Advertisement

Bangladesh ವಿಪಕ್ಷಗಳ ಬಹಿಷ್ಕಾರ ನಡುವೆ ಸಂಸತ್‌ ಚುನಾವಣೆ ಮುಕ್ತಾಯ

01:15 AM Jan 08, 2024 | Team Udayavani |

ಢಾಕಾ: ವಿಪಕ್ಷ ಬಾಂಗ್ಲಾದೇಶ ನ್ಯಾಶನಲಿಸ್ಟ್‌ ಪಾರ್ಟಿ (ಬಿಎನ್‌ಪಿ) ಮತ್ತದರ ಮಿತ್ರಪಕ್ಷಗಳ ಬಹಿಷ್ಕಾರದ ನಡುವೆ ರವಿವಾರ ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ಮುಕ್ತಾಯಗೊಂಡಿದೆ. ಸಣ್ಣಪುಟ್ಟ ಹಿಂಸಾಚಾರ, ಅಹಿತಕರ ಘಟನೆಗಳು ಅಲ್ಲಲ್ಲಿ ನಡೆದಿತ್ತು. ಮತ ಎಣಿಕೆ ಪ್ರಗತಿಯಲ್ಲಿದ್ದು, ಸೋಮವಾರ ಸ್ಪಷ್ಟ ಚಿತ್ರಣ ಲಭಿಸುವ ಸಾಧ್ಯತೆ ಇದೆ.

Advertisement

ಮತದಾನ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತಿ ದ್ದಂತೆಯೇ ಮತ ಎಣಿಕೆ ಆರಂಭಗೊಂಡಿದ್ದು ಬಹುತೇಕ ಸ್ಥಾನಗಳಲ್ಲಿ ಆಡಳಿತಾರೂಢ ಅವಾಮಿ ಲೀಗ್‌ನ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ. ಪ್ರಧಾನಿ ಶೇಖ್‌ ಹಸೀನಾ ಅವರು ಗೋಪಾಲ್‌ಗ‌ಂಜ್‌ – 3 ಕ್ಷೇತ್ರದಲ್ಲಿ 2,49,962 ಮತಗಳನ್ನು ಗಳಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ನಡೆದ 12ನೇ ಸಂಸತ್‌ ಚುನಾವಣೆ ಇದಾಗಿದ್ದು, ತಿಂಗಳುಗಳಿಗೂ ಮುನ್ನವೇ ಪ್ರಧಾನಿ ಶೇಖ್‌ ಹಸೀನಾ ನೇತೃತ್ವದ ಆಡಳಿತಾರೂಢ ಆವಾಮಿ ಲೀಗ್‌ನ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಮಾಜಿ ಪ್ರಧಾನಿ, ಖಾಲಿದಾ ಜಿಯಾ ನೇತೃತ್ವದ ಬಿಎನ್‌ಪಿ ಸಹಿತ ವಿವಿಧ ವಿಪಕ್ಷಗಳು ಈ ಚುನಾ ವಣೆಯನ್ನು ಬಹಿಷ್ಕರಿಸಿದ್ದವು. ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಖಾಲಿದಾ ಜಿಯಾ ಈಗ ಗೃಹಬಂಧನ ದಲ್ಲಿದ್ದಾರೆ. ವಿಪಕ್ಷಗಳ ಬಹಿಷ್ಕಾರದ ಹಿನ್ನೆಲೆಯಲ್ಲಿ ಈ ಚುನಾವಣೆ ಬಹುತೇಕ ಏಕಪಕ್ಷೀಯವಾಗಿ ನಡೆದಿದೆ.

2009ರಿಂದೀಚೆಗೆ ದೇಶದಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲಿ ಅವಾಮಿ ಲೀಗ್‌ ಗೆಲುವು ಸಾಧಿಸುವ ಮೂಲಕ ದೇಶದಲ್ಲಿ ಪಾರಮ್ಯ ಮೆರೆದಿದೆ. ಈ ಬಾರಿಯ ಚುನಾವಣೆಯನ್ನು ಪ್ರಮುಖ ವಿಪಕ್ಷಗಳು ಬಹಿಷ್ಕರಿಸಿರುವ ಹಿನ್ನೆಲೆಯಲ್ಲಿ ಹಾಲಿ ಪ್ರಧಾನಿ ಶೇಖ್‌ ಹಸೀನಾ ಸತತ ನಾಲ್ಕನೇ ಅವಧಿಗೆ ಒಟ್ಟಾರೆಯಾಗಿ 5ನೇ ಬಾರಿಗೆ ಪ್ರಧಾನಿ ಹುದ್ದೆಗೇರುವುದು ನಿಚ್ಚಳವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next