Advertisement

ಸಾಲ ಮನ್ನಾಕ್ಕೆ ಬ್ಯಾಂಕರ್  ಸಮ್ಮತಿ

06:00 AM Jul 25, 2018 | |

ಬೆಂಗಳೂರು: ರೈತರ ಸುಸ್ತಿ ಮತ್ತು ಚಾಲ್ತಿ ಸಾಲ ಮನ್ನಾ ಮಾಡುವ ರಾಜ್ಯ ಸರಕಾರದ ಘೋಷಣೆ ಜಾರಿಗೊಳಿಸಲು ರಾಷ್ಟ್ರೀಕೃತ ಬ್ಯಾಂಕ್‌ಗಳು ತಾತ್ವಿಕವಾಗಿ ಒಪ್ಪಿಗೆ ನೀಡಿವೆ. ಯಾವ ರೀತಿ ಇದನ್ನು ಜಾರಿಗೊಳಿಸಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲು ಉಪಸಮಿತಿ ರಚಿಸಲು ನಿರ್ಧರಿಸಿವೆ. ಬ್ಯಾಂಕ್‌ಗಳ ಆಡಳಿತ ಮಂಡಳಿ ಒಪ್ಪಿಗೆ ಪಡೆದು ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿವೆ.

Advertisement

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ನಡೆದ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ ಸಭೆಯಲ್ಲಿ ಸರಕಾರದ ಸಾಲ ಮನ್ನಾ ಯೋಜನೆಗೆ ಕೈಜೋಡಿಸಲು ಬ್ಯಾಂಕ್‌ಗಳು ನಿರ್ಧರಿಸಿವೆ. ಇದರೊಂದಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲ ಮನ್ನಾಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಯೋಜನೆ ಅನುಷ್ಠಾನಕ್ಕೆ ಅಡ್ಡಿಯಾಗುತ್ತದೆ ಎಂಬ ಆತಂಕಗಳಿಗೆ ತೆರೆ ಬಿದ್ದಂತಾಗಿದೆ.

ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ನೇತೃತ್ವದಲ್ಲಿ ನಡೆದ ಬ್ಯಾಂಕರ್‌ಗಳ ಸಮಿತಿ ಸಭೆಯಲ್ಲಿ ಸರಕಾರದ ಸಾಲ ಮನ್ನಾ ಯೋಜನೆ ಕುರಿತು ಸುದೀರ್ಘ‌ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸಾಲ ಮನ್ನಾ ಮಾಡುವ ಮೊತ್ತವನ್ನು ಸರಕಾರ ಏಕಕಾಲದಲ್ಲಿ ಭರಿಸದಿದ್ದಲ್ಲಿ ಕೆಲವು ಬ್ಯಾಂಕ್‌ಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಬಹುದು. ಸರಕಾರ ಸಾಲ ಮನ್ನಾದ ಮೊತ್ತ ಪಾವತಿಸುವ ಮುನ್ನವೇ ರೈತರಿಗೆ ಋಣಮುಕ್ತ ಪ್ರಮಾಣಪತ್ರ ನೀಡಲು ಸಾಧ್ಯವಿಲ್ಲ ಎಂದು ಕೆಲವು ಬ್ಯಾಂಕ್‌ಗಳ ಮುಖ್ಯಸ್ಥರು ಅಭಿಪ್ರಾಯಪಟ್ಟರು. ಈ ಹಿನ್ನೆಲೆಯಲ್ಲಿ ಸಾಲ ಮನ್ನಾ ಯೋಜನೆಯನ್ನು ಯಾವ ರೀತಿ ಜಾರಿಗೊಳಿಸಬೇಕು ಎಂಬ ಬಗ್ಗೆ ನಿರ್ಧರಿಸಲು ರೈತರಿಗೆ 500 ಕೋಟಿ ರೂ.ಗಿಂತ ಹೆಚ್ಚು ಮೊತ್ತದ ಸಾಲ ನೀಡಿದ ಬ್ಯಾಂಕ್‌ಗಳ ಪ್ರಮುಖರನ್ನೊಳಗೊಂಡ ಉಪ ಸಮಿತಿ ರಚಿಸಲು ನಿರ್ಧರಿಸಲಾಯಿತು.

ಈ ಸಮಿತಿಯು ವಿವಿಧ ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿ, ಬ್ಯಾಂಕ್‌ಗಳು ರೈತರಿಗೆ ನೀಡಿರುವ ಸಾಲದ ಮೊತ್ತ, ಸರಕಾರದಿಂದ 4 ಹಂತಗಳಲ್ಲಿ ಮನ್ನಾ ಮೊತ್ತ ಮರು ಪಾವತಿ ಯಿಂದ ಬ್ಯಾಂಕ್‌ಗಳ ಮೇಲೆ ಆಗುವ ಪರಿಣಾಮ ಇತ್ಯಾದಿ ಅಂಶಗಳನ್ನು ಪರಿಶೀಲಿಸುವ ಜತೆಗೆ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ 2-3 ವಾರಗಳಲ್ಲಿ ಸಮಿತಿಗೆ ವರದಿ ಸಲ್ಲಿಸಲಿದೆ. ಈ ವರದಿ ಆಧರಿಸಿ ಸಾಲ ಮನ್ನಾ ಯೋಜನೆ ಜಾರಿಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಭೆಯಲ್ಲಿ ಬ್ಯಾಂಕರುಗಳ ಸಮಿತಿ ಸಂಯೋಜಕ ಮತ್ತು ಸಿಂಡಿಕೇಟ್‌ ಬ್ಯಾಂಕ್‌ ಕಾರ್ಯನಿರ್ವಾಹಕ ನಿರ್ದೇಶಕ ಸಿ.ಎಚ್‌.ಎಸ್‌.ಎಸ್‌.ಮಲ್ಲಿಕಾರ್ಜುನ ರಾವ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಿ.ವಿ.ಪ್ರಸಾದ್‌, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಡಾ| ಎಸ್‌. ಸುಬ್ರಹ್ಮಣ್ಯ ಸಹಿತ ವಿವಿಧ ಬ್ಯಾಂಕ್‌ಗಳ ಮುಖ್ಯಸ್ಥರು ಹಾಜರಿದ್ದರು.

Advertisement

ಉಪಸಮಿತಿಗೆ ನಿರ್ಧಾರ: ಸಾಲ ಮನ್ನಾ ಕಾರ್ಯಕ್ರಮ ವನ್ನು ಬ್ಯಾಂಕ್‌ಗಳು ಯಾವ ರೀತಿ ಅನುಷ್ಠಾನಗೊಳಿಸಬಹುದು ಮತ್ತು ಸರಕಾರದಿಂದ ಯಾವ ರೀತಿ ಬ್ಯಾಂಕ್‌ಗಳಿಗೆ ಮರುಪಾವತಿ ಆಗಬೇಕು ಎಂಬುದನ್ನು ತೀರ್ಮಾನಿಸಲು ಉಪ ಸಮಿತಿ ರಚಿಸಲು ನಿರ್ಧರಿಸಲಾಯಿತು. ಈ ಸಮಿತಿ ವರದಿ ಆಧರಿಸಿ ಸಾಲ ಮನ್ನಾ ಕುರಿತಂತೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸರಕಾರದ ಮುಖ್ಯ ಕಾರ್ಯದರ್ಶಿಗಳು ಸಭೆಯಲ್ಲಿ ತಿಳಿಸಿದರು.

ಮಾರ್ಗಸೂಚಿಯಲ್ಲಿವೆ ಸಮಸ್ಯೆ
ಸಾಲ ಮನ್ನಾಕ್ಕೆ ಎಲ್ಲ ಬ್ಯಾಂಕ್‌ಗಳು ಒಪ್ಪಿಗೆ ನೀಡಿವೆಯಾದರೂ ಈ ಕುರಿತ ಮಾರ್ಗಸೂಚಿಯಲ್ಲಿರುವ ಕೆಲವು ಸಮಸ್ಯೆ ಗಳನ್ನು ಬಗೆಹರಿಸುವಂತೆ ಕೋರಿದವು. ಸಾಲ ಮನ್ನಾ ಕುರಿತಂತೆ ಮಾರ್ಗಸೂಚಿ ಸಿದ್ಧಪಡಿಸಿರುವ ರಾಜ್ಯ ಸರಕಾರ, ರೈತರ 2 ಲಕ್ಷ ರೂ.ವರೆಗಿನ ಸುಸ್ತಿ ಸಾಲ ಮತ್ತು ಒಂದು ಲಕ್ಷ ರೂ.ವರೆಗಿನ ಚಾಲ್ತಿ ಸಾಲ ಮನ್ನಾ ಅನುಷ್ಠಾನವಾದ ಕೂಡಲೇ ಬ್ಯಾಂಕ್‌ಗಳು ಸಾಲದಿಂದ ಮುಕ್ತರಾಗುವ ರೈತರಿಗೆ ಋಣಮುಕ್ತ ಪ್ರಮಾಣಪತ್ರ ನೀಡಬೇಕು. ಸಾಲ ಮನ್ನಾದ ಮೊತ್ತವನ್ನು ನಾಲ್ಕು ಹಂತಗಳಲ್ಲಿ   ಪಾವತಿಸುವುದಾಗಿ ಹೇಳಿದೆ. ರೈತರ ಸುಸ್ತಿ ಸಾಲ ಬ್ಯಾಂಕ್‌ಗಳ ಎನ್‌ಪಿಎ ಆಗಿರುವುದರಿಂದ ಸಾಲ ಮನ್ನಾ ಮಾಡುವಾಗ ಶೇ. 50ರಷ್ಟು ಎನ್‌ಪಿಎ ಸರಕಾರ ಭರಿಸುತ್ತದೆ. ಉಳಿದ ಶೇ. 50ನ್ನು ಬ್ಯಾಂಕ್‌ಗಳು ಹೊಂದಾಣಿಸಬೇಕು ಎಂದಿದೆ.

ಈ ಬಗ್ಗೆ ಕೆಲವರು ಸರಕಾರದಿಂದ ಸಾಲ ಮನ್ನಾದ ಬಾಕಿ ಪಾವತಿಯಾಗದೆ ರೈತರಿಗೆ ಋಣಮುಕ್ತ ಪ್ರಮಾಣಪತ್ರ ಕೊಡುವುದು ಕಷ್ಟ ಎಂದು ಹೇಳಿದರೆ, ಸಣ್ಣ ಮಟ್ಟದ ಬ್ಯಾಂಕ್‌ನ ಮುಖ್ಯಸ್ಥರು, ಏಕಕಾಲದಲ್ಲಿ ಸಾಲ ಮನ್ನಾದ ಬಾಕಿ ಪಾವತಿಸದಿದ್ದರೆ ಬ್ಯಾಂಕ್‌ಗಳು ಆರ್ಥಿಕವಾಗಿ ತೊಂದರೆಗೆ ಸಿಲುಕಿ ರೈತರಿಗೆ ಹೊಸದಾಗಿ ಸಾಲ ನೀಡುವುದು ಕಷ್ಟವಾಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಜತೆಗೆ ಸುಸ್ತಿ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಶೇ. 50ರಷ್ಟನ್ನು ಭರಿಸುವುದು ಕಷ್ಟ ಎಂಬ ಅಭಿಪ್ರಾಯ ಬಹುತೇಕರಿಂದ ಕೇಳಿಬಂತು.

Advertisement

Udayavani is now on Telegram. Click here to join our channel and stay updated with the latest news.

Next