತ್ರಿಯಾದ ಮೆನೇಜ್ಮೆಂಟ್ ತಜ್ಞೆ ದೀಪಾ ಭಟ್ ಅವರನ್ನು ಅಗಲಿದ್ದಾರೆ.
ಜನರಲ್ ಪ್ರಾಕ್ಟೀಶನರ್ ಆದ ಡಾ. ಆಶಾ ಭಟ್ ಅವರು ನ್ಯೂಜಿಲೆಂಡ್, ಲಿಬಿಯಾ ಮೊದಲಾದ ದೇಶಗಳಲ್ಲಿ, ದಿಲ್ಲಿಯ ಪ್ರತಿಷ್ಠಿತ ಸಫ್ಜರ್‌ಜಂಗ್ ಆಸ್ಪತ್ರೆ ಮತ್ತು ಬೆಂಗಳೂರಿನ ಕ್ಲಿನಿಕ್‌ನಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿದ್ದರು.
ಚಿತ್ರಕಲಾವಿದರಾದ ಆಶಾ ಭಟ್ ಅವರು ತಂಜಾವೂರು, ಮೈಸೂರು ಶೈಲಿಯ ಚಿತ್ರಕಲೆಗಳನ್ನು ರಚಿಸಿದ್ದರು. ಕರ್ನಾಟಕ ಸಂಗೀತದ ಹಾಡುಗಾರರಾಗಿ ಮತ್ತು ಹಾರ್ಮೋನಿಯಂ ವಾದಕರಾಗಿಯೂ ಸೇವೆ ಸಲ್ಲಿಸಿದ್ದರು. ಲೇಡೀಸ್ ವಾಕಿಂಗ್ ಗ್ರೂಪ್‌ನ ಪ್ರವರ್ತಕರಾಗಿ ಸಕ್ರಿಯರಾಗಿದ್ದರು.
ಡಾ ಕೆ.ಎಸ್.ಎಸ್. ಭಟ್ ಅವರು ಮೂಲತಃ ಕಾಸರಗೋಡು ಪರಡಾಲ ಬದಿಯಡ್ಕದವರಾದರೆ, ಡಾ. ಆಶಾ ಭಟ್ ಮೂಲತಃ ಮಡಿಕೇರಿಯವರು.
ಡಾ ಭಟ್ ಅವರು ಮಾಹೆ ವಿ.ವಿ. ಕುಲಾಧಿಪತಿ ಡಾ ರಾಮದಾಸ್ ಪೈ, ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ. ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಸತೀಶ್ ಯು. ಪೈ ಮೊದಲಾದ ಮಣಿಪಾಲದ ಪೈ ಬಂಧುಗಳೊಂದಿಗೆ ನಿಕಟಸಂಪರ್ಕ ಹೊಂದಿದ್ದರು.