ಹುಬ್ಬಳ್ಳಿ: ರಾಷ್ಟ್ರೀಕೃತ ಬ್ಯಾಂಕ್ ಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್ ನೌಕರರು ಕರ್ತವ್ಯ ಬಹಿಷ್ಕರಿಸಿ ಕೇಂದ್ರ ಸರಕಾರ ಹಾಗೂ ಆರ್.ಬಿ.ಐ ನೀತಿಗಳನ್ನು ಖಂಡಿಸಿದರು.
ಸೋಮವಾರ ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿರುವ ಯೂನಿಯನ್ ಬ್ಯಾಂಕ್ ಮುಂಭಾಗದಲ್ಲಿ ವಿವಿಧ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳು ಹಾಗೂ ನೌಕರರು ಜಮಾಯಿಸಿ ಪ್ರತಿಭಟನೆ ನಡೆಸಿದರು.
ಸಾರ್ವಜನಿಕ ಬ್ಯಾಂಕ್ ಗಳನ್ನಾಗಿ ಬಂಡವಾಳಶಾಹಿಗಳ ಕಪಿ ಮುಷ್ಟಿಗೆ ನೀಡಲು ಕೇಂದ್ರ ಸರಕಾರ ಮುಂದಾಗಿದೆ. ಇದು ಜನ ಹಾಗೂ ಬ್ಯಾಂಕ್ ಉದ್ಯೋಗಿಗಳ ವಿರೋಧಿ ನೀತಿಯಾಗಿದೆ ಎಂದು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಇದನ್ನೂ ಓದಿ:ತಮಿಳುನಾಡು: ಚುನಾವಣಾ ಪ್ರಚಾರ ಮುಗಿಸಿ ವಾಪಾಸಾಗುತ್ತಿದ್ದ ಕಮಲ್ ಹಾಸನ್ ಮೇಲೆ ದಾಳಿ!
ಬ್ಯಾಂಕ್ ನೌಕರರ ಮುಖಂಡ ಸ್ಟೀಫನ್ ಜಯಚಂದ್ರ ಮಾತನಾಡಿ, ಹಲವು ದಶಕಗಳಿಂದ ಜನ ಸಾಮಾನ್ಯರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿಕೊಂಡು ಬಂದಿರುವ ಬ್ಯಾಂಕ್ ಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ಈ ಬ್ಯಾಂಕ್ ಗಳಲ್ಲಿನ ಜನ ಸಾಮಾನ್ಯರ ಠೇವಣಿ ಮೇಲೆ ಕೇಂದ್ರ ಸರಕಾರ ಹಾಗೂ ಬಂಡವಾಳ ಶಾಹಿಗಳ ವಕ್ರದೃಷ್ಟಿ ಬೀರಿದೆ. ಖಾಸಗೀಕರಣ ಬ್ಯಾಂಕ್ ನೌಕರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಯಾವುದೇ ಕಾರಣಕ್ಕೂ ರಾಷ್ಟ್ರೀಕೃತ ಬ್ಯಾಂಕ್ ಗಳನ್ನು ಖಾಸಗಿ ಮಾಡಲು ಬಿಡುವುದಿಲ್ಲ ಎಂದರು.
ಕಾರ್ಮಿಕ ಮುಖಂಡ ಮಹೇಶ ಪತ್ತಾರ ಮಾತನಾಡಿ, ಹಲವು ತಿಂಗಳುಗಳಿಂದ ಕೃಷಿ ವಿರೋಧಿ ನೀತಿ ಖಂಡಿಸಿ ರೈತರು ಚಳಿ, ಮಳೆ ಎನ್ನದೆ ಹೋರಾಟ ಮಾಡುತ್ತಿದ್ದು, ಕೇಂದ್ರ ಸರಕಾರ ಹಲವು ಸೌಲಭ್ಯಗಳನ್ನು ಕಡಿತಗೊಳಿಸುವ ಮೂಲಕ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಬ್ಯಾಂಕ್ ನೌಕರರು ಒಗ್ಗಟ್ಟಿನಿಂದ ಹೋರಾಡುವ ಮೂಲಕ ಖಾಸಗೀಕರಣಕ್ಕೆ ಅವಕಾಶ ನೀಡಬಾರದು. ಏಕ ವ್ಯಕ್ತಿಯ ಸರಕಾರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದ್ದು, ದೇಶವನ್ನು ಲೂಟಿ ಹೊಡೆಯಲು ಮುಂದಾಗಿರುವ ಸರಕಾರಕ್ಕೆ ಚುನಾವಣೆ ಮೂಲಕವೇ ಉತ್ತರ ನೀಡಬೇಕು ಎಂದರು.
ವಿವಿಧ ರಾಷ್ಟ್ರೀಕೃತ ಬ್ಯಾಕ್ ಗಳ ಅಧಿಕಾರಿಗಳು, ಸಿಬ್ಬಂದಿ ಹಾಗು ಕಾರ್ಮಿಕ ಮುಖಂಡರು ಪಾಲ್ಗೊಂಡಿದ್ದರು