ಬೆಂಗಳೂರು: 2018ರ ವಿಧಾನಸಭಾ ಚುನಾವಣೆಗೆ 6 ತಿಂಗಳಿರುವಾಗಲೇ ಕೈ ಪಾಳೆಯದಲ್ಲಿ ಭಾರೀ ಪೈಪೋಟಿ ಆರಂಭವಾಗಿದೆ. ಬೆಂಗಳೂರಿನ ಸಿ.ವಿ.ರಾಮನ್ ನಗರ ಕ್ಷೇತ್ರದ ಟಿಕೆಟ್‌ಗಾಗಿ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಮತ್ತು ಪಿ.ರಮೇಶ್ ನಡುವೆ ಪೈಪೋಟಿ ಆರಂಭವಾಗಿದೆ.
ಸಿವಿ ರಾಮನ್ ನಗರದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಹಾಗೂ 2013ರಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಪಿ. ರಮೇಶ್ ಕ್ಷೇತ್ರದಲ್ಲಿ ತಾವೇ ಅಭ್ಯರ್ಥಿ ಎಂದು ಪ್ರತ್ಯೇಕವಾಗಿ ಪೋಸ್ಟರ್‌ಗಳನ್ನು ಹಾಕುವ ಮೂಲಕ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ.
ಸಿವಿ ರಾಮನ್ ನಗರ ವ್ಯಾಪ್ತಿಯಲ್ಲಿ ಸಚಿವ ಎಚ್.ಸಿ.ಮಹದೇವಪ್ಪ ಬೆಂಬಲಿಗರು ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಶುಭಾಶಯ ಕೋರಿರುವ ಮಹದೇವಪ್ಪ ಭಾವಚಿತ್ರವಿರುವ ಬ್ಯಾನರ್‌ಗಳನ್ನು ಹಾಕಿದ್ದು, ಅವರೇ ಸಿ.ವಿ.ರಾಮನ್ ನಗರದ ಅಭ್ಯರ್ಥಿ ಎಂದು ಬರೆಯಲಾಗಿದೆ.
ಅದಕ್ಕೆ ವಿರುದ್ಧವಾಗಿ 2013 ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪಿ. ರಮೇಶ್ ಕೂಡ ಪಕ್ಷದ ನಾಯಕ ಭಾವಚಿತ್ರಗಳನ್ನು ಬಳಸಿಕೊಂಡು ತನ್ನ ಭಾವಚಿತ್ರವಿರುವ ಬ್ಯಾನರ್‌ಗಳನ್ನು ಹಾಕಿದ್ದಾರೆ. ತಾವೂ ಕೂಡ 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂದು ಹಾಕಿಕೊಂಡಿದ್ದಾರೆ.
ಅಲ್ಲದೇ ಮಹದೇವಪ್ಪ ಅವರ ಭಾವಚಿತ್ರವಿರುವ ಬ್ಯಾನರ್‌ಗಳನ್ನು ಹರಿದು ಹಾಕಲಾಗಿದೆ.ಈ ಸಂಬಂಧ ಎರಡೂ ಗುಂಪಿನ ನಡುವೆ ಗಲಾಟೆಯಾಗಿದ್ದು, ಪಿ. ರಮೇಶ್ ಬೆಂಬಲಿಗ ಹಾಗೂ ಇಂದಿರಾ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರುಗನ್ ಮುನಿರತ್ನಂ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.