Advertisement

ನಾಳೆ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಮುಷ್ಕರ

10:33 AM Feb 27, 2017 | |

ಹೊಸದಿಲ್ಲಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಮಂಗಳವಾರ ಮುಷ್ಕರ ನಡೆಸುವ ಬೆದರಿಕೆಯೊಡ್ಡಿವೆ. ಹಾಗಾಗಿ, ತುರ್ತು ಬ್ಯಾಂಕ್‌ ವ್ಯವಹಾರ ಗಳನ್ನು ಹೊಂದಿರುವ ಗ್ರಾಹಕರು ಸೋಮವಾರವೇ ಮುಗಿಸಿಕೊಳ್ಳಬೇಕಿದೆ.ಬ್ಯಾಂಕ್‌ ಯೂನಿಯನ್‌ಗಳ ಸಂಯುಕ್ತ ವೇದಿಕೆ(ಯುಎಫ್ಬಿಯು) ಅಡಿಯಲ್ಲಿ ಕಾರ್ಯನಿರ್ವಹಿಸುವ ಬ್ಯಾಂಕ್‌ಗಳು ಪ್ರತಿಭಟನೆಗೆ ಇಳಿಯಲು ನಿರ್ಧರಿಸಿವೆ. ವಸೂಲಾಗದ ಸಾಲ ನಿರ್ವಹಣೆಯ ಹೊಣೆಗಾರಿಕೆ ಸೇರಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸುವುದಾಗಿ ಹೇಳಿದೆ.

Advertisement

ಎಸ್‌ಬಿಐ, ಪಿಎನ್‌ಬಿ ಮತ್ತು ಬಿಒಬಿ ಸೇರಿ ಇನ್ನೂ ಕೆಲವು ಬ್ಯಾಂಕ್‌ಗಳು ಕಾರ್ಯನಿರ್ವಹಿಸದಿರುವ ಬಗ್ಗೆ ಮಾಹಿತಿ ನೀಡಿವೆ. ಖಾಸಗಿ ಬ್ಯಾಂಕ್‌ಗಳಾದ ಐಸಿಐಸಿಐ, ಎಚ್‌ಡಿಎಫ್ಸಿ, ಆಕ್ಸಿಸ್‌ ಮತ್ತು ಕೊಟೆಕ್‌ ಮಹೇಂದ್ರ ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸುವ ಸಾಧ್ಯತೆ ಇದ್ದು, ಚೆಕ್‌ ವ್ಯವಹಾರಗಳನ್ನಷ್ಟೇ ತಡೆಹಿಡಿದಿರುವ ಬಗ್ಗೆ ಮುನ್ಸೂಚನೆ ನೀಡಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಖೀಲ ಭಾರತೀಯ ಬ್ಯಾಂಕ್‌ ಸಿಬ್ಬಂದಿ ಸಂಸ್ಥೆ (ಎಐವಿಇಎ) ಪ್ರಧಾನ ಕಾರ್ಯದರ್ಶಿ ಸಿ.ಎಚ್‌. ವೆಂಕಟಾಚಲಂ, “ಫೆಬ್ರವರಿ 21ರಂದು ನಡೆದ ಸಂಧಾನ ಸಭೆ ವಿಫ‌ಲವಾಗಿದೆ. ಭಾರತೀಯ ಬ್ಯಾಂಕ್‌ಗಳ ಸಂಘ ಬ್ಯಾಂಕ್‌ಗಳ ನ್ನು ನಿರ್ವಹಿಸುತ್ತದೆ. ಆದರೆ ಬೇಡಿಕೆಗಳನ್ನು ಆಲಿಸುತ್ತಿಲ್ಲ. ಯಾವುದೇ ಒಪ್ಪಂದಕ್ಕೂ ಮುಂದಾಗುತ್ತಿಲ್ಲ. ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದ ಸಂದರ್ಭದಲ್ಲೆಲ್ಲ ಅದಾವುದನ್ನೂ ಒಪ್ಪಿಕೊಳ್ಳದೇ ಸಂಧಾನ ಸಭೆಗಳೆಲ್ಲವೂ ವಿಫ‌ಲವಾಗಿವೆ. ಅದೇ ಕಾರಣಕ್ಕಾಗಿ ಯುಎಫ್ಬಿಯು ಮತ್ತೆ ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಬೇಡಿಕೆಗಳು

ವಸೂಲಾಗದ ಸಾಲ ನಿರ್ವಹಣೆಯ ಹೊಣೆಗಾರಿಕೆಗೆ ಸೂಕ್ತ ಕ್ರಮ ಕೈಗೊಳ್ಳುವುದು.

Advertisement

ನೋಟುರದ್ದು ಮಾಡಿ, ಹೊಸ ನೋಟು ಬಿಡುಗಡೆಯಾದಾಗ ಹೆಚ್ಚುವರಿ ಕಾರ್ಯನಿರ್ವಹಿಸಿದ್ದಕ್ಕೆ ಸಿಬ್ಬಂದಿ, ಅಧಿಕಾರಿಗಳಿಗೆ ಪರಿಹಾರ ನೀಡುವುದು.

ನೋಟು ರದ್ದು ಮಾಡಿದ ಸಂದರ್ಭದಲ್ಲಿ ಬ್ಯಾಂಕ್‌ಗಳ ವೆಚ್ಚವನ್ನು ಸರ್ಕಾರವೇ ಭರಿಸಲು ಮನವಿ.

ಅರೆಕಾಲಿಕ ಸಿಬ್ಬಂದಿ, ಅಧಿಕಾರಿಗಳನ್ನು ಕಾಯಂಗೊಳಿಸುವುದು ಮತ್ತು ಬ್ಯಾಂಕ್‌ನ ಎಲ್ಲಾ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶೀಘ್ರ ನೇಮಕ ಮಾಡಿಕೊಳ್ಳಲು ಕ್ರಮ ಜರುಗಿಸುವುದು.

ಸುಸ್ತಿದಾರರ ವಿರುದ್ಧ ಕ್ರಿಮಿನಲ್‌ ಕೇಸು ದಾಖಲಿಸಿ ಕ್ರಮ ತೆಗೆದುಕೊಳ್ಳುವುದು.

ಫೆಬ್ರವರಿ 21ರಂದು ನಡೆದ ಸಂಧಾನ ಸಭೆ ವಿಫ‌ಲವಾಗಿದೆ. ಭಾರತೀಯ ಬ್ಯಾಂಕ್‌ಗಳ ಸಂಘ ಬ್ಯಾಂಕ್‌ಗಳನ್ನು ನಿರ್ವಹಿಸುತ್ತದೆ. ಆದರೆ ನಮ್ಮ ಬಹುದಿನಗಳ ಬೇಡಿಕೆಗಳನ್ನೇ ಆಲಿಸುತ್ತಿಲ್ಲ.
– ಸಿ.ಎಚ್‌. ವೆಂಕಟಾಚಲಂ, ಎಐವಿಇಎ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next