ಮೈಸೂರು: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖೀಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ನೇತೃತ್ವದಲ್ಲಿ ಸರ್ಕಾರಿ ಸ್ವಾಮ್ಯದ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಶುಕ್ರವಾರ ಒಂದು ದಿನದ ಮುಷ್ಕರ ನಡೆಸಿದರು.
ಯುನೈಟೆಡ್ ಫೋರಂ ಆಫ್ ಬ್ಯಾಂಕ್ಸ್ ಯುನಿಯನ್(ಯುಎಫಿಯು) ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರದ ನಜ‚ರ್‌ಬಾದ್‌ನಲ್ಲಿರುವ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಎದುರು ಮುಷ್ಕರ ನಡೆಸಿದ ಬ್ಯಾಂಕ್ ಅಧಿಕಾರಿಗಳು, ಇಂಟರ್ ನ್ಯಾಷಿನಲ್ ಲೇಬರ್ ಆರ್ಗನೈಸೇಶನ್ ನಿಯಮದಂತೆ ಕನಿಷ್ಠ ವೇತನ ಸೂತ್ರವನ್ನು ಆಧರಿಸಿ ವೇತನ ಪರಿಷ್ಕರಣೆ ಮಾಡಲು ಒತ್ತಾಯಿಸಿದರು.
ಕೇಂದ್ರ ಸರ್ಕಾರ ನೌಕರರಿಗೆ ಸಂಬಳ ಪರಿಷ್ಕರಣೆ ನೀಡುವ ಸಂದರ್ಭದಲ್ಲಿ ಸಿಪಿಸಿ ಶಿಫಾರಸುಗಳ ಆಧಾರದ ಮೇಲೆ, ಅದೇ ರೀತಿಯ ತತ್ವಗಳನ್ನು ಅಳವಡಿಸಿಕೊಂಡಿದೆ. ಕನಿಷ್ಠ ವೇತನ ಸೂತ್ರವು ಅಗತ್ಯಕ್ಕೆ ತಕ್ಕಂತೆ ವೆಚ್ಚವನ್ನು ಪರಿಗಣಿಸಲಿದ್ದು, ಬ್ಯಾಂಕ್ ನೌಕರರು ಸೂಕ್ತ ಜೀವನ ನಡೆಸಲು ಸರಿಹೊಂದುವ ಕನಿಷ್ಠ ವೇತನವನ್ನು ನಿರ್ಧರಿಸುತ್ತದೆ. ಹೀಗಾಗಿ ಕನಿಷ್ಠ ವೇತನ ಸೂತ್ರವನ್ನು ಆಧರಿಸಿ ವೇತನ ಪರಿಷ್ಕರಣೆ ಮಾಡಬೇಕೆಂದು ಆಗ್ರಹಿಸಿದರು.
ಇನ್ನೂ ಕೇಂದ್ರ ಸರ್ಕಾರ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ವಿಲೀನದ ಪ್ರಯತ್ನವನ್ನು ತನ್ನ ಉದಾರೀಕರಣ ನೀತಿಯೊಂದಿಗೆ ಪ್ರಾರಂಭಿಸಿತು. ಇನ್ನು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಸ್ಥಿತಿಯನ್ನು ಹಾಗೇ ಉಳಿಸಿಕೊಳ್ಳಲು ಬ್ಯಾಂಕಿಂಗ್ ಒಕ್ಕೂಟಗಳು ಯಶಸ್ವಿಯಾಗಿದೆ.
ಆದರೆ ವಿಲೀನ ಪ್ರಕ್ರಿಯೆ ಮೂಲಕ ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡುವುದು ಸರ್ಕಾರದ ಕಾರ್ಯಸೂಚಿಯಾಗಿದೆ. ಆದರೆ, ರಾಜಕೀಯ ಇಚ್ಛೆಯ ಮೇರೆಗೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಸ್ವಾಧೀನಪಡಿಸಿಕೊಳ್ಳವುದು ಸರಿಯಲ್ಲ ಎಂದು ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿದರು.
ಉಳಿದಂತೆ ರನ್ನಿಂಗ್ ಸ್ಕೇಲ್ ಆಫ್ ಪೇ ನೀಡುವುದು, ಯಾವುದೇ ಷರತ್ತಿಲ್ಲದೆ ಶ್ರೇಣಿ 1 ಮತ್ತು ಶ್ರೇಣಿ 7ರವರೆಗಿನ ಎಲ್ಲಾ ಅಧಿಕಾರಿಗಳನ್ನು ಒಳಗೊಂಡಂತೆ ಬ್ಯಾಂಕುಗಳ ಮ್ಯಾಂಡೇಟ್ ಮಾಡುವುದು ಹಾಗೂ ಎಲ್ಲಾ ಬ್ಯಾಂಕ್‌ಗಳ ಅಧಿಕಾರಿಗಳಿಗೆ ವೈದ್ಯಕೀಯ ವಿಮಾ ಯೋಜನೆಯನ್ನು ನೀಡಬೇಕೆಂದು ಮುಷ್ಕರ ನಿರತ ಬ್ಯಾಂಕ್ ಅಧಿಕಾರಿಗಳು ಒತ್ತಾಯಿಸಿದರು.
ಮುಷ್ಕರದಲ್ಲಿ ಕೆನರಾ ಬ್ಯಾಂಕ್ ಅಧಿಕಾರಿಗಳ ಅಸೋಸಿಯೇಷನ್, ಭಾರತೀಯ ಸ್ಟೇಟ್ ಬ್ಯಾಂಕ್ ಅಧಿಕಾರಿಗಳ ಸಂಘ ಸೇರಿದಂತೆ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಮುಷ್ಕರದಲ್ಲಿ ಭಾಗವಹಿಸಿದ್ದರು.