ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ತಕ್ಷಣವೇ ಜಾರಿಗೆ ಬರುವಂತೆ ಚಂಡಿಕಾ ಹತುರುಸಿಂಘೆ (Chandika Hathurusinghe) ಅವರನ್ನು ಪುರುಷರ ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಸ್ಥಾನದಿಂದ ಅಮಾನತುಗೊಳಿಸಿದೆ.
ಶಿಸ್ತುಕ್ರಮದ ಆಧಾರದ ಮೇಲೆ ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ. ಜಿಂಬಾಬ್ವೆ, ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ನೊಂದಿಗೆ ಕೋಚಿಂಗ್ ಅನುಭವ ಹೊಂದಿರುವ ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ಫಿಲ್ ಸಿಮನ್ಸ್ (Phil Simmons) ಅವರು 2025 ರ ಚಾಂಪಿಯನ್ಸ್ ಟ್ರೋಫಿಯವರೆಗಿನ ಒಪ್ಪಂದದೊಂದಿಗೆ ಹಂಗಾಮಿ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಭಾರತದ ವಿರುದ್ದ ಬಾಂಗ್ಲಾದೇಶದ ನಿರಾಶಾದಾಯಕ ಸರಣಿಯ ನಂತರ ಈ ಮಹತ್ವದ ಬೆಳವಣಿಗೆ ನಡೆದಿದೆ. ಭಾರತ ಪ್ರವಾಸದಲ್ಲಿ ಬಾಂಗ್ಲಾದೇಶ ತಂಡವು ಬೃಹತ್ ಅಂತರದಿಂದ ಟೆಸ್ಟ್ ಮತ್ತು ಟಿ20 ಮಾದರಿಯಲ್ಲಿ ಸೋಲು ಕಂಡಿತು.
2023ರ ಏಕದಿನ ವಿಶ್ವಕಪ್ ಮತ್ತು 2024 ಟಿ20 ವಿಶ್ವಕಪ್ ನಲ್ಲಿ ಹತುರಸಿಂಘೆ ಅವರು ಬಾಂಗ್ಲಾದೇಶದ ಕೋಚ್ ಆಗಿ ಕೆಲಸ ಮಾಡಿದ್ದರು, ಆದರೆ ಎರಡೂ ಕೂಟಗಳಲ್ಲಿ ಬಾಂಗ್ಲಾದೇಶವು ನಿರೀಕ್ಷಿತ ಪ್ರದರ್ಶನ ನೀಡಿಲ್ಲ.
ಶ್ರೀಲಂಕಾದ ಮಾಜಿ ಆಲ್‌ರೌಂಡರ್ ಹತುರಸಿಂಘೆ ಅವರು 2014-17ರ ಅವಧಿಐಲ್ಲಿ ಮೊದಲ ಬಾರಿಗೆ ಬಾಂಗ್ಲಾದೇಶ ಕ್ರಿಕೆಟ್ ತಂಡದ ಕೋಚ್ ಆಗಿದ್ದರರು. 2023ರ ಜನವರಿಯಲ್ಲಿ ಮತ್ತೆ ಕೋಚ್ ಆಗಿ ಬಾಂಗ್ಲಾ ತಂಡಕ್ಕೆ ಸೇರಿದ್ದರು.