ಢಾಕಾ: ಬಾಂಗ್ಲಾದೇಶದಲ್ಲಿ ಧಾರ್ಮಿಕ ಬಿಕ್ಕಟ್ಟು ಮುಂದುವರಿದಿದ್ದು, ದೇಶ ದ್ರೋಹ ಆರೋಪದ ಮೇಲೆ ಇಸ್ಕಾನ್ ಮಾಜಿ ಸದಸ್ಯ ಚಿನ್ಮಯ್ ಕೃಷ್ಣದಾಸ್ ಅವರ ಬಂಧನ ಖಂಡಿಸಿ ಪ್ರತಿಭಟನೆ ತೀವ್ರಗೊಳ್ಳುತ್ತಿರುವ ನಡುವೆಯೇ ಶುಕ್ರವಾರ (ನ.29) ಚಟ್ಟೋಗ್ರಾಮದಲ್ಲಿ ಮೂರು ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ.
ಬಂದರು ನಗರಿ ಸಮೀಪದ ಹರೀಶ್ ಚಂದ್ರ ಮುನ್ಸೆಫ್ ಲೇನ್ ನಲ್ಲಿರುವ ಶಾಂತೇಶ್ವರಿ ಮಾಟ್ರಿ ದೇವಸ್ಥಾನ, ಶೋನಿ ದೇವಾಲಯ ಮತ್ತು ಶಾಂತೇಶ್ವರಿ ಕಾಲಿಬರಿ ದೇವಾಲಯವನ್ನು ಗುರಿಯಾಗಿರಿಸಿ ದಾಳಿ ನಡೆಸಿ ಧ್ವಂಸಗೊಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ನೂರಾರು ಜನರ ಗುಂಪು ಘೋಷಣೆ ಕೂಗುತ್ತಾ ದೇವಾಲಯದ ಮೇಲೆ ಇಟ್ಟಿಗೆಗಳನ್ನು ಎಸೆದು ಹಾನಿಗೊಳಿಸಿರುವುದಾಗಿ ದೇವಾಲಯದ ಆಡಳಿತ ಮಂಡಳಿ ತಿಳಿಸಿರುವುದಾಗಿ ವರದಿಯಾಗಿದೆ.
ಉದ್ರಿಕ್ತ ಗುಂಪು ದೇವಾಲಯದ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿರುವುದಾಗಿ ಕೋಟ್ವಾಲಿ ಪೊಲೀಸ್ ಠಾಣಾಧಿಕಾರಿ ಅಬ್ದುಲ್ ಕರೀಂ ತಿಳಿಸಿದ್ದಾರೆ.
ಜುಮಾ ಪ್ರಾರ್ಥನೆಗೆ ನೂರಾರು ಮಂದಿ ಮೆರವಣಿಗೆಯಲ್ಲಿ ಆಗಮಿಸಿದ್ದ ಸಂದರ್ಭದಲ್ಲಿ ಹಿಂದೂ ವಿರೋಧಿ, ಇಸ್ಕಾನ್ ವಿರೋಧಿ ಘೋಷಣೆ ಕೂಗಿದ್ದರು. ನಂತರ ಏಕಾಏಕಿ ದಾಳಿ ನಡೆಸಿದ್ದು, ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಗಮನಿಸಿ ಸೇನೆಗೆ ಮಾಹಿತಿ ನೀಡಿರುವುದಾಗಿ ತಪನ್ ದಾಸ್ ತಿಳಿಸಿದ್ದಾರೆ.