Advertisement

ಅಮ್ಮನೊಂದಿಗೆ ದಿನ ಕಳೆದ ಬನ್ನಂಜೆ ರಾಜಾ

12:24 PM Jul 10, 2018 | Team Udayavani |

ಮಲ್ಪೆ: ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ಭೂಗತ ಪಾತಕಿ ಬನ್ನಂಜೆ ರಾಜಾ (ರಾಜೇಂದ್ರ ) ಸೋಮವಾರ ಮಲ್ಪೆಗೆ ಬಂದು ಅನಾರೋಗ್ಯದಲ್ಲಿರುವ ತನ್ನ ಅಮ್ಮನನ್ನು ಭೇಟಿಯಾಗಿ ತಾಯಿಯ ಆರೋಗ್ಯವಿಚಾರಿಸಿದ್ದಾನೆ.

Advertisement

ಮಲ್ಪೆ ಸಸಿತೋಟದಲ್ಲಿರುವ ಸ್ವಗೃಹಕ್ಕೆ ಆತನನ್ನು ಪೊಲೀಸರು ಬಿಗು ಭದ್ರತೆಯಲ್ಲಿ ಕರೆತಂದಿದ್ದರು. ಅನಾರೋಗ್ಯದಿಂದಿರುವ ತಾಯಿಯನ್ನು ನೋಡಲು ಅವಕಾಶ ಕಲ್ಪಿಸಬೇಕು ಎಂಬ ಆತನ ಮನವಿಗೆ ಸ್ಪಂದಿಸಿ ನ್ಯಾಯಾಲಯವು ಮಾನವೀಯ ನೆಲೆಯಲ್ಲಿ ಅನುಮತಿ ನೀಡಿದೆ. ಬೆಳಗ್ಗೆ 9ರಿಂದ ಸಂಜೆ 6 ಗಂಟೆ ವರೆಗೆ ತಾಯಿ ಜತೆ ಇರಲು ವ್ಯವಸ್ಥೆ ಮಾಡಲಾಗಿತ್ತು.

ಮನೆಮಂದಿ ಜತೆಯಲ್ಲಿ…
ಫಿಶರೀಸ್‌ ಶಾಲಾ ಸಭಾಭವನದ ಮುಂಭಾಗದ ರಸ್ತೆಯ ಮೂಲಕ ಬೆಳಗ್ಗೆ 9 ಗಂಟೆಗೆ ಬಿಗು ಭದ್ರತೆಯಲ್ಲಿ ರಾಜಾನನ್ನು ಮನೆಗೆ ಕರೆತರಲಾಯಿತು. ರಾಜಾ ವಾಹನದಿಂದ ಇಳಿದವನೇ ನೇರ ತಾಯಿ ಬಳಿಸಾರಿ ನಮಸ್ಕರಿಸಿ ಆರೋಗ್ಯ ವಿಚಾರಿಸಿದ. ಬಳಿಕ ಹೊರಗೆ ಇರುವ ಕುಟುಂಬದ ದೈವದ ಗುಡಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ. ಬೆಳಗ್ಗಿನ ಉಪಾಹಾರವನ್ನು ಪೊಲೀಸರೇ ತರಿಸಿದ್ದು ಅದನ್ನು ಪರೀಕ್ಷೆಗೊಳಪಡಿಸಿ ನೀಡಲಾಯಿತು.

ಮಧ್ಯಾಹ್ನ ಮನೆಯಲ್ಲೇ ತಯಾರಿಸಿದ ಕೋಳಿ ರೊಟ್ಟಿ, ಮೀನಿನ ಊಟವನ್ನು ಕುಟುಂಬದವರ ಜತೆಯಲ್ಲಿ ಕುಳಿತು ಸವಿದ. ಮನೆಯಲ್ಲಿ ತಂದೆ ಸುಂದರ ಶೆಟ್ಟಿಗಾರ್‌, ತಾಯಿ ನಿವೃತ್ತ ಶಿಕ್ಷಕಿ ವಿಲಾಸಿನಿ, ಒಬ್ಬ ಸಹೋದರ, ಇಬ್ಬರು ಅತ್ತಿಗೆಯರು ಮತ್ತವರ ಮಕ್ಕಳು ಹಾಗೂ ಬೆಳಗ್ಗೆಯಷ್ಟೇ ಬೆಂಗಳೂರಿನಿಂದ ಬಂದಿದ್ದ ರಾಜನ ಪತ್ನಿ ಮತ್ತು ಇಬ್ಬರು ಮಕ್ಕಳು ಜತೆಯಲ್ಲಿದ್ದರು.

ಎಸ್ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಕುಮಾರಚಂದ್ರ ಮನೆಗೆ ಭೇಟಿ ನೀಡಿದ್ದಾರೆ. ಸಂಜೆ 6ರ ಬಳಿಕ ಭದ್ರತೆಯಲ್ಲಿ ಉಡುಪಿ ನಗರ ಠಾಣೆಗೆ ಕರೆದೊಯ್ಯಲಾಯಿತು. ರಾತ್ರಿ ಠಾಣೆಯಲ್ಲೇ ಇಟ್ಟುಕೊಂಡು ಮಂಗಳವಾರ ಬೆಳಗ್ಗೆ ವೈದಕೀಯ ಪರೀಕ್ಷೆ ನಡೆಸಿ ಅಲ್ಲಿಂದ ಬೆಳಗಾವಿ ಜೈಲಿಗೆ ಕರೆದೊಯ್ಯಲಾಗುವುದು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

1995ರ ಅನಂತರ, 2015ರ ಫೆಬ್ರವರಿಯಲ್ಲಿ ಸೌತ್‌ ಆಫ್ರಿಕಾದ ಮೊರಕ್ಕೋದಲ್ಲಿ ಬಂಧನಕ್ಕೊಳಗಾದ ಸಂದರ್ಭ ವಿಚಾರಣೆಯ ಸಲುವಾಗಿ ಪೊಲೀಸರ ಜತೆ ಒಂದು ಸಲ ಮನೆಗೆ ಬಂದ  ವೇಳೆ  ತಾಯಿಯನ್ನು ನೋಡಿದ್ದು ಬಿಟ್ಟರೆ ಬಳಿಕ ತಾಯಿ – ಮಗನ ಭೇಟಿ ಇದೇ ಮೊದಲು ಎನ್ನಲಾಗಿದೆ.

ಸಹಪಾಠಿಗಳಿಗೆ ನಿರಾಸೆ
ಬನ್ನಂಜೆ ರಾಜಾ ಪ್ರೌಢಶಿಕ್ಷಣವನ್ನು ಮನೆ ಸಮೀಪದ ಫಿಶರೀಸ್‌ ಶಾಲೆಯಲ್ಲಿ ಪೂರೈಸಿದ್ದು, ಅಪಾರ ಸ್ನೇಹಿತರನ್ನು ಹೊಂದಿದ್ದ. ಆತನನ್ನು ನೋಡಲು ಸಹಪಾಠಿಗಳು, ನೆರೆಹೊರೆಯವರು, ಗೆಳೆಯರು ಬೆಳಗ್ಗಿನಿಂದಲೇ ಮನೆಯತ್ತ ಬರುತ್ತಿದ್ದರು. ಒಂದಿಬ್ಬರು ಹತ್ತಿರದ ಸಂಬಂಧಿಗಳಿಗೆ ಮಾತ್ರ ಗೇಟಿನ ಹೊರಗೆ ನಿಂತು ರಾಜಾನೊಂದಿಗೆ ಮಾತನಾಡಲು ಅವಕಾಶ ನೀಡಿದರು.

ಮನೆಯಲ್ಲಿ ಬಿಗಿ ಭದ್ರತೆ
ರಾಜನ ಆಗಮನದ ಹಿನ್ನೆಲೆಯಲ್ಲಿ ಮನೆಯ ಒಳಗೂ ಸೇರಿದಂತೆ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಸುತ್ತ ಸಿಸಿ ಕೆಮರಾ ಅಳವಡಿಸಲಾಗಿತ್ತು. 50 ಮೀ. ದೂರದಲ್ಲಿ ಬ್ಯಾರಿಕೇಡ್‌ ಅಳವಡಿಸಿ ಪೊಲೀಸರ ಹೊರತು ಮಾಧ್ಯಮ ಸಹಿತ ಯಾರಿಗೂ ಪ್ರವೇಶ ಇರಲಿಲ್ಲ. ವೃತ್ತ ನಿರೀಕ್ಷಕ ಮಂಜನಾಥ್‌ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದ್ದು, ಜಿಲ್ಲಾ ಶಸಸ್ತ್ರ ಮೀಸಲು ಪಡೆ, ಕೆಎಸ್‌ಆರ್‌ಪಿ, ಸಿವಿಲ್‌ ಪೊಲೀಸರನ್ನು ನಿಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next