Advertisement

Bannerghatta Biological Park: ಚಿರತೆ ಮರಿಗಳಿಗೆ ಉದ್ಯಾನವನದ ಸಿಬ್ಬಂದಿ ಆಸರೆ

05:31 PM Mar 09, 2024 | Team Udayavani |

ಆನೇಕಲ್‌: ತಾಯಿಯಿಂದ ಬೇರ್ಪಟ್ಟ ಚಿರತೆ ಮರಿಗಳ ಬದುಕಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಆಸರೆಯಾಗಿದ್ದಾರೆ.

Advertisement

ರಾಜ್ಯದ ಮೂಲೆ ಮೂಲೆಗಳಲ್ಲಿನ ಕಾಡಂಚಿನ ಹಳ್ಳಿಗಳ ಹೊಲಗದ್ದೆಗಳ ಬಳಿ ಸಂಚಾರ ಮಾಡುವ ಹೆಣ್ಣು ಚಿರತೆಗಳು ಕಲವೊಮ್ಮೆ ಮರಿಗಳಿಗೆ ಜನ್ಮ ನೀಡಿತ್ತವೆ. ಹೀಗೆ ಕೆಲವು ಮರಿಗಳು ತಾಯಿಯಿಂದ ದೂರವಾಗಿ ತಬ್ಬಲಿಗಳಾಗುತ್ತವೆ. ಅವುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿ, ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆಸ್ಪತ್ರೆಗೆ ಕಳುಸಿಕೊಡುತ್ತಾರೆ. ಇಂತಹ ಚಿರತೆ ಮರಿಗಳಿಗೆ ಆಶ್ರಯದಾತರಾಗಿ ತಾಯಿ ಹಾಗೂ ತಂದೆಯ ಪ್ರೀತಿ ತೋರಿಸುತ್ತಿರುವ ಬನ್ನೇರುಘಟ್ಟ ಜೈಕ ಉದ್ಯಾನವನದ ವೈದ್ಯಕೀಯ ತಂಡದ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.

ಎಂಟು ಚಿರತೆ ಮರಿಗಳ ರಕ್ಷಣೆ: ಕಳೆದ ಬಾರಿ ಇದೇ ರೀತಿ ತಾಯಿಯಿಂದ ಬೇರ್ಪಟ್ಟ ಚಿರತೆ ಮರಿಗಳನ್ನು ರಕ್ಷಣೆ ಮಾಡಿದ ಸಾವಿತ್ರಮ್ಮ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಮತ್ತದೇ ರೀತಿಯಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ಎಂಟು ಚಿರತೆ ಮರಿಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಸಾಕುತ್ತಿದ್ದು, 25ರಿಂದ 30 ದಿನಗಳ ಚಿರತೆ ಮರಿಗಳನ್ನು ಮೈಸೂರು, ಕಡೂರು ಮತ್ತು ಬಿಆರ್‌ಟಿಯಿಂದ ಅಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿ, ಬನ್ನೇರುಘಟ್ಟಕ್ಕೆ ಕಳುಹಿ ಸಿದ್ದಾರೆ. ಈ ಮರಿಗಳಿಗೆ ಈಗ ಎಂಟು ತಿಂಗಳು. ಇವುಗಳನ್ನು ಉದ್ಯಾನವನದ ವೈದ್ಯರ ತಂಡ ಹಾಗೂ ಪ್ರಾಣಿ ಪಾಲಕರು ಸಾಕುತ್ತಿದ್ದಾರೆ.

ಚಿರತೆ ಮರಿಗಳಿಗೆ ತಾಯಿ ಪ್ರೀತಿ: ಪ್ರತಿದಿನ ಇಲ್ಲಿನ ವೈದ್ಯರಾದ ಡಾ.ಕಿರಣ್‌, ಡಾ.ಆನಂದ್‌, ಡಾ. ಮಂಜುನಾಥ್‌ ಮತ್ತವರ ತಂಡದ ಸಲಹೆ ಮೇರೆಗೆ ಸಿಬ್ಬಂದಿ ಶಿವು, ಸಾವಿತ್ರಮ್ಮ, ಶಂಕರ್‌, ರವಿ, ಶಿಂಶಾ, ರಾಜು, ಗಿರೀಶ್‌, ಮಾದೇಶ್‌, ಕಿರಣ್‌, ವೆಂಕಟೇಶ್‌ ಇವುಗಳನ್ನು ಸಲಹುತ್ತಿದ್ದು, ಅದರಲ್ಲೂ ಮುಖ್ಯವಾಗಿ ಸಾವಿತ್ರಮ್ಮ ಈ ಚಿರತೆ ಮರಿಗಳಿಗೆ ಪ್ರತಿದಿನ ಹಾಲು ಕುಡಿಸುವುದು, ಅವುಗಳ ಜೊತೆ ಆಟವಾಡುವುದನ್ನು ಮಾಡುತ್ತ ತಾಯಿ ಪ್ರೀತಿ ತೋರಿದ್ದಾರೆ. ದಿನ ಬೆಳಗಾದರೆ ತಮ್ಮ ಕಾಯಕದತ್ತ ಮುಖ ಮಾಡುವ ಇವರೆಲ್ಲರೂ, ಆಸ್ಪತ್ರೆಗೆ ಆಗಮಿಸುತ್ತಿದ್ದಂತೆ ಮರಿಗಳು ಇವರನ್ನು ನೋಡಿ, ತಾಯಿ-ತಂದೆಯಂತೆ ಪ್ರೀತಿ ತೋರಿಸಿ, ಅವರ ಜೊತೆ ಆಟ, ಚೆಲ್ಲಾಟ ಅಡುತ್ತವೆ. ಬೇರೆ ಬೇರೆ ತಾಯಿ ಮಕ್ಕಳಾದರೂ ಸಹ, ಚಿಕ್ಕವಯಸ್ಸಿನಲ್ಲೇ ಈ ಚಿರತೆ ಮರಿಗಳು ಒಟ್ಟಿಗೆ ಬೆಳೆಯುತ್ತಿರುವುದರಿಂದ ಒಂದೇ ತಾಯಿ ಮಕ್ಕಳಂತೆ ಜೊತೆಯಲ್ಲಿದ್ದು, ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಎರಡು ಸಮಯದಲ್ಲಿ ಸಿಬ್ಬಂದಿಗಳ ಕೈಯಲ್ಲಿ ಹಾಲು, ಮಾಂಸ ತಿಂದು ಆಟವಾಡಿಕೊಂಡು ಬೆಳೆಯುತ್ತಿವೆ.

ಸಫಾರಿಗೆ ಸ್ಥಳಾಂತರವಾಗುವ ಸಾಧ್ಯತೆ: ಕಳೆದ 6-7 ತಿಂಗಳಿಂದ ನಿರಂತರವಾಗಿ ಈ ಚಿರತೆ ಮರಿಗಳು ಬನ್ನೇರುಘಟ್ಟ ಆಸ್ಪತ್ರೆ ಆವರಣದಲ್ಲಿ ಬೆಳೆಯುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ದೇಶದಲ್ಲೇ ಮೊದಲ ಬಾರಿಗೆ ಅತಿ ದೊಡ್ಡ ಚಿರತೆ ಸಫಾರಿ ಬನ್ನೇರುಘಟ್ಟದಲ್ಲಿ ನಿರ್ಮಾಣವಾಗಲಿದೆ. ಈ 8 ಮರಿಗಳು ಅಲ್ಲಿಗೆ ಸ್ಥಳಾಂತರವಾಗಲಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರಾಣಿಗಳ ಪಾಲನೆ, ಪೋಷಣೆಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ತಾಯಿಯಿಂದ ಬೇರ್ಪಟ್ಟಿದ್ದ ಚಿರತೆ ಮರಿಗಳು ಸಫಾರಿಗೆ ಸೇರ್ಪಡೆಯಾಗಲು ಅಣಿಯಾಗಿವೆ.

Advertisement

ಒಂದು ಮರಿಗೆ ಒಂದು ಕಾಲಿಲ್ಲ: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಎಂಟು ಚಿರತೆ ಮರಿಗಳ ಪೈಕಿ ಒಂದು ಮರಿ ಮುಂದಿನ ಒಂದು ಕಾಲನ್ನು ಕಳೆದುಕೊಂಡಿದೆ. ಈ ಒಂದು ಮರಿಯನ್ನು ಹೆಚ್ಚು ಕಾಳಜಿವಹಿಸಿ, ಇಲ್ಲಿನ ಸಿಬ್ಬಂದಿ ಹಾರೈಕೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಸಫಾರಿಯಲ್ಲಿ ಈ ಮರಿಯನ್ನು ಪ್ರತ್ಯೇಕವಾಗಿಟ್ಟು ಸಾಕಲು ಸಿಬ್ಬಂದಿ ಮುಂದಾಗಿದ್ದಾರೆ. ಕಳೆದ ಬಾರಿ ಇದೇ ರೀತಿ 10 ಚಿರತೆ ಮರಿಗಳು ತಾಯಿಯಿಂದ ಬೇರ್ಪಟ್ಟಿದ್ದಾಗ ಆಸ್ಪತ್ರೆಗೆ ತಂದು ಅವುಗಳನ್ನು ಬೆಳೆಸಿ ಬಳಿಕ ಸಫಾರಿಗೆ ಬಿಟ್ಟಾಗ ಇಲ್ಲಿನ ಸಿಬ್ಬಂದಿ ಕಣ್ಣೀರು ಹಾಕಿದ್ದರು. ಈಗ ಮತ್ತೆ 8 ಚಿರತೆ ಮರಿಗಳನ್ನು ತಮ್ಮ ಮಕ್ಕಳಂತೆ ಕಳೆದ ಏಳೆಂಟು ತಿಂಗಳಿನಿಂದ ನಿರಂತರವಾಗಿ ಹಾರೈಕೆ ಮಾಡುತ್ತಿರುವ ಸಿಬ್ಬಂದಿಯನು° ಕೆಲವೇ ದಿನಗಳಲ್ಲಿ ಈ ಚಿರತೆ ಮರಿಗಳು ಸಫಾರಿಗೆ ಕಳುಹಿಸುತ್ತಾರೆ ಎನ್ನುವ ಮಾತನ್ನು ಕೇಳಿದಾಗ, ಅವರು ಇವು ನಮ್ಮ ಮಕ್ಕಳಿದ್ದಂತೆ. ಹೀಗಾಗಿ, ಪ್ರತಿದಿನ ಅವುಗಳ ಸೇವೆ ಮಾಡುತ್ತಿದ್ದೇವೆ. ಅಮ್ಮ ಇಲ್ಲ ಎಂದರೆ ಅದನ್ನು ನೆನೆಸಿಕೊಳ್ಳಲು ಸಾಧ್ಯವಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.

ಬನ್ನೇರುಘಟ್ಟದಲ್ಲಿ 76 ಚಿರತೆಗಳು: ಬನ್ನೇರುಘಟ್ಟ ಉದ್ಯಾನವನದಲ್ಲಿ ಈಗಾಗಲೇ ಚಿರತೆ ಸಫಾರಿ ಕಾಮಗಾರಿ ಬಹುತೇಕ ಪೂರ್ಣವಾಗಿದೆ. ಮುಂದಿನ ದಿನಗಳಲ್ಲಿ ಈ ಸಫಾರಿಯಲ್ಲಿ ಈಗಿನ ಎಂಟು ಚಿರತೆ ಮರಿಗಳು ಸೇರಿ ಒಟ್ಟು 76 ಚಿರತೆಗಳು ಸಾರ್ವಜನಿಕರ ವೀಕ್ಷಣೆಗೆ ಸಿಗಲಿದೆ. ಹೆಚ್ಚು ಚಿರತೆಗಳು ಇಲ್ಲಿದೆ ಎಂದು ಹೇಳಲು ಸಂತಸವಾಗುತ್ತದೆ ಎಂದು ಇಲ್ಲಿನ ವೈದ್ಯ ಡಾ.ಕಿರಣ್‌ ತಿಳಿಸಿದ್ದಾರೆ.

ಬೇರೆ ಬೇರೆ ತಾಯಿಯ ಮಕ್ಕಳಾದರೂ ಸಹ, ಚಿರತೆ ಮರಿಗಳು ಇಲ್ಲಿಗೆ ಬಂದು ನಮ್ಮನ್ನೇ ತಂದೆ-ತಾಯಿಗಳಂತೆ ವರ್ತನೆ ಮಾಡಿದಾಗ, ಅವುಗಳ ಜೊತೆ ನಾವು ಹೊಂದಾಣಿಕೆಯಾಗಿದ್ದು, ಅವುಗಳ ಪ್ರೀತಿ, ಮುದ್ದಾಟ ಪ್ರತಿದಿನವೂ ನಮ್ಮನ್ನು ಮೌನವಾಗಿಸಿ ಬಿಡುತ್ತಿವೆ. ●ಶಿವು, ಚಿರತೆ ಮರಿ ಪಾಲಕ

ಚಿರತೆಗಳನ್ನು ಸಫಾರಿಗೆ ಬಿಟ್ಟರೆ ನಮಗೆ ಬೇಸರವಾಗುತ್ತದೆ. ಪ್ರತಿದಿನವೂ ಅವುಗಳು ನಮ್ಮ ಮನೆಯ ಮಕ್ಕಳಾಗಿ ಹೋಗಿದ್ದು, ಅವುಗಳ ಜೊತೆ ಬೆರೆಯದೆ ಹೋದರೆ ದಿನ ಕಳೆಯಲು ಕಷ್ಟವಾಗಲಿದೆ. ●ಶಂಕರ್‌, ಚಿರತೆ ಮರಿಪಾಲಕ

ರಾಜ್ಯದ ವಿವಿಧ ಭಾಗದಿಂದ ಚಿರತೆ ಮರಿಗಳನ್ನು ಇಲ್ಲಿಗೆ ತರಲಾಗಿದೆ. ಅವುಗಳಿಗೆ ಪ್ರತಿದಿನವೂ ಹಾರೈಕೆ ಮಾಡಲಾಗಿದ್ದು, ಅವುಗಳನ್ನು ನಾವು ನಿರ್ಲಕ್ಷ್ಯ ಮಾಡಿದರೆ ಅವುಗಳ ಪ್ರಾಣಕ್ಕೆ ಆಪತ್ತು ಬರುತ್ತದೆ. ಈ ನಿಟ್ಟಿನಲ್ಲಿ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಮುತುವರ್ಜಿ ವಹಿಸಿ, ಅವುಗಳನ್ನು ಪಾಲನೆ ಮಾಡಿದ್ದೇವೆ. ● ಡಾ.ಕಿರಣ್‌, ವೈದ್ಯಾಧಿಕಾರಿ, ಬನ್ನೇರುಘಟ್ಟ

 

Advertisement

Udayavani is now on Telegram. Click here to join our channel and stay updated with the latest news.

Next