Advertisement
ಪಟ್ಟಣದಿಂದ ನೂರಾರು ಸಂಖ್ಯೆಯ ವಿದ್ಯಾರ್ಥಿನಿಯರು ಶಾಲಾ, ಕಾಲೇಜುಗಳಿಗೆ ತೆರಳಿದರೆ, ನೂರಾರು ಸಂಖ್ಯೆಯ ಮಹಿಳೆಯರು, ಸರ್ಕಾರಿ, ಅರೆ ಸರ್ಕಾರಿ ನೌಕರರು, ಖಾಸಗಿ ಕಾರ್ಖಾನೆ, ಫ್ಯಾಕ್ಟರಿಗಳಲ್ಲಿ ಕೆಲಸಕ್ಕೆ ತೆರಳುವ ಜೊತೆಗೆ, ವ್ಯಾಪಾರಕ್ಕಾಗಿ ಪಟ್ಟಣದಿಂದ ವಿವಿಧ ಗ್ರಾಮ, ಪಟ್ಟಣಗಳಿಗೆ ಬಂದು ಹೋಗುತ್ತಾರೆ. ಆದರೆ, ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಿದಾಗಿನಿಂದ ಎಲ್ಲ ಬಸ್‌ಗಳು ರಶ್ ಆಗಿಯೇ ಬರುತ್ತಿವೆ. ಇದರಿಂದ ದಿನನಿತ್ಯ ಸರಿಯಾದ ವೇಳೆಗೆ ಶಾಲಾ, ಕಾಲೇಜು ಹಾಗೂ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ತುಂಬಾ ತೊಂದರೆಯಾಗುತ್ತಿದೆ. ಹಾಗಾಗಿ, ಅನಿವಾರ್ಯವಾಗಿ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾಗಿದೆ.
ವಿದ್ಯಾರ್ಥಿನಿಯರು ಬೆಳಿಗ್ಗೆ 8 ರಿಂದ 10ರವರೆಗೆ ಹಾವೇರಿ ಹುಬ್ಬಳ್ಳಿ ಕಡೆ ಚಲಿಸುವ ಬಸ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ಸರಿಯಾದ ವೇಳೆಗೆ ಶಾಲಾ, ಕಾಲೇಜುಗಳಿಗೆ ಹೋಗಲು ಆಗುತ್ತಿಲ್ಲ. ಈ ಮೊದಲೇ ಹಾವೇರಿ ಕಡೆ ಹೋಗಲು ಹಾಗೂ ಬರಲು ಪರದಾಡಬೇಕಾಗಿತ್ತು. ಆದರೆ, ಈಗ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಚಾಲನೆ ನೀಡಿದಾಗಿನಿಂದ ಶಾಲಾ, ಕಾಲೇಜುಗಳಿಗೆ ತೆರಳುವ ಗೋಳು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ ಎಂದು ಆರೋಪಿಸುತ್ತಿದ್ದಾರೆ. ಸರ್ಕಾರದ ಈ ಯೋಜನೆ ಸಫಲವಾಗಬೇಕಾದರೆ, ಹೆಚ್ಚುವರಿ ಬಸ್‌ಗಳನ್ನು ಬಿಡಬೇಕೆಂಬುದು ಮಹಿಳಾಮಣಿಗಳ ಒತ್ತಾಸೆಯಾಗಿದೆ. ಬೆಳಿಗ್ಗೆ 10 ಗಂಟೆ ಒಳಗಾಗಿ ವಿದ್ಯಾರ್ಥಿನಿಯರು, ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳೆಯರು ತಲುಪಬೇಕಾಗಿರುವುದರಿಂದ, ಆ ವೇಳೆಗೆ ಬಸ್‌ಗಳ ಕೊರತೆ ಇರುತ್ತದೆ. ಇದರಿಂದ ನಾವು ಅನಿವಾರ್ಯವಾಗಿ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾಗಿದೆ. ಆದ್ದರಿಂದ, ಬೆಳಿಗ್ಗೆ 8 ರಿಂದ 10 ಗಂಟೆಯೊಳಗೆ ಹೆಚ್ಚುವರಿ ಬಸ್ ಬಿಟ್ಟು ಮಹಿಳೆಯರಿಗೆ
ಅನುಕೂಲ ಕಲ್ಪಿಸಬೇಕು.
ಸ್ವಾತಿ ಹಿರೇಮಠ, ಬಂಕಾಪುರ