ಬೆಂಗಳೂರು: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ಬ್ಯಾಂಕ್ ನೌಕರರು 2 ದಿನದ ಮುಷ್ಕರ ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ ವಹಿವಾಟಿನಲ್ಲಿ ತೊಂದರೆ ಉಂಟಾಗಿದೆ. ಬ್ಯಾಂಕ್‌ಗಳ ಒಕ್ಕೂಟ ಕರೆ ನೀಡಿರುವ ದೇಶವ್ಯಾಪಿ ಮುಷ್ಕರದಲ್ಲಿ ನೌಕರರು ಮತ್ತು ಅಧಿಕಾರಿಗಳು ಸೇರಿದಂತೆ ಲಕ್ಷಾಂತರ ಸಿಬ್ಬಂದಿ ಪಾಲ್ಗೊಂಡಿದು, ಬ್ಯಾಂಕ್‌ಗಳ ಎಟಿಎಂ, ಆನ್‌ಲೈನ್ ಸೇವೆ ಮತ್ತು ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಿಟ್ಟು ಉಳಿದ ಕಾರ್ಯಚಟುವಟಿಕೆಗಳಿಗೆ ಬುಧವಾರ ತೊಂದರೆಯಾಯಿತು. ಬ್ಯಾಂಕ್ ನೌಕರರ ಮುಷ್ಕರದ ಬಗ್ಗೆ ಮಾಹಿತಿ ಇಲ್ಲದೆ ಬ್ಯಾಂಕ್‌ಗಳಿಗೆ ಬಂದಿದ್ದ ಗ್ರಾಹಕರು ಬೇಸರದಿಂದ ಮನೆಗೆ ಹಿಂತಿರುಗುತ್ತಿದ್ದುದು ಕಂಡು ಬಂತು.
ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿ ಭಟನೆ ನಡೆಸಿದ ಬ್ಯಾಂಕ್ ನೌಕರರು, ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಧೋರಣೆಯನ್ನು ಖಂಡಿಸಿದರು.
ಇದೇ ವೇಳೆ ಮಾತನಾಡಿದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಸಂಚಾಲಕ ಎಚ್. ವಸಂತ ರೈ, ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆ ಸಂಬಂಧ ಈಗಾಗಲೇ ಕೇಂದ್ರ ಸರ್ಕಾರ ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್‌ನೊಂದಿಗೆ ಮಾತುಕತೆ ನಡೆಸಲಾಗಿದೆ. ಆದರೆ, ಇದು ವಿಫಲವಾದ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದರು.
ಕಳೆದ ಐದು ವರ್ಷಗಳಲ್ಲಿ ಬ್ಯಾಂಕಿನ ವ್ಯಾಪಾರ ವಹಿವಾಟಿನಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಅಲ್ಲದೆ ಅಧಿಕ ಸಂಖ್ಯೆಯಲ್ಲಿ ಶಾಖೆಗಳ ವಿಸ್ತರಣೆಯಾಗಿದೆ. ಅನುತ್ಪಾದಕ ಸಾಲಗಳ ನೆಪಹೇಳಿ, ಕೇಂದ್ರ ಸರ್ಕಾರ ಬ್ಯಾಂಕ್ ನೌಕರರ ವೇತನವನ್ನು ಪರಿಷ್ಕರಣೆ ಮಾಡಲು ಹಿಂದೇಟು ಹಾಕುತ್ತಿದೆ. ಅನುತ್ಪಾದಕ ಸಾಲಗಳಿಗೆ ಬ್ಯಾಂಕ್ ಅಧಿಕಾರಿಗಳು ಮತ್ತು ನೌಕರರು ಕಾರಣರಲ್ಲ ಎಂದು ಹೇಳಿದರು.
ವೇತನ ವಿಳಂಬ ಸಾಧ್ಯತೆ
ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಿಂಗಳಾಂತ್ಯದಲ್ಲಿ ಬ್ಯಾಂಕ್ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ವೇತನದಲ್ಲಿ ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ. ಗುರುವಾರ ಕೂಡ ಮುಷ್ಕರ ಮುಂದುವರಿಯಲಿದು,ª ಈ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ವೇತನ ವಿಳಂಬವಾಗಲಿದೆ ಎಂದು ಹೇಳಲಾಗಿದೆ.