ಢಾಕಾ: ದೇಶದ್ರೋಹದ ಆರೋಪ ಹೊರಿಸಿ ಕಳೆದ ಸೋಮವಾರ (ನ.25) ರಂದು ಹಿಂದೂ ಆಧ್ಯಾತ್ಮಿಕ ನಾಯಕ ಚಿನ್ಮಯ್ ಕೃಷ್ಣ ದಾಸ್ ಅವರನ್ನು ಬಾಂಗ್ಲಾದಲ್ಲಿ ಬಂಧಿಸಿದ್ದು ಇದೀಗ ಚಿನ್ಮಯ್ ಕೃಷ್ಣ ದಾಸ್ ಸೇರಿದಂತೆ ಹದಿನೇಳು ಮಂದಿಯ ಬ್ಯಾಂಕ್ ಖಾತೆಗಳನ್ನು ಮುಂದಿನ 30 ದಿನಗಳವರೆಗೆ ಸ್ಥಗಿತಗೊಳಿಸುವಂತೆ ಬಾಂಗ್ಲಾದೇಶದ ಹಣಕಾಸು ಅಧಿಕಾರಿಗಳು ಆದೇಶ ನೀಡಿರುವುದಾಗಿ ಬಾಂಗ್ಲಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬಾಂಗ್ಲಾದೇಶ ಹಣಕಾಸು ಗುಪ್ತಚರ ಘಟಕದ (ಬಿಎಫ್‌ಐಯು) ಆದೇಶದ ಮೇರೆಗೆ ಹಿಂದೂ ನಾಯಕರ ಬ್ಯಾಂಕ್ ಖಾತೆಗಳನ್ನು 30 ದಿನಗಳವರೆಗೆ ಸ್ಥಗಿತಗೊಳಿಸುವಂತೆ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಬಾಂಗ್ಲಾದೇಶದಲ್ಲಿ ನವೆಂಬರ್ ೨೫ ರಂದು ದೇಶದ್ರೋಹದ ಆರೋಪದ ಮೇಲೆ ಹಿಂದೂ ನಾಯಕ ಚಿನ್ಮಯ್ ಕೃಷ್ಣ ದಾಸ್ ಅವರನ್ನು ಬಾಂಗ್ಲಾದೇಶದಲ್ಲಿ ಬಂಧಿಸಲಾಗಿತ್ತು, ಇದನ್ನು ಖಂಡಿಸಿ ಬಾಂಗ್ಲಾದೇಶದಲ್ಲಿ ಹಿಂದೂಗಳು ಪ್ರತಿಭಟನೆಯನ್ನು ನಡೆಸಿದರು ಈ ನಡುವೆ ಘರ್ಷಣೆಗಳೂ ಕೂಡ ನಡೆಯಿತು. ಅಷ್ಟು ಮಾತ್ರವಲ್ಲದೆ ಬಾಂಗ್ಲಾದೇಶದಲ್ಲಿರುವ ಹಲವಾರು ಹಿಂದೂ ದೇವಾಲಯಗಳ ಮೇಲೆ ದಾಳಿಯೂ ನಡೆಯಿತು.
ಇನ್ನು ಹಿಂದೂ ನಾಯಕ ಚಿನ್ಮಯ್ ಕೃಷ್ಣ ದಾಸ್ ಬಂಧನ ನ್ಯಾಯ ಸಮ್ಮತವಲ್ಲ ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ ಆಗ್ರಹಿಸಿದ್ದಾರೆ.
ಇದನ್ನೂ ಓದಿ: Hubli: ನಮ್ಮ ನಾಯಕರ ತೇಜೋವಧೆಗೆ ಯತ್ನಿಸಿದರೆ ಒಟ್ಟಾಗಿ ಎದುರಿಸುತ್ತೇವೆ: ಎಚ್.ಕೆ.ಪಾಟೀಲ